Shiradi Ghat: ಶಿರಾಡಿ ಘಾಟ್​ನಲ್ಲಿ ಸುರಂಗ ಮಾರ್ಗ ಸಾಧ್ಯವಿಲ್ಲ, ಚತುಷ್ಪಥದ ರಸ್ತೆ ನಿರ್ಮಾಣಕ್ಕೆ ಚಿಂತನೆ; ನಿತಿನ್ ಗಡ್ಕರಿ ಸ್ಪಷ್ಟನೆ

| Updated By: ಸುಷ್ಮಾ ಚಕ್ರೆ

Updated on: Dec 10, 2022 | 9:11 AM

ಶಿರಾಡಿ ಘಾಟ್​​ನಲ್ಲಿ ಸದ್ಯಕ್ಕೆ ಅಸ್ತಿತ್ವದಲ್ಲಿರುವ ದ್ವಿಪಥದ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಸಚಿವಾಲಯವು ನಿರ್ಧರಿಸಿದೆ.

Shiradi Ghat: ಶಿರಾಡಿ ಘಾಟ್​ನಲ್ಲಿ ಸುರಂಗ ಮಾರ್ಗ ಸಾಧ್ಯವಿಲ್ಲ, ಚತುಷ್ಪಥದ ರಸ್ತೆ ನಿರ್ಮಾಣಕ್ಕೆ ಚಿಂತನೆ; ನಿತಿನ್ ಗಡ್ಕರಿ ಸ್ಪಷ್ಟನೆ
ನಿತಿನ್ ಗಡ್ಕರಿ
Follow us on

ಮಂಗಳೂರು: ಹಾಸನ ಮತ್ತು ದಕ್ಷಿಣ ಕನ್ನಡದ ನಡುವೆ ಸಂಪರ್ಕ ಕಲ್ಪಿಸುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟ್​ನಲ್ಲಿ (Shiradi Ghat) ನಿರ್ಮಿಸಲು ಉದ್ದೇಶಿಸಿರುವ ಹಸಿರು ಸುರಂಗ ಮಾರ್ಗ ಯೋಜನೆ ಸಾಧ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಗುರುವಾರ ಲೋಕಸಭೆಗೆ ತಿಳಿಸಿದ್ದಾರೆ. ಇದರ ಬದಲಾಗಿ ಶಿರಾಡಿ ಘಾಟ್​​ನಲ್ಲಿ 26-ಕಿಮೀ ಘಾಟ್ ಸ್ಟ್ರೆಚ್‌ನಲ್ಲಿ ಚತುಷ್ಪಥ ರಸ್ತೆಗಾಗಿ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಶಿರಾಡಿ ಘಾಟ್‌ನ ಇಂದಿನ ಸ್ಥಿತಿಗತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತಿನ್ ಗಡ್ಕರಿ, ಶಿರಾಡಿ ಘಾಟ್ ವಿಭಾಗದಲ್ಲಿ ಸುರಂಗಗಳ ನಿರ್ಮಾಣವು ಬೃಹತ್ ಹೂಡಿಕೆಯನ್ನು ಒಳಗೊಂಡಿರುತ್ತದೆ. ಆ ಹೂಡಿಕೆಗೆ ಮತ್ತು ಅಲ್ಲಿ ಸುರಂಗದ ಕಾಮಗಾರಿ ಮಾಡಲು ತೊಂದರೆ ಎದುರಾಗಬಹುದು ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ: Shiradi Ghat: ಶಿರಾಡಿ ಘಾಟ್​ ಓಪನ್; ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ವಾಹನ ಸಂಚಾರಕ್ಕೆ ಅನುಮತಿ

ಶಿರಾಡಿ ಘಾಟ್​​ನಲ್ಲಿ ಸದ್ಯಕ್ಕೆ ಅಸ್ತಿತ್ವದಲ್ಲಿರುವ ದ್ವಿಪಥದ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಸಚಿವಾಲಯವು ನಿರ್ಧರಿಸಿದೆ. ಇದಕ್ಕಾಗಿ NHAI ಈಗಾಗಲೇ DPR ಸಲಹೆಗಾರರನ್ನು ತೊಡಗಿಸಿಕೊಂಡಿದೆ. ಅದರ ವರದಿ ಪ್ರಗತಿಯಲ್ಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ: ಶಿರಾಡಿ ಘಾಟ್​ನಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮೊದಲ ಆದ್ಯತೆ: ದೆಹಲಿಯಲ್ಲಿ ಬಸವರಾಜ ಬೊಮ್ಮಾಯಿ ಹೇಳಿಕೆ

ಸುಮಾರು 8 ವರ್ಷಗಳ ಹಿಂದೆ ಶಿರಾಡಿ ಘಾಟ್​​ನಲ್ಲಿ ಸುರಂಗ ಬೈಪಾಸ್ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು. ನಿತಿನ್ ಗಡ್ಕರಿ ಫೆಬ್ರವರಿಯಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಮಾರು 14,000 ಕೋಟಿ ರೂ. ವೆಚ್ಚದಲ್ಲಿ ಬೈಪಾಸ್ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದರು. ಬೈಪಾಸ್ 6 ಸುರಂಗಗಳು ಮತ್ತು 7 ಸೇತುವೆಗಳನ್ನು ಒಳಗೊಂಡಿರಬೇಕು. ಇದರಿಂದಾಗಿ ಪ್ರಯಾಣದ ಸಮಯ ಸುಮಾರು 1 ಗಂಟೆ ಕಡಿಮೆಯಾಗುತ್ತದೆ. ಪ್ರಸ್ತುತ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣಕ್ಕೆ ಸುಮಾರು 9-10 ಗಂಟೆಗಳು ಬೇಕಾಗುತ್ತಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಮಾರನಹಳ್ಳಿ ನಡುವಿನ ಹೆದ್ದಾರಿ ಹದಗೆಟ್ಟ ಸ್ಥಿತಿಯಲ್ಲಿದೆ.

2018 ಮತ್ತು 2019ರಲ್ಲಿ ಸುರಿದ ಭಾರೀ ಮಳೆಗೆ ಶಿರಾಡಿ ಘಾಟ್​​ನ 26 ಕಿ.ಮೀ ಕಾಂಕ್ರೀಟ್ ಘಾಟ್ ರಸ್ತೆಗೆ ತೀವ್ರ ಹಾನಿಗೊಳಗಾಗಿದ್ದು, ಕನಿಷ್ಠ 21 ಕಡೆಗಳಲ್ಲಿ ಹಳ್ಳದ ಒಡ್ಡು ಕುಸಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ