ಆಷಾಢ ಶುಕ್ರವಾರ ಚಾಮುಂಡೇಶ್ವರಿ ದರ್ಶನಕ್ಕೆ ಹಣ ವಸೂಲಿ: ಸರ್ಕಾರದ ನಡೆಗೆ ಭುಗಿಲೆದ್ದ ಆಕ್ರೋಶ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದರ್ಶನಕ್ಕೆ 2000 ರೂಪಾಯಿಗಳ ಟಿಕೆಟ್ ದರ ನಿಗದಿಪಡಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಮುಖಂಡ ಸುರೇಶ್ ಕುಮಾರ್ ಮತ್ತು ಕರ್ನಾಟಕ ಸೇನಾ ಪಡೆ ಈ ನಿರ್ಧಾರವನ್ನು ಖಂಡಿಸಿದೆ. ಇದು ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನ ಎಂದು ಆರೋಪಿಸಿದೆ.ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸಲಾಗಿದೆ.

ಬೆಂಗಳೂರು, ಜೂನ್.16: ಮೈಸೂರಿನ (Mysore) ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ (Chamundeshwari) ಅಮ್ಮನವರಿಗೆ ಆಷಾಢ ಮಾಸದ (Ashada Masa) ಶುಕ್ರವಾರದಂದು ವಿಶೇಷ ಪೂಜೆಗಳು ನೆರವೇರುತ್ತವೆ. ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆಯಲು ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಇದೇ ಮೊದಲ ಬಾರಿಗೆ ಆಷಾಢ ಶುಕ್ರವಾರದ ವಿಶೇಷ ದರ್ಶನಕ್ಕಾಗಿ ಚಾಮುಂಡಿ ಬೆಟ್ಟಕ್ಕೆ 2 ಸಾವಿರ ರೂ. ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಮಾಜಿ ಸಚಿವ, ಬಿಜೆಪಿ ಮುಖಂಡ ಸುರೇಶ್ ಕುಮಾರ್ ಮತ್ತು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಹಗಲು ದರೋಡೆ, ಕಾಂಗ್ರೆಸ್ ಸರ್ಕಾರ: ಸುರೇಶ್ ಕುಮಾರ್
ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಸುರೇಶ್ ಕುಮಾರ್ ಅವರು, “ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ 2000 ರೂ., ಹಗಲು ದರೋಡೆ, ಕಾಂಗ್ರೆಸ್ ಸರ್ಕಾರದ ಆಶೀರ್ವಾದ! ಇದು ಹಿಂದೂ ಭಕ್ತರ ಶ್ರದ್ಧೆಯ ‘ಪೆಸಾ ಪ್ಯಾಕೇಜ್’ ಅಲ್ಲದೆ ಮತ್ತೇನು? ಭಕ್ತಿಗೆ ತಕ್ಕಂತೆ ಪ್ಲಾನ್ ಹಾಕಿರುವ ಕಾಂಗ್ರೆಸ್ ಸರಕಾರದ ಈ ನಡೆ ಖಂಡನೀಯ. ಇದೇ ಧರ್ಮ ತಾರತಮ್ಯದ ಜೀವಂತ ಸಾಕ್ಷಿ. ಆಷಾಢ ಶುಕ್ರವಾರದ ಪವಿತ್ರತೆಯನ್ನು ಹಣದ ಸರದಾರಿಕೆ ಮಾಡಿರುವುದು ಧರ್ಮ ದ್ವೇಷಿ ಕಾಂಗ್ರೆಸ್ ಸರಕಾರದ ನಿಜ ಮುಖವಲ್ಲವೇ? ಹಿಂದು ಧರ್ಮ, ಭಕ್ತಿ, ನಂಬಿಕೆ ಇವೆಲ್ಲವನ್ನೂ ಲೆಕ್ಕಕೆ ತಗೊಳ್ಳದೆ ಭಕ್ತರಿಂದ ವಸೂಲಿ ಮಾಡುವ ಹೊಸ ಸೇಕ್ಯುಲರ್ ರಾಜಕೀಯವೋ?” ಎಂದು ಪ್ರಶ್ನಿಸಿದ್ದಾರೆ.
ಸುರೇಶ್ ಕುಮಾರ್ ಪೋಸ್ಟ್
ಉಳ್ಳವರು, ಇಲ್ಲದವರು ಎಂದು ತಾರತಮ್ಯ: ಕರ್ನಾಟಕ ಸೇನಾ ಪಡೆ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸೇವಾ ಶುಲ್ಕ ಹೆಚ್ಚಳಕ್ಕೆ ಕರ್ನಾಟಕ ಸೇನಾ ಪಡೆ ವಿರೋಧ ವ್ಯಕ್ತಪಡಿಸಿದೆ. ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ಅಮ್ಮನವರ ವಿಶೇಷ ದರ್ಶನಕ್ಕೆ 2,000 ರೂ. ನಿಗದಿ ಮಾಡುವ ಮೂಲಕ ಸರ್ಕಾರ ಉಳ್ಳವರು, ಇಲ್ಲದವರು ಅಂತ ತಾರತಮ್ಯ ಮಾಡುತ್ತಿದೆ ಎಂದು ಕರ್ನಾಟಕ ಸೇನಾ ಪಡೆ ಪ್ರತಿಭಟನೆ ನಡೆಸಿತು. ರಾಜ್ಯ ಸರ್ಕಾರ ಕೂಡಲೇ ಈ ನಿರ್ಧಾರ ಮರುಪರಿಶೀಲಿಸಬೇಕೆಂದು ಆಗ್ರಹಿಸಿದೆ.
ಇದನ್ನೂ ಓದಿ: ಆಷಾಢ ಮಾಸದಲ್ಲಿ ಈ ದಿನಗಳಂದು ಚಾಮುಂಡಿ ಬೆಟ್ಟಕ್ಕೆ ವಾಹನ ನಿರ್ಬಂಧ
ವಿಶೇಷ ದರ್ಶನ
ಇದೇ ಮೊದಲ ಬಾರಿಗೆ ವಿಶೇಷ ದರ್ಶನಕ್ಕಾಗಿ 2,000 ರೂ.ಗಳ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಎಸಿ ಬಸ್‌ನಲ್ಲಿ ಬೆಟ್ಟಕ್ಕೆ ತೆರಳಬಹುದು. ಜತೆಗೆ ವಿಶೇಷ ದರ್ಶನದ ವ್ಯವಸ್ಥೆ ಇರಲಿದೆ. ಲಾಡು ಪ್ರಸಾದ, ಮರುಬಳಕೆ ಮಾಡಬಹುದಾದ ವಾಟರ್ ಬಾಟಲ್ ನೀಡಲಾಗುವುದು. ಸಾಮಾನ್ಯ (ಉಚಿತ) ಸರತಿ ಸಾಲು, 300 ರೂ. ಟಿಕೆಟ್ ಸಾಲು ಸಹ ಇರಲಿದೆ. ಯಾವುದೇ ತೊಂದರೆಯಾಗದಂತೆ ಹೊಸ ಕ್ಯೂ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ಸಿ ಮಹದೇವಪ್ಪ ತಿಳಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ