ಮಂಗಳೂರು, ನವೆಂಬರ್ 13: ಕರಾವಳಿ ಭಾಗದಲ್ಲಿ ಕಡಲಿಗೇನು ಕೊರತೆಯಿಲ್ಲ. ಆದ್ರೆ ಇಲ್ಲಿನ ಈಜುಪಟುಗಳಿಗೆ ರಾಷ್ಟ್ರೀಯ ಅಂತರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿಗಾಗಿ ಸುಸಜ್ಜಿತ ಈಜುಕೊಳವಿರಲಿಲ್ಲ. ದುಬಾರಿ ಹಣ ವೆಚ್ಚಮಾಡಿ ಇತರೆಡೆಗೆ ಹೋಗಬೇಕಾದ ಪರಿಸ್ಥಿತಿಯಿತ್ತು. ಆದ್ರೆ ಇದೀಗ ಆ ಕೊರತೆ ನೀಗಿದ್ದು ಮಂಗಳೂರಿನಲ್ಲೇ (Mangaluru) ಅಂತರಾಷ್ಟ್ರೀಯ ಮಟ್ಟದ ಈಜುಕೊಳ (Swimming pool) ನಿರ್ಮಾಣವಾಗಿದೆ. ಸಿಎಂ ಸಿದ್ದರಾಮಯ್ಯರಿಂದ (Siddaramaiah) ಉದ್ಘಾಟನೆಗಾಗಿ ಸಜ್ಜಾಗಿ ನಿಂತಿದೆ.
ಕಡಲನಗರಿ ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣವಾಗಿದೆ. ನಗರದ ಎಮ್ಮೆಕೆರೆಯಲ್ಲಿ ಸುಮಾರು 24.94 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಿಂದ ಈ ಸ್ವಿಮ್ಮಿಂಗ್ ಫೂಲ್ ಸಂಕೀರ್ಣ ನಿರ್ಮಿಸಲಾಗಿದೆ. ಅಂತರಾಷ್ಟ್ರೀಯ ಈಜು ಫೆಡರೇಶನ್ ಫೆನಾದ ನಕ್ಷೆಯನ್ನು ಮೂಲವಾಗಿರಿಸಿ ಈ ಸ್ವಿಮ್ಮಿಂಗ್ ಫೂಲ್ ನಿರ್ಮಸಲಾಗಿದೆ. ಸಾಮಾನ್ಯವಾಗಿ ಈಜುಕೊಳ ಕೆಲಭಾಗದಲ್ಲಿ ಇದ್ರೆ ಇಲ್ಲಿ ಸುಮಾರು ಏಳು ಮೀಟರ್ ಎತ್ತರದಲ್ಲಿ, ಎರಡನೇ ಮಹಡಿಯಲ್ಲಿ ಸ್ವಿಮ್ಮಿಂಗ್ ಫೂಲ್ ನಿರ್ಮಾಣ ಮಾಡಲಾಗಿದೆ. ಒಟ್ಟು ಮೂರು ಕೊಳಗಳಿದ್ದು, ಒಂದು ಸ್ಪರ್ಧೆಯ ಉದ್ದೇಶಕ್ಕಾದರೆ ಉಳಿದೆರಡು ಅಭ್ಯಾಸಕೊಳ, ಮಕ್ಕಳಿಗಾಗಿ ಇರುವ ಸಣ್ಣಕೊಳವಾಗಿದೆ. ಇದರ ಜೊತೆ ಪ್ರಥಮ ಚಿಕಿತ್ಸಾ ಕೊಠಡಿ, ಆಂಟಿ ಡೂಪಿಂಗ್, ತೀರ್ಪುಗಾರರು, ಅಧಿಕಾರಿಗಳ ಕೊಠಡಿ, ಶವರ್ ರೂಂ, ಡಾರ್ಮೆಟರಿ ಸೇರಿದಂತೆ ಎಲ್ಲಾ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗಿದೆ.
ತಳ ಅಂತಸ್ತಿನಲ್ಲಿ ಕಾರು, ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳಾವಕಾಶ ನಿಗದಿಪಡಿಸಲಾಗಿದೆ. ಈಜುಕೊಳದಲ್ಲಿ ನಡೆಯುವ ಸ್ಪರ್ಧೆಗಳನ್ನು ನೋಡಲು ಇರುವ ವೀಕ್ಷಕ ಗ್ಯಾಲರಿಗೆ ಬೃಹದಾದ ಫ್ಯಾನ್ ಅಳವಡಿಸಲಾಗಿದೆ. ಸದ್ಯ ಒಲಿಂಪಿಕ್ ದರ್ಜೆಯ ಈ ಈಜುಕೊಳ ಸಂಕೀರ್ಣದ ಕಾಮಗಾರಿ ಪೂರ್ತಿಯಾಗಿದ್ದು ಇದೇ ತಿಂಗಳ 24ರಂದು ಲೋಕಾರ್ಪಣೆಯಾಗಲಿದೆ. ಸಿ.ಎಂ ಸಿದ್ದರಾಮಯ್ಯ ಈಜುಕೊಳದ ಉದ್ಘಾಟನೆಯನ್ನು ಮಾಡಲಿದ್ದಾರೆ. ಇದೇ ಸಂದರ್ಭ ಮೂರು ದಿನಗಳ ಕಾಲ ನಡೆಯಲಿರುವ 19ನೇ ರಾಷ್ಟ್ರೀಯ ಹಿರಿಯರ ಈಜು ಚ್ಯಾಂಪಿಯನ್‌ಶಿಫ್‌ಗೆ ಇದೇ ಈಜುಕೊಳದಲ್ಲಿ ಚಾಲನೆಯನ್ನು ನೀಡಲಾಗುತ್ತೆ. ಈ ಸ್ಪರ್ಧೆಯಲ್ಲಿ 21 ರಾಜ್ಯಗಳ 800ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಮಂಗಳೂರು: ದಪ್ಪ ಇದ್ದೀನಿ, ಚನ್ನಾಗಿ ಕಾಣುತ್ತಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಎಂಬಿಬಿಎಸ್ ವಿದ್ಯಾರ್ಥಿನಿ
ಈಜುಕೊಳ ನಿರ್ಮಾಣವಾದ ಜಾಗ ಮೈದಾನವಾಗಿತ್ತು. ಹೀಗಾಗಿ ಇಲ್ಲಿ ಈಜುಕೊಳ ನಿರ್ಮಾಣಕ್ಕೆ ಪ್ರಾರಂಭದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ಇನ್ನುಳಿದ ಜಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಒಟ್ಟಿನಲ್ಲಿ ಈ ಈಜುಕೊಳ ಕರ್ನಾಟಕದಲ್ಲಿ ಸರ್ವರೀತಿಯ ವ್ಯವಸ್ಥೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ರಾಷ್ಟ್ರದ ಕೆಲವೇ ಸುಸಜ್ಜಿತ ಈಜುಕೊಳಗಳ ಸಾಲಿನಲ್ಲಿ ಒಂದು ಎಂಬುದು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ