Crime News: ಬೈಕ್ ಕಳ್ಳರ ಬಂಧನ, ಪತ್ರಕರ್ತನ ವಿರುದ್ಧ ಎಫ್​ಐಆರ್ ದಾಖಲು, ನಕಲಿ ಸಿಮೆಂಟ್ ಘಟಕದ ಮೇಲೆ ಪೊಲೀಸರ ದಾಳಿ

Crime News: ಬೈಕ್ ಕಳ್ಳರ ಬಂಧನ, ಪತ್ರಕರ್ತನ ವಿರುದ್ಧ ಎಫ್​ಐಆರ್ ದಾಖಲು, ನಕಲಿ ಸಿಮೆಂಟ್ ಘಟಕದ ಮೇಲೆ ಪೊಲೀಸರ ದಾಳಿ
ಸಾಂಕೇತಿಕ ಚಿತ್ರ

ಮಹಿಳೆಯರ ವಾಟ್ಸಾಪ್ ಸಂಖ್ಯೆಗೆ ಅಶ್ಲೀಲ ವಿಡಿಯೊ ಕಳಿಸಿ ಆರೋಪಿ ಕಿರುಕುಳ ನೀಡುತ್ತಿದ್ದ. ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Mar 05, 2022 | 2:02 PM

ಬೆಂಗಳೂರು: ದರೋಡೆ, ಬೈಕ್ ಕಳವು ಮಾಡುತ್ತಿದ್ದ ಆರು ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಉಲ್ಲಾಸ್, ರಘು ನಾಯಕ್, ನಂದನ್ ಮತ್ತಿತರರು ಎಂದು ಗುರುತಿಸಲಾಗಿದೆ. ₹ 10 ಲಕ್ಷ ಮೌಲ್ಯದ ಆಭರಣ, ₹ 3 ಲಕ್ಷ ಮೌಲ್ಯದ ಬೈಕ್​​ಗಳನ್ನು ಜಪ್ತಿ ಮಾಡಲಾಗಿದೆ. ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ 3, ಜಿಗಣಿ ಠಾಣೆಯಲ್ಲಿ ಒಂದು ಪ್ರಕರಣ ವರದಿಯಾಗಿದೆ. ಬೊಮ್ಮನಹಳ್ಳಿಯಲ್ಲಿ‌ 15, ಹೆಬ್ಬಗೋಡಿಯಲ್ಲಿ 1 ಬೈಕ್ ಕಳುವಾಗಿತ್ತು. ಈ ಆರೋಪಿಗಳು ಹಗಲು ರಾತ್ರಿ ಎನ್ನದೆ ನಗರದ ಹೊರವಲಯದಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ದರೋಡೆ ಮತ್ತು ಬೈಕ್ ಕಳ್ಳತನ ಮಾಡುತ್ತಿದ್ದರು.

ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ಬಂಧನ

ಬೆಂಗಳೂರು: ಕದ್ದ ಮೊಬೈಲ್‌ನಲ್ಲಿದ್ದ ಮಹಿಳೆಯರ ಫೋನ್ ನಂಬರ್ ಪಡೆದು ಕಿರುಕುಳ ನೀಡುತ್ತಿದ್ದ ಆರೋಪಿ ಮಂಜು ಅಲಿಯಾಸ್ ಚೂಲ್ ಮಂಜನನ್ನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ವಾಟ್ಸಾಪ್ ಸಂಖ್ಯೆಗೆ ಅಶ್ಲೀಲ ವಿಡಿಯೊ ಕಳಿಸಿ ಆರೋಪಿ ಕಿರುಕುಳ ನೀಡುತ್ತಿದ್ದ. ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ. ಮೊಬೈಲ್ ಕಳ್ಳತನ ಮಾಡಿದ ಮೇಲೆ ಕದ್ದ ಮೊಬೈಲ್​ನಲ್ಲಿದ್ದ ಮಹಿಳೆಯರ ಫೋನ್ ನಂಬರ್ ಪಡೆದು ಮಹಿಳೆಯರಿಗೆ ಅಶ್ಲೀಲ ದೃಶ್ಯಗಳನ್ನು ಆರೋಪಿಯು ವಾಟ್ಸ್ಯಾಪ್ ಮಾಡುತ್ತಿದ್ದ. ಬೆಂಗಳೂರು ಮತ್ತು ತುಮಕೂರು ಸೇರಿದಂತೆ ವಿವಿಧೆಡೆ ಮಂಜು ವಿರುದ್ಧ 15 ಪ್ರಕರಣಗಳು ದಾಖಲಾಗಿದ್ದವು. ಕೃಷ್ಣ, ಪ್ರಶಾಂತ್, ಪ್ರವೀಣ, ದಿವ್ಯರಾಜ್ ಹೆಸರುಗಳಲ್ಲಿಯೂ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ. ಪೊಲೀಸರು ಮತ್ತು ವಕೀಲರಿಗೂ ಟಾರ್ಗೆಟ್ ಮಾಡುತ್ತಿದ್ದ. ಪೊಲೀಸರು ಬಂಧಿಸಲು ಬಂದಿದ್ದಾಗ, ತನಗೆ ಏಡ್ಸ್ ಇದೆ ಎಂದು ಹೆದರಿಸಿದ್ದ. ತುಮಕೂರು ಮತ್ತು ಬೆಂಗಳೂರು ನಗರಗಳಲ್ಲಿ ಪೊಲೀಸರು ಅರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ವಿಡಿಯೊ ಕಳಿಸಿದ ಬಳಿಕ ಕರೆ ಮಾಡಿದರೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದ. ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ನಕಲಿ ಸಿಮೆಂಟ್ ಘಟಕದ ಮೇಲೆ ಪೊಲೀಸ್ ದಾಳಿ

ಬೆಂಗಳೂರು: ಪರಪ್ಪನ ಅಗ್ರಹಾರದ ವೀರಪ್ಪ ಲೇಔಟ್​ನಲ್ಲಿ ನಕಲಿ ಸಿಮೆಂಟ್ ತಯಾರಿಕಾ ಘಟಕದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬಿರ್ಲಾ ವೈಟ್​ ವಾಲ್​ಕೇರ್ ಪುಟ್ಟಿ ರೀತಿ ಇವರು ನಕಲಿ ಸಿಮೆಂಟ್ ತಯಾರಿಸುತ್ತಿದ್ದರು. ದಾಳಿ ವೇಳೆ 105 ಬಿರ್ಲಾ ವಾಲ್ ಕೇರ್ ಪುಟ್ಟಿ ಹೆಸರಿನ ನಕಲಿ ಸಿಮೆಂಟ್ ಚೀಲ, ಸಿಮೆಂಟ್ ತುಂಬುವ ಯಂತ್ರಗಳ ಜೊತೆಗೆ 800 ಖಾಲಿ ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕರಿಗೆ ನಕಲಿ ಸಿಮೆಂಟ್ ಮಾರಾಟ ಮಾಡಿ ಮೋಸ ಮಾಡುತ್ತಿದ್ದರು. ಜಪ್ತಿಯಾದ ವಸ್ತುಗಳ ಮೌಲ್ಯ ₹ 1.50 ಲಕ್ಷ ಎಂದು ಅಂದಾಜಿಸಲಾಗಿದೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರನನ್ನು ವಾಚಾಮಗೋಚರ ನಿಂದಿಸಿದ ಡಿವೈಎಸ್​ಪಿ

ಬಾಗಲಕೋಟೆ: ಬೀಳಗಿ ತಾಲೂಕಿನ ಅರಕೇರಿ ಗ್ರಾಮದಲ್ಲಿ ಪಟಾಕಿ ಸಿಡಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದೆ. ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ದೂರು ನೀಡಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಹನುಮಂತ ಹಿರೇಮನಿ ಕುಟುಂಬದ ಯುವಕ ಡಿವೈಎಸ್​ಪಿ ಪಾಂಡುರಂಗಯ್ಯ ಅವರಿಗೆ ಕರೆ ಮಾಡಿ ವಿವರಿಸಲು ಯತ್ನಿಸಿದಾಗ, ಅವರು ಅಶ್ಲೀಲ ಪದಗಳಿಂದ ನಿಂದಿಸಿದರು ಎಂದು ಆರೋಪ ಮಾಡಿದರು. ಅರಕೇರಿ ಗ್ರಾಮದಲ್ಲಿ ಎರಡೂ ಕುಟುಂಬಗಳ ನಡುವಿನ ಜಗಳದ ವೇಳೆ ಹಲ್ಲೆ ನಡೆಯಿತು ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಕುರಿತು ವಿವರಿಸಲು ಕರೆ ಮಾಡಿದ ಯುವಕನಿಗೆ ಜಮಖಂಡಿ ಡಿವೈಎಸ್​ಪಿ ಪಾಂಡುರಂಗಯ್ಯ ಅಶ್ಲೀಲ ಪದ ಬಳಸಿ ನಿಂದಿಸಿದರು. ನಿನ್ನ ಊರಿಗೆ ಬಂದು ನೋಡಿಕೊಳ್ತೀನಿ ಎಂದು ಬೆದರಿಕೆ ಹಾಕಿದರು ಎಂದು ಯುವಕ ದೂರಿದ್ದಾನೆ.

ಮಹಿಳೆಯ ಕೊಲೆ ಮಾಡಿ ಆಭರಣ ದೋಚಿದ ದುಷ್ಕರ್ಮಿಗಳು

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ಮಂಗಳಮ್ಮ (65) ಅವರನ್ನು ಕೊಲೆ ಮಾಡಿ, ಅವರ ಮೈಮೇಲಿದ್ದ ಆಭರಣಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಕೆಆರ್​ಎಸ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗೊಳ ಗ್ರಾಮದಲ್ಲಿ ಈ ವೃದ್ಧೆ ಒಂಟಿಯಾಗಿ ವಾಸಿಸುತ್ತಿದ್ದರು. ವೃದ್ದೆಯನ್ನು ಹತ್ಯೆ ಮಾಡಿ, ಕತ್ತು ಕಿವಿಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದರು.

ಪತ್ರಕರ್ತನ ವಿರುದ್ಧ ಎಫ್​ಐಆರ್

ಧಾರವಾಡ: ಪತ್ರಕರ್ತ ರಾಣಾ ಅಯೂಬ್ ವಿರುದ್ಧ ನಗರದ ವಿದ್ಯಾಗಿರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಿಜಾಬ್-ಕೇಸರಿ ವಿವಾದಕ್ಕೆ ಸಂಬಂಧಿಸಿದಂತೆ ಬಿಬಿಸಿ ಸುದ್ದಿವಾಹಿನಿಯಲ್ಲಿ ನಡೆದಿದ್ದ ಚರ್ಚೆಯಲ್ಲಿ ಅವರು ‘ಹಿಂದೂ ಟೆರರಿಸ್ಟ್’ ಎಂಬ ಪದ ಬಳಕೆ ಮಾಡಿದ್ದರು. ಈ ಸಂಬಂಧ ಹಿಂದೂ ಐಟಿ ಸೆಲ್​ನ ಅಶ್ವತ್ಥ್​ ದೂರು ದಾಖಲಿಸಿದ್ದರು.

ಇದನ್ನೂ ಓದಿ: Crime News: ಅಳಂದದಲ್ಲಿ ನಿಷೇಧಾಜ್ಞೆ ವಿಸ್ತರಣೆ, ಬೆಂಗಳೂರಿನಲ್ಲಿ ಕಳ್ಳರ ಬಂಧನ, ಶಿವಮೊಗ್ಗದಲ್ಲಿ ವ್ಯಕ್ತಿ ಮೇಲೆ ಪೊಲೀಸರ ಹಲ್ಲೆ

ಇದನ್ನೂ ಓದಿ: Crime News: ಕಣ್ಣಿಗೆ ಹಾರ್ಪಿಕ್, ಝಂಡು ಬಾಮ್ ಹಚ್ಚಿ ವೃದ್ಧೆಯನ್ನು ಕುರುಡಿಯಾಗಿಸಿ ಮನೆ ದೋಚಿದ ಮಹಿಳೆ!

Follow us on

Related Stories

Most Read Stories

Click on your DTH Provider to Add TV9 Kannada