ಮಂಗಳೂರು: ಸುರತ್ಕಲ್ ಬೀಚ್ ಬಳಿ ಕನ್ನಡಿ ಹಾವಿನಂತಿರುವ ಸ್ಪಾಟೆಡ್ ಮೊರೈ ಈಲ್ಸ್ ಮೀನು ಪತ್ತೆ
ಅಪರೂಪದ ಸ್ಪಾಟೆಡ್ ಮೊರೈ ಈಲ್ಸ್ ಮೀನು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಬೀಚ್ ಬಳಿ ಪತ್ತೆಯಾಗಿದೆ. ಸ್ಥಳೀಯವಾಗಿ ಇದನ್ನು ಆರೋಳಿ ಮೀನು ಎಂದು ಕರೆಯಲಾಗುತ್ತದೆ.
ಮಂಗಳೂರು, ಜುಲೈ 18: ಅಪರೂಪ ಹಾಗೂ ಆಕರ್ಷಣೀಯವಾದ ಸ್ಪಾಟೆಡ್ ಮೊರೈ ಈಲ್ಸ್ ಮೀನು (Morai Eels Fish) ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಬೀಚ್ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಯಾಗಿರುವ ಬಗ್ಗೆ ವರದಿಯಾಗಿದೆ. ಇದರ ವೈಜ್ಞಾನಿಕ ಹೆಸರು ಜಿಮ್ನೋಥೊರಾಕ್ಸ್ ಮೊರಿಂಗಾ. ಇದನ್ನು ಸ್ಥಳೀಯವಾಗಿ ಆರೋಳಿ ಮೀನು ಎಂಬುದಾಗಿ ಕರೆಯಲಾಗುತ್ತದೆ. ತಕ್ಷಣ ನೋಡಲು ಕನ್ನಡಿ ಹಾವಿನಂತೆ ಕಂಡು ಬರುವ ಈ ಮೀನು ಕಪ್ಪು ಚುಕ್ಕೆಗಳಿಂದ ಬಹಳಷ್ಟು ಆಕರ್ಷಣೀಯವಾಗಿದೆ.
ಈ ಜಾತಿಯ ಮೀನು ಹೆಚ್ಚಾಗಿ ಕೆಂಪು ಬಣ್ಣದಿಂದ ಕೂಡಿರುತ್ತದೆ. ಆದರೆ ಈ ರೀತಿ ಚುಕ್ಕೆಗಳೊಂದಿಗೆ ಕಂಡುಬಂದಿರುವ ಈ ಮೀನು ಸ್ಥಳೀಯರಿಗೆ ಅಪರೂಪವಾಗಿದೆ. ಈ ಮೀನು ದ್ವೀಪದ ಬಳಿ ಇರುವ ಹವಳ ದಿಬ್ಬದಂತಹ ಸ್ಥಳಗಳಲ್ಲಿ ವಾಸ ಮಾಡುತ್ತದೆ. ಪ್ರಕ್ಷುಬ್ಧವಾದ ಕಡಲಿನ ಅಲೆಗಳ ಅಬ್ಬರದಿಂದ ತೀರಕ್ಕೆ ಬಂದಿರಬಹುದು ಎಂದು ಮಂಗಳೂರು ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಮಂಗಳೂರು ಪ್ರಾದೇಶಿಕ ಕೇಂದ್ರ ವಿಜ್ಞಾನಿ ರಾಜೇಶ್ ಕೆ.ಎಂ. ತಿಳಿಸಿದ್ದಾರೆ.
ಇದನ್ನೂ ಓದಿ: Pulasa Fish: ಗೋದಾವರಿ ನದಿಯಲ್ಲಿ ಸಿಕ್ಕಿದ 2 ಕಿಲೋ ಪುಲಸ ಮೀನು; ಹರಾಜಿನಲ್ಲಿ ದಾಖಲೆ ಬೆಲೆಗೆ ಮಾರಾಟ
ಈ ಮೀನು ಸಾಮಾನ್ಯವಾಗಿ 60 ಸೆ.ಮೀ. ಉದ್ದ ಬೆಳೆಯುತ್ತದೆ. ಗರಿಷ್ಠ 2.51 ಕೆ.ಜಿ. ತೂಗುತ್ತದೆ. ಈ ಮೀನು ಒಂಟಿಯಾಗಿ ವಾಸ ಮಾಡುತ್ತದೆ. ಉಷ್ಣ ವಲಯದ ನೀರಿನಲ್ಲಿ ವಾಸಿಸುವ ಈ ಮೀನುಗಳು ಮೊಟ್ಟೆ ಇಡಲು ವಲಸೆ ಹೋಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತುಳುವಿನಲ್ಲಿ ಈ ಮೀನುನನ್ನು ಮರಂಚಾ ಮೀನು ಎಂದು ಕರೆಯುತ್ತಾರೆ. ಕಲ್ಲು ಇರುವ ಪ್ರದೇಶದಲ್ಲಿ ಈ ಮೀನು ಗಾಳಕ್ಕೆ ಅಪರೂಪಕ್ಕೆ ಸಿಗುತ್ತದೆ. ಇದರ ಹಲ್ಲು ಹರಿತವಾಗಿರುತ್ತದೆ. ಇದನ್ನು ಸ್ಥಳೀಯರು ತಿನ್ನುವುದಿಲ್ಲ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ