Deepavali 2023: ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಗೂಡುದೀಪ ಸ್ಪರ್ಧೆಯ ಒಂದು ಝಲಕ್ ನೋಡಿ
Goodudeepa competition by Namma Kudla: ಈ ಗೂಡು ದೀಪಗಳನ್ನ ನೋಡೊದಿಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನರೂ ಬರ್ತಾರೆ. 23 ವರ್ಷಗಳ ಹಿಂದೆ ಕೇವಲ 10-20 ಗೂಡುದೀಪಗಳಿಂದ ಆರಂಭಗೊಂಡ ಈ ಸ್ಪರ್ಧೆ ಇಂದು ಸಾವಿರ ಸಂಖ್ಯೆಯನ್ನ ದಾಟಿದೆ. ಇನ್ನು ಈ ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸೋ ಪ್ರತಿಯೊಬ್ಬರಿಗೂ ಬಹುಮಾನ ನೀಡಿ ಪ್ರೋತ್ಸಾಹಿಸಿದ್ರೆ ಗೆದ್ದವ್ರಿಗೆ ಚಿನ್ನದ ನಾಣ್ಯ ನೀಡಿ ಗೌರವಿಸಲಾಗುತ್ತೆ.
ದೀಪಾವಳಿ (Deepavali 2023) ಅಂದ್ರೆ ಅದೊಂದು ದೀಪಗಳ, ಪಟಾಕಿ ಸದ್ದುಗಳ ಸಂಭ್ರಮ ಸಡಗರದ ಹಬ್ಬ. ಹೀಗಾಗಿಯೇ ದೀಪಗಳ ಹಬ್ಬ ದೀಪಾವಳಿಯನ್ನ ಸಂಭ್ರದಿಂದ ಆಚರಿಸಲಾಗುತ್ತೆ. ಇನ್ನು ದೀಪಾವಳಿ ಬಂತಂದ್ರೆ ಸಾಕು ಪ್ರತೀ ಮನೆಯಲ್ಲೂ ಆಕಾಶ ಬುಟ್ಟಿಗಳದ್ದೇ ಕಾರುಬಾರು. ಆದ್ರೆ ಮಂಗಳೂರಿನ ನಮ್ಮ ಕುಡ್ಲ ಅನ್ನೋ ಸಂಸ್ಥೆ ಮಾತ್ರ ಇಂತಹ ಗೂಡುದೀಪಗಳಿಗೆ ಸ್ಪರ್ಧೆ ನಡೆಸೋ ಮೂಲಕ ಪುರಾತನ ಸಂಸ್ಕೃತಿಯನ್ನ ಉಳಿಸೋ ಕೆಲಸ ಮಾಡ್ತಿದೆ. ಹಾಗಿದ್ರೆ ಬನ್ನಿ ಈ ಸ್ಪರ್ಧೆಯ ಒಂದು ಝಲಕ್ ನೋಡಿ ಬರೋಣ (Goodudeepa competition organized by Namma Kudla). ಎಲ್ಲಿ ನೋಡಿದ್ರೂ ನೇತು ಹಾಕಿರೋ ಬಣ್ಣ ಬಣ್ಣದ ಗೂಡು ದೀಪಗಳು. ಕೆಲವೊಂದು ಸಾಮಾನ್ಯ ಗೂಡುದೀಪಗಳಾದ್ರೆ ಇನ್ನೂ ಕೆಲವು ಆಧುನಿಕ ಶೈಲಿಯ ಗೂಡು ದೀಪಗಳು. ಹೌದು ಇದು ದೀಪಾವಳಿಯ ಶುಭ ಸಂದರ್ಭದಲ್ಲಿ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ (Mangalore Kudroli Gokarnanatheshwara temple) ಕಂಡು ಬಂದ ದೃಶ್ಯ.
ಹಾಗಂತ ದೇವಸ್ಥಾನದಲ್ಲಿ ದೀಪಾವಳಿ ಹಬ್ಬಕ್ಕಾಗಿ ಈ ಗೂಡುದೀಪಗಳನ್ನ ನೇತು ಹಾಕಲಾಗಿದೆ ಅಂತ ಅಂದುಕೊಂಡ್ರೆ ತಪ್ಪಾಗುತ್ತೆ. ಯಾಕಂದ್ರೆ ಇಲ್ಲಿ ನಡೆದಿದ್ದ ಗೂಡು ದೀಪಗಳ ಸ್ಪರ್ಧೆಗೆ ಅಂತ ಬಂದಿರೋ ಗೂಡು ದೀಪಗಳು ಇವು. ಮಂಗಳೂರಿನ ಕೇಬಲ್ ನೆಟ್‌ವರ್ಕ್ ಸಂಸ್ಥೆಯಾಗಿರೋ ನಮ್ಮ ಕುಡ್ಲ ಸಂಸ್ಥೆ ಈ ಗೂಡು ದೀಪದ ಸ್ಪರ್ಧೆಯನ್ನ ಏರ್ಪಡಿಸಿಕೊಂಡು ಬಂದಿದೆ. ಆಧುನಿಕತೆಗೆ ಒಗ್ಗಿಕೊಳ್ಳುತ್ತಿರೋ ಜನರಿಗೆ ಹಿಂದೆ ಮನೆಯಲ್ಲೇ ತಯಾರು ಮಾಡುತ್ತಿದ್ದ ಗೂಡುದೀಪಗಳ ತಯಾರಿ ಹೇಗೆ ಅನ್ನೋದೇ ಮರೆತು ಹೋಗಿದೆ. ಹೀಗಾಗಿ ಜನರಲ್ಲಿ ಗೂಡು ದೀಪಗಳ ತಯಾರಿ ಬಗ್ಗೆ ಆಸಕ್ತಿ ಮೂಡಲಿ ಅಂತ ಈ ಸ್ಪರ್ಧೆಯನ್ನ ಏರ್ಪಡಿಸಲು ಆರಂಭಿಸಿದ್ರು. ಹೀಗೆ ಸ್ಪರ್ದೆಯ ರೂಪದಲ್ಲಿ ಆರಂಭಗೊಂಡಿರೋ ಈ ಗೂಡುದೀಪಗಳ ಸ್ಪರ್ದೆಗೆ ಇಂದು ಜಿಲ್ಲೆಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Also Read: ದಾವಣಗೆರೆಯ ಈ ಗ್ರಾಮದಲ್ಲಿ ದೀಪಾವಳಿ ಹಬ್ಬ ಆಚರಿಸೋಲ್ಲ, ಕಾರಣವೇನು?
ಈ ಸ್ಪರ್ಧೆಗೆ ಸಾಂಪ್ರದಾಯಿಕ, ಆಧುನಿಕ ಮತ್ತು ಮಾದರಿ ಗೂಡುದೀಪಗಳನ್ನ ತಯಾರು ಮಾಡಿ ಇಲ್ಲಿಗೆ ತರಲಾಗುತ್ತಿದೆ. ಒಂದಕ್ಕಿಂತ ಒಂದು ಚೆನ್ನಾಗಿದ್ದು ಗಮನ ಸೆಳೆಯುತ್ತಿರೋ ಈ ಗೂಡು ದೀಪಗಳನ್ನ ನೋಡೊದಿಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನರೂ ಕೂಡಾ ಬರ್ತಾರೆ. 23 ವರ್ಷಗಳ ಹಿಂದೆ ಕೇವಲ 10-20 ಗೂಡುದೀಪಗಳಿಂದ ಆರಂಭಗೊಂಡ ಈ ಸ್ಪರ್ಧೆ ಇಂದು ಸಾವಿರ ಸಂಖ್ಯೆಯನ್ನ ದಾಟಿದೆ.
ಒಂದೆಡೆ ಬಗೆಬಗೆಯ ಗೂಡು ದೀಪಗಳಿದ್ರೆ ಇನ್ನೊಂದೆಡೆ ಆಧುನಿಕ ರೀತಿಯಲ್ಲಿ ವಿವಿಧ ವಿನ್ಯಾಸದಲ್ಲಿ ರೂಪುಗೊಂಡ ಗೂಡುದೀಪಗಳು ಇಲ್ಲಿ ಕಾಣ ಸಿಗುತ್ತದೆ. ಇಲ್ಲಿರೋ ಎಲ್ಲಾ ಗೂಡು ದೀಪಗಳು ಕೂಡಾ ಒಂದಕ್ಕಿಂತ ಒಂದು ವಿಭಿನ್ನವಾಗಿರೋ ಕಾರಣ ಇದು ಜನರನ್ನ ಹೆಚ್ಚಾಗಿ ಆಕರ್ಶಿಸ್ತಾ ಇದೆ ಕೂಡಾ. ಅದ್ರಲ್ಲೂ ವೀಳ್ಯದೆಲೆ, ಕಾಳು, ಗಜಿಗಿಜಿ ಗಿಡದ ಕಸದಿಂದ ರಚಿಸಿರೋ ಗೂಡು ದೀಪಗಳಂತೂ ನೋಡುಗರನ್ನ ಸೆಳೆಯುತ್ತಿದೆ. ಇದರ ಜೊತೆ ದೈವ, ಯಕ್ಷಗಾನದ ಮಾದರಿ ಹೋಲುವ ಗೂಡು ದೀಪ ಅದ್ಬುತವಾಗಿತ್ತು.
ಇನ್ನು ಈ ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸೋ ಪ್ರತಿಯೊಬ್ಬರಿಗೂ ಬಹುಮಾನ ನೀಡಿ ಪ್ರೋತ್ಸಾಹಿಸಿದ್ರೆ ಗೆದ್ದವ್ರಿಗೆ ಚಿನ್ನದ ನಾಣ್ಯ ನೀಡಿ ಗೌರವಿಸಲಾಗುತ್ತೆ. ಇಲ್ಲಿದ್ದ ಅಷ್ಟು ಗೂಡುದೀಪಗಳು ನೋಡುಗರ ಕಣ್ಣಿಗ ಸಿಡಿವ ಪಟಾಕಿಗಿಂತಲೂ ಅಧಿಕ ಖುಷಿ ನೀಡಿದೆ ಅನ್ನೋದು ಅವರ ಭಾವನೆಯಿಂದಲೇ ವ್ಯಕ್ತವಾಗುತ್ತಿತ್ತು. ಒಟ್ಟಿನಲ್ಲಿ ಸಂಪ್ರದಾಯವನ್ನ ಉಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಗೂಡು ದೀಪ ಸ್ಪರ್ಧೆ ಜನರಲ್ಲಿ ಗೂಡು ದೀಪವನ್ನ ನಾವೇ ತಯಾರು ಮಾಡಬೇಕು ಅನ್ನೋ ಮನೋಭಾವವನ್ನ ಮೂಡಿಸಿದ್ರೆ ಅದಷ್ಟೇ ಸಾಕು ಅನ್ನೋದು ಸಂಘಟಕರ ಆಶಯ ಕೂಡ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ