ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ. ರಾವ್ ಯುವತಿಗೆ ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ್ದ ಪ್ರಕರಣ ಮಹತ್ವದ ಘಟ್ಟ ತಲುಪಿದೆ. ಡಿಎನ್‌ಎ ಪರೀಕ್ಷೆಯಲ್ಲಿ ಆತನೇ ಮಗುವಿನ ತಂದೆ ಎಂದು ದೃಢಪಟ್ಟಿದೆ. ಸಂತ್ರಸ್ತೆ ಕುಟುಂಬದವರು ಈಗ ಮದುವೆಗೆ ಆಗ್ರಹಿಸುತ್ತಿದ್ದು, ಕಾನೂನು ಹೋರಾಟದ ಬದಲಿಗೆ ಹಿಂದೂ ಸಂಘಟನೆಗಳು ಮಧ್ಯಪ್ರವೇಶಿಸಿ ಎರಡೂ ಕುಟುಂಬಗಳನ್ನು ಒಂದು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ
ಪತ್ರಿಕಾಗೋಷ್ಠಿಯಲ್ಲಿ ಕೆಪಿ ನಂಜುಂಡಿ ಹಾಗೂ ಸಂತ್ರಸ್ತೆಯ ಕುಟುಂಬದವರು (ಒಳಚಿತ್ರದಲ್ಲಿ ಆರೋಪಿ)
Updated By: Ganapathi Sharma

Updated on: Sep 27, 2025 | 3:14 PM

ಮಂಗಳೂರು, ಸೆಪ್ಟೆಂಬರ್ 27: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ (BJP) ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ.ರಾವ್ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದ ಪ್ರಕರಣ ಈಗ ಮಹತ್ವದ ಘಟ್ಟ ತಲುಪಿದೆ. ಯುವತಿಗೆ ಜನಿಸಿದ್ದ ಮಗುವಿನ ತಂದೆ ಆರೋಪಿ ಕೃಷ್ಣ ಜೆ.ರಾವ್ (Krishna J Rao) ಎಂಬುದು ಡಿಎನ್​ಎ ಪರೀಕ್ಷೆಯಿಂದ ದೃಢಪಟ್ಟಿರುವುದಾಗಿ ಯುವತಿಯ ಕುಟುಂಬದವರು ಹಾಗೂ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆಪಿ ನಂಜುಂಡಿ ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ನ್ಯಾಯಕ್ಕಾಗಿ ಸಂತ್ರೆಸ್ತೆ ಕುಟುಂಬ ಕಾನೂನು ಹೋರಾಟ ನಡೆಸುತ್ತಿತ್ತು. ಇದೀಗ ಪ್ರಕರಣ ಮಹತ್ವದ ಹಂತ ತಲುಪಿದೆ.

ಪುತ್ತೂರು ನ್ಯಾಯಾಧೀಶರ ಸಮ್ಮುಖದಲ್ಲಿ ಆರೋಪಿ ಕೃಷ್ಣ ಜೆ.ರಾವ್, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಸಂಗ್ರಹಿಸಲಾಗಿತ್ತು. ಬಳಿಕ ಬೆಂಗಳೂರಿನ ಪ್ರಯೋಗಾಲಯಕ್ಕೆ ರಕ್ತ ಸಂಗ್ರಹ ಮಾದರಿಯನ್ನು ಕಳುಹಿಸಲಾಗಿತ್ತು. ಆರೋಪಿ ಕೃಷ್ಣ ಜೆ.ರಾವ್ ಕುಟುಂಬ ಡಿಎನ್ಎ ಟೆಸ್ಟ್ ಮಾಡಿಸುವಂತೆ ಒತ್ತಾಯಿಸಿತ್ತು. ಇದೀಗ ಡಿಎನ್ಎ ಟೆಸ್ಟ್​​ ಪಾಸಿಟಿವ್ ಬಂದಿದೆ. ಕೃಷ್ಣ ಜೆ.ರಾವ್​​ನಿಂದಲೇ ಸಂತ್ರಸ್ತೆ ಗರ್ಭಾವತಿಯಾಗಿರುವುದು ಸಾಬೀತಾಗಿದೆ. ಹೀಗಾಗಿ ಹಿಂದೂ ಸಂಘಟನೆಗಳೇ ಮುಂದೆ ನಿಂತು ಇಬ್ಬರ ಮದುವೆ ಮಾಡಿಸಬೇಕು. ನಮಗೆ ಕಾನೂನು ಹೋರಾಟಕ್ಕೆ ಇಷ್ಟವಿಲ್ಲ. ಇಬ್ಬರು ಒಂದಾಗಿ ಬಾಳಬೇಕು ಎಂಬುದು ನಮ್ಮ ಇಚ್ಛೆ. ಹಿಂದುತ್ವದ ಭದ್ರಕೋಟೆ ಪುತ್ತೂರಿನಲ್ಲಿರುವ ಹಿಂದೂ ಮುಖಂಡರು ಮುಂದೆ ಬರಬೇಕು. ಎರಡೂ ಕುಟುಂಬಗಳನ್ನು ಒಂದು ಮಾಡುವ ಕೆಲಸ ಮಾಡಬೇಕು ಎಂದು ಕೆಪಿ ನಂಜುಂಡಿ ಆಗ್ರಹಿಸಿದ್ದಾರೆ.

ಬಿಜೆಪಿ ಮುಖಂಡನ ಪುತ್ರನ ಲವ್, ಸೆಕ್ಸ್ ಪ್ರಕರಣದ ಹಿನ್ನೆಲೆ

ಆರೋಪಿ ಕೃಷ್ಣ ಜೆ ರಾವ್ ಹಾಗೂ ಸಂತ್ರಸ್ತೆ ಶಾಲಾ ದಿನಗಳಿಂದಲೂ ಪರಿಚಿತರು ಎನ್ನಲಾಗಿದೆ. ಮದುವೆಯಾಗುವ ಭರವಸೆ ನೀಡಿ ಆರೋಪಿಯು ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮವಾಗಿ ಆಕೆ ಗರ್ಭವತಿಯಾಗಿದ್ದಳು. ನಂತರ ಕುಟುಂಬದವರು ಮಾತುಕತೆ ನಡೆಸಿ ಮದುವೆ ಮಾಡುವ ಭರವಸೆ ನೀಡಿದ್ದರು. ಅದಾದ ಬಳಿಕ ಯುವತಿಗೆ ಹೆರಿಗೆ ಸಮಯ ಬಂದಾಗ ಆರೋಪಿ ಕುಟುಂಬದವರು ಮದುವೆಗೆ ನಿರಾಕರಿಸಿದ್ದರು. ಹೀಗಾಗಿ ಸಂತ್ರಸ್ತೆ ಪೊಲೀಸ್ ದೂರು ನೀಡಿದ್ದಳು. ಬಳಿಕ ಎಫ್​ಐಆರ್ ದಾಖಲಾಗಿತ್ತು. ಇಷ್ಟರಲ್ಲಿ ಆರೋಪಿ ನಾಪತ್ತೆಯಾಗಿದ್ದ. ನಂತರ ಆತನನ್ನು ಪುತ್ತೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್​ದ.

ಸಂತ್ರಸ್ತೆ ನೀಡಿದ್ದ ದೂರಿನಲ್ಲೇನಿತ್ತು?

ಸಂತ್ರಸ್ತೆಯು ದೂರಿನಲ್ಲಿ ತಿಳಿಸಿದ್ದ ಪ್ರಕಾರ, 2024ರ ಅಕ್ಟೋಬರ್ 11 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಕೃಷ್ಣ ರಾವ್, ಸಂತ್ರಸ್ತೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಲು ಯತ್ನಿಸಿದ್ದ. ಯುವತಿ ವಿರೋಧಿಸಿದಾಗ ಮದುವೆಯಾಗುವುದಾಗಿ ನಂಬಿಸಿದ್ದ ಹಾಗೂ ಈ ವಿಷಯವನ್ನು ರಹಸ್ಯವಾಗಿಡುವಂತೆ ತಿಳಿಸಿದ್ದ. ಬಳಿಕ ಜನವರಿ ತಿಂಗಳಲ್ಲಿ ಮತ್ತೆ ಮನೆಗೆ ಕರೆಸಿ ಕೊಂಡು ದೈಹಿಕ ಸಂಪರ್ಕ ನಡೆಸಿದ್ದ. ಇದರಿಂದಾಗಿ ಯವತಿ ಗರ್ಭವತಿಯಾಗಿದ್ದಳು. ಬಳಿಕ ಆಕೆ ಈ ವಿಚಾರವನ್ನು ತನ್ನ ತಂದೆ ತಾಯಿಗೆ ತಿಳಿಸಿದ್ದಳು. ಮನೆಯವರು ಯುವಕನ ಮನೆಯವರಿಗೆ ವಿಚಾರ ತಿಳಿಸಿದಾಗ ಮಾತುಕತೆ ನಡೆದು ಮದುವೆಗೆ ಹುಡುಗನ ಕಡೆಯವರು ಒಪ್ಪಿಗೆ ನೀಡಿದ್ದರು. ಆದರೆ, ಕೃಷ್ಣ ರಾವ್ ಮದುವೆಯಾಗಲು ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ತಿಳಿಸಿದ್ದಳು.

ಇದನ್ನೂ ಓದಿ: ಪುತ್ತೂರು: ಯುವತಿಯ ಗರ್ಭಿಣಿ ಮಾಡಿ ಪರಾರಿಯಾಗಿದ್ದ ಬಿಜೆಪಿ ಮುಖಂಡನ ಪುತ್ರ ಕೊನೆಗೂ ಅರೆಸ್ಟ್, ಮೈಸೂರಿನಲ್ಲಿ ಸಿಕ್ಕಿಬಿದ್ದ ಆರೋಪಿ

ಯುವತಿ ನೀಡಿದ ದೂರಿನಂತೆ ಭಾರತೀಯ ನ್ಯಾಯ ಸಂಹಿತೆಯ 64(1) ಹಾಗೂ 69ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿತ್ತು. ಇಷ್ಟೆಲ್ಲ ಘಟನೆಗಳ ನಡುವೆ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಮಗುವಿನ ಡಿಎನ್​ಎ ಪರೀಕ್ಷೆಗೆ ಆರೋಪಿಯ ಕುಟುಂಬದವರು ಆಗ್ರಹಿಸಿದ್ದರು. ಅದರಂತೆ ಡಿಎನ್​​ಎ ಪರೀಕ್ಷೆ ನಡೆಸಲಾಗಿತ್ತು. ಇದೀಗ ವರದಿ ಪಾಸಿಟಿವ್ ಬಂದಿದೆ ಎಂದು ಸಂತ್ರಸ್ತೆಯ ಕುಟುಂಬದವರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Sat, 27 September 25