ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರ ಹತ್ಯೆ ಪ್ರಕರಣ; 12 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರತಿಷ್ಠಿತ ಕೆವಿಜಿ ಶಿಕ್ಷಣ ಸಂಸ್ಥೆಗಳ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಎ.ಎಸ್ ರಾಮಕೃಷ್ಣ ಅವರನ್ನು 2011ರ ಎಪ್ರಿಲ್ 28ರಂದು ಕೊಚ್ಚಿ ಹತ್ಯೆ ಮಾಡಲಾಗಿತ್ತು. ಇದೀಗ ಬರೊಬ್ಬರಿ 12 ವರ್ಷಗಳ ನಂತರ ಹೈಕೋರ್ಟ್ ತೀರ್ಪು ನೀಡಿದೆ.
ಮಂಗಳೂರು, ಅ.05: ಸುಳ್ಯದ ಕೆವಿಜಿ ಶಿಕ್ಷಣ ಸಂಸ್ಥೆಗಳ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ (Principal) ರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, 12 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೌದು, ಪುತ್ತೂರಿನ ಸೆಷನ್ಸ್ ನ್ಯಾಯಾಲಯದ ತೀರ್ಪುನ್ನು ರದ್ದುಪಡಿಸಿದ ಹೈಕೋರ್ಟ್(High Court), ಹತ್ಯೆಯ ಆರೋಪಿಗಳನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿದೆ.
12 ವರ್ಷಗಳ ಹಿಂದೆ ಕರಾವಳಿಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಹತ್ಯೆ ಪ್ರಕರಣ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರತಿಷ್ಠಿತ ಕೆವಿಜಿ ಶಿಕ್ಷಣ ಸಂಸ್ಥೆಗಳ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಎ.ಎಸ್ ರಾಮಕೃಷ್ಣ ಅವರನ್ನು 2011ರ ಎಪ್ರಿಲ್ 28ರಂದು ಕೊಚ್ಚಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಹತ್ಯೆಗೀಡಾದ ಎ.ಎಸ್. ರಾಮಕೃಷ್ಣ ಅವರ ಸಹೋದರ ಡಾ. ರೇಣುಕಾಪ್ರಸಾದ್ ಸೇರಿದಂತೆ ಏಳು ಜನ ಆರೋಪಿಗಳಿದ್ದರು. ಆದರೆ, ಏಳು ಆರೋಪಿಗಳನ್ನು ಖುಲಾಸೆಗೊಳಿಸಿ 2016ರಲ್ಲಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿತ್ತು.
ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ
ಇದಾದ ನಂತರ ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಲಾಗಿದ್ದು, ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮೇಲ್ಮನವಿ ಸಲ್ಲಿಸಿದ್ದರು. ಸುಧೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಪುತ್ತೂರು ಸೆಷನ್ಸ್ ಕೋರ್ಟ್ ತೀರ್ಪು ರದ್ದು ಪಡಿಸಿದೆ. ಡಾ.ರೇಣುಕಾಪ್ರಸಾದ್ ಮತ್ತು ಇತರರು ಕೊಲೆಯಲ್ಲಿ ಭಾಗಿಯಾಗಿರುವುದು ಸಾಕ್ಷ್ಯಾಧಾರ ಸಹಿತ ದೃಢವಾಗಿದೆ. ಆದ್ದರಿಂದ ಕೊಲೆ ಮತ್ತು ಅಪರಾಧಿಕ ಒಳಸಂಚಿನ ಆರೋಪದಡಿ ನ್ಯಾಯಮೂರ್ತಿ ಶ್ರೀನಿವಾಸ್, ಹರೀಶ್ ಕುಮಾರ್ ಹಾಗೂ ಜಿ.ಬಸವರಾಜ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠವು ದೋಷಿ ಎಂದು ತೀರ್ಪು ನೀಡಿದೆ.
ಜೀವಾವಧಿ ಶಿಕ್ಷೆ ಪ್ರಕಟ
ಆರೋಪಿಗಳಾಗಿದ್ದ ಡಾ.ರೇಣುಕಾ ಪ್ರಸಾದ್, ಮನೋಜ್ ರೈ, ಎಚ್.ಆರ್. ನಾಗೇಶ್, ವಾಮನ ಪೂಜಾರಿ, ಶರಣ್ ಪೂಜಾರಿ ಮತ್ತು ಶಂಕರಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಏಳನೇ ಆರೋಪಿಯಾಗಿದ್ದ ಎಚ್.ಯು. ನಾಗೇಶ್ ಕುಮಾರ್ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
ಇದನ್ನೂ ಓದಿ:ದೆಹಲಿ: ರಸ್ತೆಯಲ್ಲಿ ಯುವಕನನ್ನು ಅಡ್ಡಗಟ್ಟಿ, ಚೂರಿಯಿಂದ ಇರಿದು, ಕಲ್ಲಿನಿಂದ ತಲೆಯ ಜಜ್ಜಿ ಬರ್ಬರ ಹತ್ಯೆ
ಹತ್ಯೆಗೆ ಸುಫಾರಿ ನೀಡಿದ್ದ ಸಹೋದರ
ಇನ್ನು ಕುರುಂಜಿ ವೆಂಕಟರಮಣ ಗೌಡ ಎಂಬುವವರು ಕೆವಿಜಿ ಎಜುಕೇಷನ್ ಸಂಸ್ಥೆಯ ಸಂಸ್ಥಾಪಕರಾಗಿದ್ದರು. ಇವರ ಹಿರಿಯ ಪುತ್ರ ಕೆ.ವಿ ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್ ಅವರಿಗೆ ಆಡಳಿತ ವಹಿಸಲಾಗಿತ್ತು. ಮತ್ತೋರ್ವ ಪುತ್ರರಾಗಿದ್ದ ಮೃತ ಎ.ಎಸ್. ರಾಮಕೃಷ್ಣ ಅವರು ಕೆವಿಜಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾಗಿದ್ದರು. ಆಸ್ತಿ ಹೊಣೆಗಾರಿಕೆ ವಿಭಜನೆಯನ್ನು ರಾಮಕೃಷ್ಣ ಅವರ ಸಲಹೆ ಮೇರೆಗೆ ಮಾಡಲಾಗಿತ್ತು. ಹೀಗಾಗಿ ರೇಣುಕಾ ಪ್ರಸಾದ್ ಅವರು ರಾಮಕೃಷ್ಣ ಕೊಲೆಗೆ ಸುಪಾರಿ ನೀಡಿದ್ದರು. ಸದ್ಯ ಆರು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದ್ದು, ಎ1 ಆರೋಪಿ ರೇಣುಕಾ ಪ್ರಸಾದ್ ಶಿಕ್ಷೆಯ ಜೊತೆ ಮೃತರ ಪತ್ನಿಗೆ ಹತ್ತು ಲಕ್ಷ ಪರಿಹಾರ ಮೊತ್ತ ನೀಡಲು ಹೈಕೋರ್ಟ್ ಸೂಚನೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ