ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಾಫಿ ಬೆಳ್ಳಾರೆಗೆ ಟಿಕೆಟ್ ಘೋಷಿಸಿದ ಎಸ್ಡಿಪಿಐ
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಾಫಿ ಬೆಳ್ಳಾರೆಗೆ ಎಸ್ಡಿಪಿಐ ಮುಂದಿನ ವಿಧಾನಸಭಾ ಚುನಾವಣೆಗೆ ಪುತ್ತೂರಿನಿಂದ ಟಿಕೆಟ್ ಘೋಷಿಸಿದೆ.
ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೇನು ಕೆಲ ತಿಂಗಳು ಬಾಕಿ ಇದೆ. ಪ್ರತಿಯೊಂದು ಪಕ್ಷಗಳು ಸಹ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಇತ್ತ ಎಸ್ಡಿಪಿಐ (SDPI) ಕೂಡ ಚುನಾವಣೆಗೆ ತಯಾರಿ ನಡೆಸಿದ್ದು, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಾಫಿ ಬೆಳ್ಳಾರೆ (Shafi Bellare) ಗೆ ಎಸ್ಡಿಪಿಐ ಮುಂದಿನ ವಿಧಾನಸಭಾ ಚುನಾವಣೆಗೆ ಪುತ್ತೂರಿನಿಂದ ಟಿಕೆಟ್ ಘೋಷಿಸಿದೆ. ಎಸ್ಡಿಪಿಐನ ಈ ನಡೆ ವಿವಾದ ಕೂಡ ಉಂಟುಮಾಡಿದೆ. ಸಾಕ್ಷ್ಯಾಧಾರ ಮುಂದಿಟ್ಟು ಎನ್ಐಎ ಶಾಫಿ ಬೆಳ್ಳಾರೆಯನ್ನು ಬಂಧಿಸಿದೆ. ಸದ್ಯ ಕೇಂದ್ರ ತನಿಖಾ ಸಂಸ್ಥೆಗಳ ವಶದಲ್ಲಿದ್ದು, ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಶಾಫಿ ಬೆಳ್ಳಾರೆ ಅವರನ್ನು ಕಣಕ್ಕಿಳಿಸುವುದಾಗಿ ಎಸ್ಡಿಪಿಐ ಕಾರ್ಯಕರ್ತರ ಸಮಾವೇಶ ದಲ್ಲಿ ಘೋಷಣೆ ಮಾಡಲಾಗಿದೆ. ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಖಾನ್ ಆಗಿದ್ದು, ಶಾಫಿ ಬೆಳ್ಳಾರೆ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಸದ್ಯ ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ NIA ಬಂಧನದಲ್ಲಿರುವ ಶಾಫಿ ಬೆಳ್ಳಾರೆ, ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಆರೋಪಿ ಶಾಫಿ ಬೆಳ್ಳಾರೆಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ SDPI ಭಾರಿ ವಿವಾದ ಸೃಷ್ಟಿಸಿದೆ.
ಇದನ್ನೂ ಓದಿ: Praveen Nettar: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಪತ್ತೆಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಎನ್ಐಎ
ಉಗ್ರರನ್ನು ಕರೆತಂದು ಟಿಕೆಟ್ ಕೊಡ್ತಾರೆ: ಆರ್.ಅಶೋಕ್
ಈ ಕುರಿತಾಗಿ ಬೆಂಗಳೂರು ನಗರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ಈಗಾಗಲೇ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದೆ. ಪಿಎಫ್‌ಐ ರೀತಿ ಎಸ್ಡಿಪಿಐ ಸಂಘಟನೆ ಕೂಡ ಬ್ಯಾನ್ ಮಾಡಬೇಕು. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸುತ್ತೇನೆ. SDPI ಸಂಘಟನೆಯವರು ಉಗ್ರರನ್ನು ಕರೆತಂದು ಟಿಕೆಟ್ ಕೊಡ್ತಾರೆ. ಆಗ ಅವರಿಗೂ ಭದ್ರತೆ ಕೊಡಬೇಕಾಗುತ್ತೆ. ಬಳಿಕ ಅವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ಗೆ ಹೋಗ್ತಾರೆ. ಪ್ರವೀಣ್ ಹತ್ಯೆಯಲ್ಲಿ ಭಾಗಿಯಾದವನು ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ. SDPI ಸಂಘಟನೆ ದೇಶವಿರೋಧಿ ಚಟುವಟಿಕೆಯ ಅಂಗ ಎಂದು ವಾಗ್ದಾಳಿ ಮಾಡಿದರು.
20 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ NIA
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. 240 ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿರುವ ಒಟ್ಟು 1,500 ಪುಟಗಳ ಚಾರ್ಜ್ಶೀಟ್ ಅನ್ನು NIA ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಿದ್ದಾರೆ. ಕೊಲೆ ಪ್ರಕರಣ ಸಂಬಂಧ ಈವರೆಗೆ 14 ಆರೋಪಿಗಳನ್ನು ಬಂಧಿಸಿಲಾಗಿದ್ದು, 6 ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ಟಿವಿ9ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಶರಣ್ ಪಂಪ್ವೆಲ್ಗೆ ಸಂಕಷ್ಟ
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ಇತ್ತೀಚೆಗೆ ಉಳ್ಳಾಲದಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಹೇಳಿದ್ದರು. ಈ ವಿಚಾರವಾಗಿ ಫಾಜಿಲ್ ತಂದೆ ಉಮಾರ್ ಫಾರೂಕ್ ಮಂಗಳೂರು ಕಮಿಷನರ್ ಶಶಿಕುಮಾರ್ಗೆ ಶರಣ್ ಪಂಪ್ ವೆಲ್ನನ್ನು ಬಂಧಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿ ಮಾತನಾಡಿ, ಮಗನ ಹತ್ಯೆ ಕೇಸ್ನಲ್ಲಿ ಎಂಟು ಜನರನ್ನು ಬಂಧಿಸಿ ಕೋರ್ಟ್ಗೆ ಚಾರ್ಜ್ ಶೀಟ್ ಹಾಕಲಾಗಿದೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆ: ಶರಣ್ ಪಂಪ್ವೆಲ್
ಪ್ರಕರಣದ ಸೂತ್ರಧಾರಿಗಳ ತನಿಖೆಗೆ ನಾನು ಮನವಿ ಮಾಡುತ್ತಲೇ ಇದ್ದೇನೆ. ಆದರೆ ಈವರೆಗೆ ತನಿಖಾಧಿಕಾರಿ ಸೂತ್ರಧಾರಿ ಯಾರೆಂದು ತನಿಖೆ ನಡೆಸಿಲ್ಲ. ಇದೀಗ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ನನ್ನ ಮಗನ ಹತ್ಯೆಯನ್ನು ಸಮರ್ಥಿಸಿದ್ದಾನೆ ಎಂದು ಉಮಾರ್ ಫಾರೂಕ್ ಆರೋಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:36 pm, Mon, 13 February 23