ಮಂಗಳೂರು: ಹಿಜಾಬ್ ವಿಚಾರದಲ್ಲಿ ಸಂಘರ್ಷಕ್ಕಿಳಿದ ಮಂಗಳೂರಿನ ರಥಬೀದಿ ದಯಾನಂದ ಪೈ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿ ಸಾಯಿ ಸಂದೇಶ್ಗೆ ಬೆದರಿಕೆ ಕರೆಗಳು ಬಂದಿವೆ. ಈತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಯಲ್ಲಿ ಸಕ್ರಿಯನಾಗಿದ್ದವನು ಎಂದು ಹೇಳಲಾಗಿದೆ. ವಿದೇಶಿ ಕಾಲ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸ್ಯಾಪ್ ಮೂಲಕ ಹತ್ತಾರು ಬೆದರಿಕೆ ಕರೆಗಳು ಬಂದಿವೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ‘ನಿನ್ನ ಫುಲ್ ಡಿಟೈಲ್ಸ್ ಸಿಕ್ಕಿದೆ, ಎಲ್ಲಿಂದ ಬರ್ತೀಯಾ, ಎಲ್ಲಿಂದ ಹೋಗ್ತೀಯಾ. ನಿನ್ನ ತಾಯಿ ಪತಿವ್ರತೆ ಆಗಿದ್ರೆ ನಮ್ಮ ಕೈಯಿಂದ ತಪ್ಪಿಸು ನೋಡುವ. ಒಂದು ವಾರದೊಳಗೆ ನಿನ್ನ ಗೇಮ್ ಫಿನಿಶ್ ಮಾಡುತ್ತೇವೆ. ನೀನು ಜಾಸ್ತಿ ದಿನ ಇರಲ್ಲ, ಜೀವದ ಮೇಲೆ ಆಸೆ ಬಿಟ್ಟು ಬಿಡು’ ಅಂತೆಲ್ಲಾ ಮೆಸೇಜ್ಗಳು ಬಂದಿವೆ.
ಹಿಜಾಬ್ ವಿಚಾರವಾಗಿ ಕಳೆದ ಶುಕ್ರವಾರ (ಮಾರ್ಚ್ 4) ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಪರೀಕ್ಷೆಗೆ ಹಾಜರಾಗಲು ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನು ಸಾಯಿ ಸಂದೇಶ್ ಮತ್ತು ಕೆಲ ವಿದ್ಯಾರ್ಥಿಗಳು ಪ್ರಶ್ನಿಸಿದ್ದರು. ಈ ವೇಳೆ ಸಾಯಿ ಸಂದೇಶ್ಗೆ ‘ಕಾಲೇಜ್ ನಿನ್ನ ಅಪ್ಪಂದಾ’ ಎಂದು ವಿದ್ಯಾರ್ಥಿನಿ ಕೇಳಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಬಿವಿಪಿ ಕಾರ್ಯಕರ್ತನೂ ಆಗಿರುವ ವಿದ್ಯಾರ್ಥಿ ಸಾಯಿ ಸಂದೇಶ್ಗೆ ಕೊಲೆ ಬೆದರಿಕೆ ಬಂದಿದೆ.
ಕಿಟಕಿ ರಾಡ್ ಮುರಿದು ಕಳ್ಳತನ
ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಕಿಟಕಿ ರಾಡ್ ಮುರಿದು ಕಳ್ಳತನ ಮಾಡಲಾಗಿದೆ. ನಾರಾಯಣಪ್ಪ ಅವರಿಗೆ ಸೇರಿದ ಮನೆಯಲ್ಲಿ ಕೃತ್ಯ ನಡೆದಿದ್ದು, 2 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳನ್ನು ಕಳುವು ಮಾಡಲಾಗಿದೆ. ತುಮಕೂರಿನ ಸಂಬಂಧಿಕರ ಮನೆಗೆ ತೆರಳಿದ್ದ ಅವರು ವಾಪಸ್ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡ್ರಗ್ಸ್ ದಂಧೆ: ನಾಲ್ವರ ಬಂಧನ
ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ನಾಲ್ಕು ಮಂದಿಯನ್ನು ಬೆಂಗಳೂರಿನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ವಿದೇಶಿ ಪ್ರಜೆಗಳು, ಮಾದಕ ವ್ಯಸನಿ ಸೇರಿದಂತೆ ಒಟ್ಟು ನಾಲ್ವರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಊಜಾ, ಎಕೆಚುಕ್ವು ಡೇನಿಯಲ್ ತಸ್ಲೀಂ, ಮೊಹಮ್ಮದ್ ಉಮರ್ ಮುಕ್ತಿಯಾರ್ ಬಂಧಿತರು. ಬಂಧಿತರಿಂದ 105 ಗ್ರಾಂ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ಸುಮಾರು ₹ 3 ಲಕ್ಷ ಎನ್ನಲಾಗಿದೆ.
ಒಲೆ ಹಚ್ಚುವಾಗ ಬೆಂಕಿ: ವ್ಯಕ್ತಿ ಸಾವು
ಮೈಸೂರು: ನಂದಿನಿ ಬಡಾವಣೆಯ ಮನೆಯಲ್ಲಿ ಒಲೆ ಹಚ್ಚುವ ವೇಳೆ ಶಿವಣ್ಣ ಎಂಬಾತನಿಗೆ ಬೆಂಕಿ ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪತಿ ಶಿವಣ್ಣನನ್ನು ರಕ್ಷಿಸಲು ಹೋಗಿದ್ದ ಪತ್ನಿ ನಾಗಮ್ಮಗೆ ಗಂಭೀರ ಗಾಯಗಳಾಗಿವೆ. ಪ್ರಸ್ತುತ ಅವರಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಡ್ರಗ್ಸ್ ಪೆಡ್ಲರ್ ಬಂಧನ
ಬೆಂಗಳೂರು: ಡ್ರಗ್ಸ್ ಪೆಡ್ಲರ್ ಇಕ್ಬಾಲ್‌ನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಬಳಿಯಿದ್ದ ಮಾದಕವಸ್ತುಗಳು, ನಗದು ಜಪ್ತಿ ಮಾಡಲಾಗಿದೆ. ಬಂಧಿತನಿಂದ ಗಾಂಜಾ, ಎಂಡಿಎಂಎ, ಸಾವಿರ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ಹೆಸರಘಟ್ಟ ರಸ್ತೆಯ ಆಚಾರ್ಯ ಕಾಲೇಜು ಬಳಿಗೆ ಬಂದಿದ್ದಾಗ ಪೊಲೀಸರು ಬೀಸಿದ್ದ ಬಲೆಗೆ ಆರೋಪಿ ಬಿದ್ದಿದ್ದಾನೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Crime News: ಬೈಕ್ ಕಳ್ಳರ ಬಂಧನ, ಪತ್ರಕರ್ತನ ವಿರುದ್ಧ ಎಫ್ಐಆರ್ ದಾಖಲು, ನಕಲಿ ಸಿಮೆಂಟ್ ಘಟಕದ ಮೇಲೆ ಪೊಲೀಸರ ದಾಳಿ