ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆ ಎಂದಿದ್ದ ಶರಣ್ ಪಂಪ್ವೆಲ್ಗೆ ಸಂಕಷ್ಟ
ಫಾಜೀಲ್ ಹತ್ಯೆ ವಿಚಾರದಲ್ಲಿ ಶರಣ್ ಪಂಪ್ ವೆಲ್ ಹೇಳಿಕೆ ವಿಚಾರವಾಗಿ ಶರಣ್ ಪಂಪ್ ವೆಲ್ ಬಂಧಿಸಿ ಕ್ರಮ ಕೈಗೊಳ್ಳುವಂತೆ ಫಾಜಿಲ್ ತಂದೆ ಮಂಗಳೂರು ಕಮಿಷನರ್ಗೆ ಆಗ್ರಹಿಸಿದ್ದಾರೆ.
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ (Praveen Nettaru Murder) ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆಯಾಗಿದೆ (Fazil Murder) ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ (Sharan Pumpwell) ಇತ್ತೀಚೆಗೆ ಉಳ್ಳಾಲದಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಹೇಳಿದ್ದರು. ಈ ವಿಚಾರವಾಗಿ ಫಾಜಿಲ್ ತಂದೆ ಉಮಾರ್ ಫಾರೂಕ್ ಮಂಗಳೂರು ಕಮಿಷನರ್ ಶಶಿಕುಮಾರ್ಗೆ ಶರಣ್ ಪಂಪ್ ವೆಲ್ನನ್ನು ಬಂಧಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿ ಮಾತನಾಡಿ, ಮಗನ ಹತ್ಯೆ ಕೇಸ್ನಲ್ಲಿ ಎಂಟು ಜನರನ್ನು ಬಂಧಿಸಿ ಕೋರ್ಟ್ಗೆ ಚಾರ್ಜ್ ಶೀಟ್ ಹಾಕಲಾಗಿದೆ. ಪ್ರಕರಣದ ಸೂತ್ರಧಾರಿಗಳ ತನಿಖೆಗೆ ನಾನು ಮನವಿ ಮಾಡುತ್ತಲೇ ಇದ್ದೇನೆ. ಆದರೆ ಈವರೆಗೆ ತನಿಖಾಧಿಕಾರಿ ಸೂತ್ರಧಾರಿ ಯಾರೆಂದು ತನಿಖೆ ನಡೆಸಿಲ್ಲ. ಇದೀಗ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ನನ್ನ ಮಗನ ಹತ್ಯೆಯನ್ನು ಸಮರ್ಥಿಸಿದ್ದಾನೆ ಎಂದು ಉಮಾರ್ ಫಾರೂಕ್ ಆರೋಪಿಸಿದರು.
ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ನಲ್ಲಿ ಯುವಕರು ಹತ್ಯೆ ಮಾಡಿದ್ದಾಗಿ ಭಾಷಣ ಮಾಡಿದ್ದಾನೆ. ಈ ಹತ್ಯೆ ಶರಣ್ ಪಂಪ್ ವೆಲ್ ಅಣತಿಯಂತೆ ನಡೆದಿರುವ ಅನುಮಾನ ಇದೆ. ಹೀಗಾಗಿ ತಕ್ಷಣ ಈತನನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದರು.
ಎಂಟು ಜನ ಒಬ್ಬನಿಗೆ ಹೊಡೆಯುವುದು ವೀರತನವಲ್ಲ: ಉಮಾರ್ ಫಾರೂಕ್
ನಿನ್ನೆಗೆ ನನ್ನ ಮಗ ಹತ್ಯೆಯಾಗಿ ಆರು ತಿಂಗಳಾಯಿತು. ಈ ಕೊಲೆಯ ಹಿಂದೆ ಇರುವ ಸೂತ್ರಧಾರ ಯಾರೆಂದು ಅಂದಿನಿಂದಲೂ ಕೇಳುತ್ತಿದ್ದೆ. ತುಮಕೂರಿನ ಭಾಷಣ ಕೇಳಿದ ಬಳಿಕ ಇದರ ಹಿಂದೆ ಯಾರಿದ್ದಾರೆಂದು ಸ್ಪಷ್ಟವಾಗಿದೆ. ಎಂಟು ಜನ ಒಬ್ಬನಿಗೆ ಹೊಡೆಯುವುದು ಅದು ವೀರತನವಲ್ಲ ಅವರು ಹೇಡಿಗಳು. ಹಿಂದೂಗಳು ಈ ರೀತಿ ಮಾಡಲ್ಲ, ಹಿಂದುತ್ವ ಎಂದು ಹೇಳುವರು ಈ ರೀತಿ ಮಾಡ್ತಾರೆ. ಪೊಲೀಸ್ ಕಮೀಷನರ್ಗೆ ಈ ಬಗ್ಗೆ ದೂರು ನೀಡಿದ್ದೇನೆ. ನನ್ನ ಮಗನ ಕೊಲೆಗೆ ಮೂಲ ಕಾರಣ ಶರಣ್ ಪಂಪ ವೆಲ್. ಸರಕಾರಕ್ಕೆ ಕರುಣೆ ಮಾನವೀಯತೆ ಏನು ಇಲ್ಲ.
ಶರಣ್ ಪಂಪ ವೆಲ್ಗೆ ಸವಾಲ್ ಹಾಕಿದ ಫಾಜಿಲ್ ತಂದೆ
ನನ್ನ ಮಗ ಸತ್ತಾಗ ಸರಕಾರದಿಂದ ಒಬ್ಬರೂ ಬಂದಿಲ್ಲ ಸರಕಾರದ ಮೇಲೆ ನಂಬಿಕೆ ಇಲ್ಲ. ಈ ಪ್ರಕರಣದಲ್ಲಿ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ. ಶರಣ್ ಪಂಪ ವೆಲ್ ಅಪ್ಪನಿಗೆ ಹುಟ್ಟಿರೋದು ಹೌದಾದರೆ ನನ್ನನ್ನು ಕೊಲೆ ಮಾಡಲು ಒಬ್ಬನೇ ಬರಲಿ ಎಂದು ಸವಾಲು ಹಾಕಿದರು. ಹಿಂದೂ ಮುಸ್ಲಿಂ ಎಂದು ಗಲಾಟೆ ಮಾಡಿಸಿ ಸಾಯಿಸಬೇಡಿ. ಇವನಿಗೆ ಹಿಂದೂಗಳು ಎಂದು ಹೇಳುವ ಯೋಗ್ಯತೆಯಿಲ್ಲ. ಶರಣ್ ಪಂಪುವೆಲ್ ಗಂಡಸು ಆಗಿದ್ರೆ ಈ ರೀತಿ ಮಾಡುತ್ತಿರಲಿಲ್ಲ. ಫಾಝಿಲ್ ತಂದೆಯಾಗಿ ದೂರು ಕೊಡುದು ನನ್ನ ಕರ್ತವ್ಯ. ಮೇಲೆ ಇರುವ ದೇವರೆ ನೋಡಿಕೊಳ್ಳುತ್ತಾನೆ ಎಂದು ಉಮಾರ್ ಫಾರೂಕ್ ಹೇಳಿದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆ: ಶರಣ್ ಪಂಪ್ವೆಲ್
ಈ ರೀತಿಯ ಹೇಳಿಕೆ ಕೊಡುವವರನ್ನು ಗಡಿಪಾರು ಮಾಡಿ: ಯು.ಟಿ ಖಾದರ್
ಶರಣ್ ಪಂಪು ವೆಲ್ ಹೇಳಿಕೆ ವಿಚಾರವಾಗಿ ವಿಪಕ್ಷ ಉಪನಾಯಕ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದು, ಈ ರೀತಿಯ ಹೇಳಿಕೆ ಕೊಡುವವರನ್ನು ಗಡಿಪಾರು ಮಾಡಿ ಎಂದು ಆಗ್ರಹಿಸಿದರು. ಕೊಲೆ ಘಟನೆಗಳಿಗೆ ಪ್ರೇರಣೆ ಕೊಡುವ ಹೇಳಿಕೆ ಸಮಾಜಕ್ಕೆ ಅತ್ಯಂತ ಅಪಾಯಕಾರಿ. ಈ ಹೇಳಿಕೆ ಕೊಡುವವರು ನಿಜವಾದ ದೇಶದ್ರೋಹಿಗಳು. ಸಮಾಜ ಒಗ್ಗಾಟಾಗಿರಬೇಕೆಂಬುದು ಸಮಾಜದ ನಿಲುವು. ಹಿಂದೂ, ಮುಸ್ಲಿಂ, ಕ್ರೈಸ್ಥ ಯಾರ ಕೊಲೆಯು ಆಗಬಾರದು ಎಂದು ಪ್ರಯತ್ನ ಪಡಬೇಕು. ಬಿಜೆಪಿಯವರು ಕೊಲೆ ಆಗುವುದಕ್ಕೆ ಕಾಯುತ್ತಿದ್ದಾರೆ. ಒಂದಾದರೆ ಎರಡು ಆಗಬೇಕೆಂಬ ಮನಸ್ಥಿತಿ ಯಾಕೆ ಎಂದು ಕಿಡಿಕಾರಿದರು.
ಕೊಲೆಯಾದ ಕುಟುಂಬಕ್ಕೆ ಮಾತ್ರ ಆ ಸಾವಿನ ನೋವು ಗೊತ್ತಿರುತ್ತದೆ. ಫಾಜಿಲ್ ಕೊಲೆ ಪ್ರಕರಣ ಮರು ತನಿಖೆಯಾಗಬೇಕು. ಈ ರೀತಿಯ ಹೇಳಿಕೆ ನೀಡುವವರನ್ನು ಗಡಿಪಾರು ಮಾಡಬೇಕು. ಮನೆಗೆ, ಊರಿಗೆ, ಜಿಲ್ಲೆಗೆ ಇಂತವರು ಭಾರ. ಇಂತಹ ಮೆಂಟಲ್ ಕೇಸ್ ಗಳನ್ನು ಇಟ್ಟುಕೊಂಡು ನಾವು ಯಾಕೆ ಜಿಲ್ಲೆ ಸುತ್ತಾಡಬೇಕು. ಮುಂದೆ ನಮ್ಮ ಸರ್ಕಾರ ಬಂದ್ರೆ ರಾಜ್ಯದಲ್ಲಿ ನಡೆದಿರುವ ಎಲ್ಲಾ ಕೊಲೆ ಪ್ರಕರಣಗಳನ್ನು ಮರು ತನಿಖೆ ಮಾಡುತ್ತೇವೆ. ನೈಜ ಅಪಾರಧಿಗಳು, ಪ್ರೇರಣೆ ಕೊಟ್ಟವರನ್ನು ಬಂಧಿಸುತ್ತೇವೆ ಎಂದು ಯು.ಟಿ ಖಾದರ್ ತಿಳಿಸಿದರು.
ಇದನ್ನೂ ಓದಿ: ಗುಜರಾತ ಗಲಭೆ ಹಿಂದುಗಳ ಪರಾಕ್ರಮದ ಸಂಕೇತ, ವಿವಾದಾತ್ಮಕ ಹೇಳಿಕೆ ನೀಡಿದ ಶರಣ್ ಪಂಪ್ವೆಲ್
ಶರಣ್ ಪಂಪುವೆಲ್ನನ್ನ ತಕ್ಷಣ ಬಂಧಿಸಬೇಕು: ಅಫ್ಸರ್ ಕೂಡ್ಲಿಪೇಟೆ
ಇನ್ನು ಸುರತ್ಕಲ್ ಫಾಜಿಲ್ ಹತ್ಯೆಯನ್ನು ಶರಣ್ ಪಂಪುವೆಲ್ ಸಮರ್ಥನೆ ಮಾಡಿದ ವಿಚಾರವಾಗಿ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೂಡ್ಲಿಪೇಟೆ ಪ್ರತಿಕ್ರಿಸಿದ್ದು, ಶರಣ್ ಪಂಪುವೆಲ್ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ. ಆದ್ರೆ ಈವರೆಗೆ ಅವರ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆಗೆ ಪರಿಜ್ಞಾನ ಇಲ್ವಾ ಎಂದು ಪ್ರಶ್ನಿಸಿದರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಕೊಲೆಯಲ್ಲಿ ಶರಣ್ ಪಂಪುವೆಲ್ ಕೈವಾಡ ಇರಬಹುದು. ತಕ್ಷಣ ಶರಣ್ ಪಂಪುವೆಲ್ ಬಂಧನ ಮಾಡಬೇಕು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:58 pm, Mon, 30 January 23