ದೈವದ ಕೋಪಕ್ಕೆ ತುತ್ತಾದ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ಒಂದಿಲ್ಲೊಂದು ಸಮಸ್ಯೆ! ಮೈ ನವಿರೇಳಿಸುವಂತಿದೆ ಗುಳಿಗನ ಕಾರ್ಣಿಕ!
ದೈವಗಳ ನೆಲೆವೀಡು ಕರಾವಳಿಯಲ್ಲಿ ಒಂದಲ್ಲ ಒಂದು ದೈವ ಕಾರ್ಣಿಕಕ್ಕೆ ಸಾಕ್ಷಿಯಾಗುತ್ತಾ ಇರುತ್ತದೆ. ಇದೀಗ ಇಂತಹದ್ದೇ ಮೈ ನವಿರೇಳಿಸುವ ಘಟನೆಗೆ ಕಡಲ ನಗರಿ ಮಂಗಳೂರು ಸಾಕ್ಷಿಯಾಗಿದೆ. ತನ್ನನ್ನ ನಿರ್ಲಕ್ಷ್ಯ ಮಾಡಿ ನಿರ್ಮಾಣಕ್ಕೆ ಮುಂದಾದ ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ಧ ದೈವ ಮುನಿಸಿಕೊಂಡಿದೆ. ದೈವ ಮುನಿಸಿಕೊಂಡ ಪರಿಣಾಮ ಅಲ್ಲಿ ಒಂದಲ್ಲ ಒಂದು ಅವಾಂತರಗಳು ಸಂಭವಿಸುತ್ತಿದೆ. ಹಾಗಾದರೆ ಅಲ್ಲಿ ನಡೆದಿದ್ದೇನು?. ಈ ಸ್ಟೋರಿ ಓದಿ.
ದಕ್ಷಿಣ ಕನ್ನಡ, ಜೂ.21: ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ(Mangaluru) ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡಿಯುತ್ತಿವೆ. ಆದ್ರೆ, ಮಂಗಳೂರಿನ ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣ ಇದ್ದ ಸ್ಥಳದಲ್ಲಿ ಕಳೆದ ಮೂರು ವರ್ಷದಿಂದ ಕಾಮಗಾರಿಯೊಂದು ನೆನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣ ಗುಳಿಗೆ ದೈವದ ಮುನಿಸಂತೆ. ಹೌದು, ಬಹು ಅಂತಸ್ತಿನ ಕಾರ್ ಪಾರ್ಕಿಂಗ್ ಕಾಮಗಾರಿಯ ಈಗಿನ ಈ ಸ್ಥಿತಿಗೆ ಕಾರಣ ಇಲ್ಲೇ ಸಮೀಪದಲ್ಲಿ ಇರುವ ಶರವು ಮಹಾ ಗುಳಿಗ ದೈವ(Daiva) ಎನ್ನುವುದು ಸದ್ಯ ಚರ್ಚೆಯ ವಿಷಯವಾಗಿದೆ.
ದೊಡ್ಡ ಅನಾಹುತ ನಡೆಯಲಿದೆಯಾ?
ಇತ್ತೀಚೆಗೆ ಶರವು ಮಹಾ ಗುಳಿಗನಿಗೆ ನೀಡಲಾದ ಕೋಲದಲ್ಲಿ ಗುಳಿಗ ಇದೇ ಕಾಮಗಾರಿ ವಿಚಾರವಾಗಿ ತನ್ನ ಕೋಪವನ್ನು ಹೊರಹಾಕಿದೆಯಂತೆ. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಾತನ ನಿರ್ಲಕ್ಷ್ಯದ ಬಗ್ಗೆ ಶರವು ಮಹಾ ಗುಳಿಗ ಕೋಪದಿಂದ ಮುಂದೆ ದೊಡ್ಡ ಅನಾಹುತ ನಡೆಯಲಿದೆ ಎಂದು ಎಚ್ಚರಿಸಿದೆಯಂತೆ. ಈ ಎಚ್ಚರಿಕೆ ನೀಡಿದ ಬೆನ್ನಲ್ಲೇ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ತಡೆಗೋಡೆಯೊಂದು ಧರಾಶಾಹಿಯಾಗಿದೆ.
ಇದನ್ನೂ ಓದಿ:ಕರಾವಳಿ ಜನರ ಆರಾಧ್ಯ ದೈವ ಕೊರಗಜ್ಜನನ್ನು ಬಿಡದ ವಂಚಕರು; ನಕಲಿ ಖಾತೆ ಸೃಷ್ಟಿಸಿ ದೇಣಿಗೆ ಸಂಗ್ರಹ
ಕಾಮಗಾರಿ ಆರಂಭಿಸುವ ಮೊದಲೇ ಇಲ್ಲಿನ ಗುಳಿಗನಿಗೆ ಪೂಜೆ ಸಲ್ಲಿಸಿ ತಿಂಗಳ ಸಂಕ್ರಮಣದಂದು ಅಗೇಲು ನೀಡಲು ಗುತ್ತಿಗೆದಾರ ಕಂಪನಿಗೆ ಸಲಹೆ ನೀಡಲಾಗಿತ್ತು. ಆದ್ರೆ, ದೈವದ ಬಗ್ಗೆ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರ ದೈವಕ್ಕೆ ಕೊಡಬೇಕಾದ ಸೇವೆ ಕೊಡಲಿಲ್ಲ. ಇದು ಒಂದೆಡೆಯಾದರೆ, ಕನಿಷ್ಟ ದೈವಕ್ಕೆ ಕೈಮುಗಿದು ಕೆಲಸ ಆರಂಭಿಸಿಲ್ಲ. ಇದೇ ಕಾರಣದಿಂದ ಇದೀಗ ಆತನಿಗೆ ಅನಾರೋಗ್ಯ ಕೂಡ ಕಾಡಿದೆ ಎನ್ನುವ ವಿಚಾರ ಚರ್ಚೆಯಲ್ಲಿದೆ. ಇನ್ನು ಆತನ ಬದಲಿಗೆ ಗುಳಿಗನ ಕೋಲಕ್ಕೆ ಬಂದ ಆತನ ಮ್ಯಾನೇಜರ್‌ಗೆ ದೈವ ಆತನನ್ನೇ ಕರೆದುಕೊಂಡು ಬಾ ಎಂದು ಹೇಳಿದೆಯಂತೆ.
ಈ ಗುಳಿಗನ ಕೋಪದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಕಾಮಗಾರಿ ಸ್ಥಳದಲ್ಲಿ ಪಿಲ್ಲರ್ ಎದ್ದಿರೋದು ಬಿಟ್ರೆ ಬಹುಅಂತಸ್ತಿನ ಕಾರು ಪಾರ್ಕಿಂಗ್ ಕಟ್ಟಡ ಮೇಲೆ ಏಳೆಲೆ ಇಲ್ಲ. 70ಕೋಟಿ ರೂ. ವೆಚ್ಚದ ಈ ಕಾಮಗಾರಿಯ, ಕೇವಲ ಹತ್ತು ಶೇಕಡಾ ಮಾತ್ರ ಕೆಲಸವಾಗಿದೆ. ಇನ್ನಾದರೂ ಗುತ್ತಿಗೆದಾರ ಬಂದು ದೈವಕ್ಕೆ ಸೇವೆ ನೀಡಿದರೆ ಸರಿ ಹೋಗಬಹುದು ಎನ್ನುವುದು ಸ್ಥಳೀಯರ ಮಾತು. ಈಗಾಗಲೆ ಇಲ್ಲಿನ ಮಣ್ಣಿನಗೋಡೆ ಕುಸಿಯುತ್ತಿರುವುದು ಸುತ್ತ ಮುತ್ತ ಇರುವ ಕಟ್ಟಡಗಳ ಮಾಲೀಕರ, ಜನರ ಆತಂಕಕ್ಕೆ ಕಾರಣವಾಗಿರೋದಂತು ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ