ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆ: ಶರಣ್ ಪಂಪ್ವೆಲ್
ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆ ಮಾಡಲಾಗಿದೆ ಎಂದು ವಿಹೆಚ್ಪಿ ಮುಖಂಡ ಶರಣ್ ಪಂಪ್ವೆಲ್ ಹೇಳಿದ್ದಾರೆ. ಉಳ್ಳಾಲದಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ (Praveen Nettaru Murder) ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆಯಾಗಿದೆ (Fazil Murder) ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ (Sharan Pumpwell) ಹೇಳಿದ್ದಾರೆ. ಉಳ್ಳಾಲದಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಮಾತನಾಡಿದ ಅವರು, ಅಗತ್ಯ ಬಿದ್ದರೆ ಭಜರಂಗದಳ ಹೋರಾಟ ಮಾಡುತ್ತದೆ, ಕೆಲವೊಮ್ಮೆ ನಾವು ನುಗ್ಗಿ ಹೊಡೆಯುತ್ತೇವೆ. ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಹಿಂದೂ ಸಮಾಜ ಕಣ್ಣೀರಲ್ಲಿ ಮುಳುಗಿತ್ತು. ಇಡೀ ಜಿಲ್ಲೆ ಒಬ್ಬ ಉತ್ತಮ ಕಾರ್ಯಕರ್ತನ ಬಲಿದಾನಕ್ಕೆ ಬೇಸರ ಪಟ್ಟಿತ್ತು. ಆಗ ನಮ್ಮ ಕಾರ್ಯಕರ್ತರು ಅವನ ಬಲಿದಾನ ನೋಡಿ ಸುಮ್ಮನೆ ಕೂರಲಿಲ್ಲ. ಸುರತ್ಕಲ್ಗೆ ಹೋಗಿ ನುಗ್ಗಿ ನುಗ್ಗಿ ಹೊಡೆದರು. ಅದು ನಮ್ಮ ಶೌರ್ಯ. ಸುರತ್ಕಲ್ನಲ್ಲಿ ಹೊಡೆದ ವಿಡಿಯೋವನ್ನ ಎಲ್ಲರೂ ವಿಡಿಯೋದಲ್ಲಿ ನೋಡಿದ್ದೀರಾ ಎಂದು ಹೇಳಿದರು.
ಬಾಬರಿ ಮಸೀದಿಯನ್ನು ಕೆಡವಿದ ನೆನಪಿನಾರ್ಥ ನಡೆಯುತ್ತಿರುವ ಶೌರ್ಯ ಯಾತ್ರೆಯಲ್ಲಿ ಮಾತನಾಡಿದ ಅವರು, ಗುಜರಾತ್ನಲ್ಲಿ ನಡೆದಿದ್ದು ನರಮೇಧ ಅಲ್ಲ, ಅಲ್ಲಿ ನಡೆದಿದ್ದು ಹಿಂದುಗಳ ಶೌರ್ಯ, ಅದು ನಮ್ಮ ಪರಾಕ್ರಮ ಎಂದು ಹೇಳಿದ ಶರಣ್ ಪಂಪ್ವೆಲ್, ಪ್ರವೀಣ್ ನೆಟ್ಟಾರು ಮಾತ್ರವಲ್ಲ ಇನ್ನೂ ಕೆಲವು ಹಿಂದೂ ಕಾರ್ಯಕರ್ತರ ಹೆಸರು ಪಿಎಫ್ಐ ಟಾರ್ಗೆಟ್ ಲಿಸ್ಟ್ನಲ್ಲಿತ್ತು ಅಂತ ಎನ್ಐಎ ಹೇಳಿದೆ. ಆ ಸಂಘಟನೆ ಬ್ಯಾನ್ ಆಗಿದ್ದರೂ ಕಾರ್ಯಕರ್ತರೂ ಇನ್ನೂ ಜೀವಂತ ಇದ್ದಾರೆ. ಇನ್ನಷ್ಟು ನಮ್ಮ ಕಾರ್ಯಕರ್ತರ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ. ಆದರೆ ನಾನು ಆ ಜಿಹಾದ್ ನಾಯಿಗಳಿಗೆ ಎಚ್ಚರಿಕೆ ಕೊಡುತ್ತಾ ಇದ್ದೇನೆ. ಇನ್ನು ಮುಂದೆ ನಮ್ಮ ಕಾರ್ಯಕರ್ತರ ಹತ್ಯೆಯಾದ್ರೆ ಒಂದಕ್ಕೆ ಎರಡು, ಎರಡಕ್ಕೆ ನಾಲ್ಕೂ, ನಾಲ್ಕಕ್ಕೆ ಎಂಟಾಗುತ್ತದೆ. ನಮ್ಮ ಒಬ್ಬ ಕಾರ್ಯಕರ್ತನ ಮೇಲೆ ನೀವು ಹಲ್ಲೆ ಮಾಡಿದರೆ ನಿಮ್ಮ ಹತ್ತು ಜನರನ್ನ ನಾವು ಆಸ್ಪತ್ರೆಗೆ ಸೇರಿಸುತ್ತೇವೆ ಎಂದಿದ್ದಾರೆ.
ಹಿಂದೂ ಶಾಸಕ ಬಿಜೆಪಿ ಮಾತ್ರ ಅಲ್ಲ, ಕಾಂಗ್ರೆಸ್ನಲ್ಲಾದ್ರೂ ನಮ್ಮ ಬೆಂಬಲ ಇದೆ
ಉಳ್ಳಾಲದಲ್ಲಿ ಚುನಾವಣೆಗೋಸ್ಕರ ನಾವು ಕಾರ್ಯಕ್ರಮ ಮಾಡುತ್ತಿಲ್ಲ. ಆದರೆ ಉಳ್ಳಾಲದಲ್ಲಿ ಹಿಂದೂ ಶಾಸಕ ಆಯ್ಕೆಯಾಗಬೇಕು ಎನ್ನುವ ಸಂಕಲ್ಪ ನಮ್ಮದು. ಅದಕ್ಕಾಗಿ ನಾವು ಉಳ್ಳಾಲದಲ್ಲಿ ಹಿಂದೂ ಶಾಸಕನ ಆಯ್ಕೆಗಾಗಿ ಅಭಿಯಾನ ಮಾಡುತ್ತಿದ್ದೇವೆ. ಈ ಹಿಂದೂ ಶಾಸಕ ಬಿಜೆಪಿ ಮಾತ್ರ ಅಲ್ಲ, ಕಾಂಗ್ರೆಸ್ನಲ್ಲಾದ್ರೂ ನಮ್ಮ ಬೆಂಬಲ ಇದೆ. ಉಳ್ಳಾಲದ ಹಿಂದೂ ಕಾಂಗ್ರೆಸ್ಸಿಗರು ಎಷ್ಟು ದಿನ ಗುಲಾಮನ ಕಾಲ ಕೆಳಗೆ ಇರುತ್ತೀರಿ. ನಿಮಗೆ ತಾಕತ್ತಿದ್ದರೆ ಒಬ್ಬ ಹಿಂದೂವನ್ನ ಶಾಸಕನಾಗಿ ಗೆಲ್ಲಿಸಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಗುಜರಾತ ಗಲಭೆ ಹಿಂದುಗಳ ಪರಾಕ್ರಮದ ಸಂಕೇತ, ವಿವಾದಾತ್ಮಕ ಹೇಳಿಕೆ ನೀಡಿದ ಶರಣ್ ಪಂಪ್ವೆಲ್
ಸಿದ್ದರಾಮಯ್ಯ ಜೀವನದ ಮೊದಲ ಸತ್ಯವನ್ನು ಮೊನ್ನೆ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ ಆಗುತ್ತಿದೆ ಅಂತ ಸತ್ಯ ಹೇಳಿದ್ದಾರೆ. ಈ ಜಿಲ್ಲೆ ಹಿಂದುತ್ವದ ನೆಲ, ಈ ಮಣ್ಣಲ್ಲಿ ಹಿಂದುತ್ವ ಇದೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ, ಈ ಹಿಂದುತ್ವದ ಫ್ಯಾಕ್ಟರಿಯಲ್ಲಿ ನಾವು ದೇಶಕ್ಕೋಸ್ಕರ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯನವರೇ, ಕೇವಲ ದಕ್ಷಿಣ ಕನ್ನಡ ಜಿಲ್ಲೆ ಅಲ್ಲ, ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿ ಆಗಲಿದೆ ಎಂದರು.
ಇದಕ್ಕೂ ಮುನ್ನ ತುಮಕೂರಿನಲ್ಲಿ ನಡೆದ ಶೌರ್ಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಹಿಂದೂ ಸಮಾಜ ಯಾವತ್ತೂ ನಪುಂಸಕ ಸಮಾಜ ಅಲ್ಲ. ನಾವು ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದೇವೆ. ಒಂದು ಸಲ ಗುಜರಾತಿನ ಘಟನೆಯನ್ನು ನೆನೆಪು ಮಾಡಿಕೊಳ್ಳಿ, 59 ಜನ ಕರಸೇವಕರ ಹತ್ಯೆಗೆ ಪ್ರತಿಕಾರವಾಗಿ 2 ಸಾವಿರ ಜನರ ಹತ್ಯೆ ಮಾಡಿದ್ದೇವೆ. ಇದು ಹಿಂದೂಗಳ ಪರಾಕ್ರಮ. ಹಿಂದುಗಳು ಷಂಡರಲ್ಲ ಎಂದು ಈ ಘಟನೆ ತೋರಿಸುತ್ತದೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ