ಮಂಗಳೂರು: ಕೊರೊನಾ ಹೆಮ್ಮಾರಿಯ ಹೊಡೆತಕ್ಕೆ ಸಿಲುಕಿ, ಅನಿವಾರ್ಯವಾಗಿ ಲಾಕ್ಡೌನ್ ಕೂಪದಲ್ಲಿ ಬಿದ್ದಿರುವ ಭೂಮಂಡಲ ನಲುಗಿ ಹೋಗಿದೆ. ಅತ್ತ ಕೈಯಲ್ಲಿ ಹಣವಿದ್ದರೂ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಮನುಕುಲಕ್ಕೆ ಎದುರಾಗಿದ್ದರೆ, ಮೂಕ ಪ್ರಾಣಿಗಳ ವೇದನೆ ಹೇಳತೀರದಾಗಿದೆ.
ಅನ್ನಕ್ಕಾಗಿ ಸಮುದ್ರ ತೀರಕ್ಕೆ ವಲಸೆ ಬಂದಿರುವ ಶ್ವಾನಗಳು. ಎತ್ತ ಹುಡುಕಿದರೂ ತುತ್ತು ಕೂಳು ಕೂಡ ಸಿಗದೆ ಪರದಾಡುತ್ತಿರುವಂತ ದೃಶ್ಯ ಕಡಲತಡಿ ಮಂಗಳೂರಿನಲ್ಲಿ ಕಂಡುಬಂದಿದೆ. ಲಾಕ್ಡೌನ್ನಿಂದ ಜನರು ಹೊರಗೆ ಓಡಾಡ್ತಿಲ್ಲ, ಹೀಗಾಗಿ ನಗರದ ಪ್ರದೇಶದಲ್ಲಿ ವಾಸವಿದ್ದ ಶ್ವಾನಗಳಿಗೆ ಆಹಾರವೇ ಸಿಗದಾಗಿದೆ. ಹೀಗಾಗಿ ಆಹಾರ ಹುಡುಕಿಕೊಂಡು ಮಂಗಳೂರಿನ ಹೊರವಲಯದ ಬೈಕಂಪಾಡಿ ಬೀಚ್ಗೂ ನುಗ್ಗಿಬಿಟ್ಟಿವೆ. ಸಿಗುತ್ತಿರುವ ಚೂರೇ ಚೂರು ಆಹಾರಕ್ಕೂ ಪರದಾಡುತ್ತಿವೆ, ಕಿತ್ತಾಡುತ್ತಿವೆ.
ಅತ್ತ ಅಂಗಡಿಯೂ ಇಲ್ಲ, ಇತ್ತ ಆಹಾರವೂ ಸಿಗ್ತಿಲ್ಲ: ಅಂದಹಾಗೆ ಮಹಾಮಾರಿ ಕೊರೊನಾ ಎಂಟ್ರಿ ಕೊಡ್ತಿದ್ದಂತೆ, ಮಾನವರ ಬದುಕಿನ ಮೇಲೆ ಮಾತ್ರ ಪರಿಣಾಮ ಬಿದ್ದಿಲ್ಲ. ಮೂಕ ಪ್ರಾಣಿಗಳ ಬದುಕು ಕೂಡ ಅಧೋಗತಿಯಾಗಿದೆ. ಈ ಹಿಂದೆ ಮಂಗಳೂರಿನಲ್ಲಿನ ಅಂಗಡಿಗಳು, ಇಲ್ಲ ಹೋಟೆಲ್ಗಳನ್ನ ನಂಬಿಕೊಂಡು ಬದುಕುತ್ತಿದ್ದ ಶ್ವಾನಪಡೆಗೆ ಆಹಾರವೇ ಸಿಗುತ್ತಿಲ್ಲ. ಇದರಿಂದಾಗಿ ನಲುಗಿಹೋಗಿರುವ ನಾಯಿಗಳು ಜೀವ ಉಳಿಸಿಕೊಳ್ಳಲು ಬೀಚ್ಗೆ ಬಂದಿವೆ. ದಡದಲ್ಲಿ ಸಿಗುವ ಮೀನನ್ನು ತಿಂದು ಜೀವ ಉಳಿಸಿಕೊಳ್ತಿವೆ.
ಒಟ್ನಲ್ಲಿ ಜನರು ರೋಡ್ಗೆ ಬಾರದಿದ್ದನ್ನ ನೋಡಿ ಮೊದಲು ಕನ್ಫ್ಯೂಸ್ ಆಗಿದ್ದ ಶ್ವಾನಪಡೆಗೆ, ಕ್ರಮೇಣ ತಮಗೆ ಆಹಾರ ಕೂಡ ಸಿಗೋದಿಲ್ಲ ಅನ್ನೋದು ಗೊತ್ತಾಗಿ ಏರಿಯಾ ಬಿಟ್ಟು ವಲಸೆ ಬಂದಿವೆ. ಆಹಾರಕ್ಕಾಗಿ ಮನುಷ್ಯ ಮಾತ್ರ ಗುಳೆ ಹೋಗ್ತಾನೆ ಅಂತೇನಿಲ್ಲ, ಅನಿವಾರ್ಯವಾಗಿ ಶ್ವಾನಗಳು ಕೂಡ ಜೀವ ಉಳಿಸಿಕೊಳ್ಳಲು ಗುಳೆ ಹೊರಟಿವೆ. ಇತ್ತ ಸಂಬಂಧಪಟ್ಟವರು ಗಮನಹರಿಸಿ, ಹಸಿವಿನಿಂದ ಪರದಾಡುತ್ತಿರುವ ಶ್ವಾನಪಡೆಗೆ ಆಹಾರ ಒದಗಿಸಬೇಕಿದೆ.