ಚಾಮುಂಡೇಶ್ವರಿ ದರ್ಶನಕ್ಕಾಗಿ ಬೆಟ್ಟಕ್ಕೆ ಹೋಗುವ ಭಕ್ತಾದಿಗಳಿಗೆ ಮಹತ್ವದ ಮಾಹಿತಿ
ಆಷಾಢ ಮಾಸದಲ್ಲಿ ಚಾಮುಂಡಿಶ್ವೇರಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ. ಆಷಾಢ ಮಾಸದ ಶುಕ್ರವಾರ ಮತ್ತು ವರ್ಧಂತಿ ದಿನಗಳಂದು ಮತ್ತು ರವಿವಾರದಂದು ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹೀಗಾಗಿ, ಮೈಸೂರು ನಗರ ಪೊಲೀಸರು ಭಕ್ತಾದಿಗಳಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ.

ಮೈಸೂರು, ಜೂನ್ 21: ಇನ್ನೇನು ಕೆಲವೇ ದಿನಗಳಲ್ಲಿ ಆಷಾಢ ಮಾಸ (Ashada Masa) ಆರಂಭವಾಗಲಿದೆ. ಆಷಾಢ ಮಾಸದಲ್ಲಿ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ (Chamundi Hill) ತೆರಳಿ, ಚಾಮುಂಡೇಶ್ವರಿ (Chamundeshwari) ಅಮ್ಮನವರ ದರ್ಶನ ಪಡೆಯುತ್ತಾರೆ. ವಿಶೇಷವಾಗಿ ಆಷಾಢ ಶುಕ್ರವಾರ, ವರ್ಧಂತಿ ದಿನಗಳಂದು ಮತ್ತು ರವಿವಾರದಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಚಾಮುಂಡಿ ಬೆಟ್ಟಕ್ಕೆ ತೆರಳುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಮೈಸೂರು ಪೊಲೀಸರು ಕೆಲವು ಸೂಚನೆಗಳನ್ನು ನೀಡಿದ್ದಾರೆ. ಚಾಮುಂಡಿ ಬೆಟ್ಟದ ಮೇಲೆ ಸಾರ್ವಜನಿಕರ ವಾಹನ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಈ ಕುರಿತು ಮೈಸೂರು ನಗರ ಪೊಲೀಸರು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದ ಆಷಾಧ ಶುಕ್ರವಾರದಂದು ಸಾರ್ವಜನಿಕರ ಅನುಕೂಲಕ್ಕಾಗಿ ಲಲಿತ ಮಹಲ್ ಹೋಟೆಲ್ ಬಳಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಅಲ್ಲಿ ತಮ್ಮ ವಾಹನಗಳ್ಳನ್ನು ಪಾರ್ಕ್ ಮಾಡಿ ನಂತರ ಕೆಎಸ್ಆರ್ಟಿಸಿ ಬಸ್ಗಳ ಮೂಲಕ ಬೆಟ್ಟಕ್ಕೆ ಹೋಗಬೇಕು ಎಂದು ಮನವಿ ಮಾಡಿದ್ದಾರೆ. ಮತ್ತು ಪಾರ್ಕಿಂಗ್ ಸ್ಥಳ ಪರಿಶೀಲನೆಗಾಗಿ ಕ್ಯೂರ್ ಕೋಡ್ ಬಳಸಿ ಎಂದಿದ್ದಾರೆ.
ಚಾಮುಂಡೇಶ್ವರಿ ದರ್ಶನಕ್ಕೆ ಟಿಕೆಟ್ ದರ ನಿಗದಿ
ಆಷಾಢ ಶುಕ್ರವಾರ ಹಾಗೂ ಆಷಾಢ ಮಾಸದ ಶನಿವಾರ ಹಾಗೂ ಭಾನುವಾರಗಳಂದು ಸಾಮಾನ್ಯ ದರ್ಶನ ಉಚಿತವಾಗಿರುತ್ತದೆ. ಪ್ರವೇಶ ದರ್ಶನಕ್ಕೆ 50 ರೂ. ಹಾಗೂ ವಿಶೇಷ ದರ್ಶನಕ್ಕೆ 300 ರೂ. ಟಿಕೆಟ್ ನಿಗದಿ ಪಡಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಫೇಸ್ಬುಕ್ ಪೋಸ್ಟ್
ಇದನ್ನೂ ಓದಿ: ಆಷಾಢ ಶುಕ್ರವಾರ ಚಾಮುಂಡೇಶ್ವರಿ ದರ್ಶನಕ್ಕೆ ಹಣ ವಸೂಲಿ: ಸರ್ಕಾರದ ನಡೆಗೆ ಭುಗಿಲೆದ್ದ ಆಕ್ರೋಶ
ವಿಶೇಷ ದರ್ಶನ
ಇದೇ ಮೊದಲ ಬಾರಿಗೆ ವಿಶೇಷ ದರ್ಶನಕ್ಕಾಗಿ 2,000 ರೂ.ಗಳ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಎಸಿ ಬಸ್‌ನಲ್ಲಿ ಬೆಟ್ಟಕ್ಕೆ ತೆರಳಬಹುದು. ಜತೆಗೆ ವಿಶೇಷ ದರ್ಶನದ ವ್ಯವಸ್ಥೆ ಇರಲಿದೆ. ಲಾಡು ಪ್ರಸಾದ, ಮರುಬಳಕೆ ಮಾಡಬಹುದಾದ ವಾಟರ್ ಬಾಟಲ್ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ಸಿ ಮಹದೇವಪ್ಪ ತಿಳಿಸಿದ್ದರು. ವಿಶೇಷ ದರ್ಶನಕ್ಕಾಗಿ 2,000 ರೂ.ಗಳ ಟಿಕೆಟ್ ವ್ಯವಸ್ಥೆ ಮಾಡಿದ್ದಕ್ಕೆ ಬಿಜೆಪಿ ಮುಖಂಡರು ಮತ್ತು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 pm, Sat, 21 June 25