ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದ್ದ ಯುವಕನ ಸಾಲದ ಹೊರೆ; ವೃದ್ದನ ಕೊಲೆ
ಕ್ರಿಕೆಟ್ ಬೆಟ್ಟಿಂಗ್ ಆಡಿ ಸಿಕ್ಕಪಟ್ಟೆ ಸಾಲ ಮಾಡಿದ್ದು, ಸಾಲಗಾರರ ಕಾಟ ತಡೆಯಲಾರದೆ ಹಣಕ್ಕಾಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಕೋಲಾರ: ಕುರಿ ಮೇಸಿಕೊಂಡು ಬದುಕುತಿದ್ದವನಿಗೆ ಕುರಿ (Sheep) ಖರೀದಿ ಮಾಡೋದಕ್ಕೆ ಹಣ ಕೊಡಿಸ್ತೇನೆ ಎಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಭೀಕರವಾಗಿ ಕೊಲೆ (Murder) ಮಾಡಿರುವಂತಹ ಘಟನೆ ನಡೆದಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಹಿಂಬಾಗದ ನಿರ್ಜನ ಪ್ರದೇಶದಲ್ಲಿ ಇದೇ ಫೆಬ್ರವರಿ-22-2022 ರಂದು 65 ವರ್ಷದ ವೃದ್ದನೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು, ಕೊಲೆಯಾದವನು ಶ್ರೀನಿವಾಸಪುರ ತಾಲ್ಲುಕಿನ ಗುಂಡುಮನತ್ತ ಗ್ರಾಮದ ಕುರಿ ವ್ಯಾಪಾರಿ ಮುನಿಸ್ವಾಮಿ ಎಂದು ಗುರುತಿಸಲಾಗಿದೆ. ಎಪಿಎಂಸಿ ಬಳಿಯ ಮಾವಿನ ತೋಪಿನಲ್ಲಿ ಅಪರಿಚಿತರು ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ರು. ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣ ದಾಖಲು ಮಾಡಿಕೊಂಡಿದ್ದ ಶ್ರೀನಿವಾಸಪುರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶ್ರೀನಿವಾಸಪುರ ಪಟ್ಟಣದ ನಯಾಜ್ ಪಾಷಾ ಎನ್ನಲಾಗಿದೆ. ಬಂಧಿತ ಆರೋಪಿ ಶ್ರೀನಿವಾಸಪುರ ಪಟ್ಟಣದಲ್ಲಿ ಮಟನ್ ಅಂಗಡಿ ಇಟ್ಟುಕೊಂಡಿದ್ದ.
ಕುರಿ ವ್ಯಾಪಾರಕ್ಕೆಂದು ಬಂದವನು ನಿರ್ಜನ ಪ್ರದೇಶದಲ್ಲಿ ಕೊಲೆಯಾಗಿದ್ದ..! ಫೆಬ್ರವರಿ-22ರಂದು ಆಗಿದ್ದೇನು ಎಂದು ನೋಡೋದಾದ್ರೆ, ಅವತ್ತು ಗುಂಡುಮನತ್ತ ಗ್ರಾಮದಿಂದ ಕೊಲೆಯಾದ ಮುನಿಸ್ವಾಮಿ ತನ್ನ ಬಾಮೈದ ನಾರಾಯಣಸ್ವಾಮಿ ಜೊತೆಗೆ ಶ್ರೀನಿವಾಸಪುರ ಪಟ್ಟಣಕ್ಕೆ ಕುರಿ ಖರೀದಿ ಮಾಡಲು ಬಂದಿದ್ದರು. ಈ ವೇಳೆ ಕೆಲವೆಡೆ ಕುರಿ ಖರೀದಿ ಮಾಡಿ ನಂತರ ಶ್ರೀನಿವಾಸಪುರ ಪಟ್ಟಣಕ್ಕೆ ಬಂದಿದ್ದ. ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ಸರ್ಕಲ್ ಬಳಿ ಅಜ್ಜು ಎಂಬುವರ ಮಟನ್ ಅಂಗಡಿಯ ಬಳಿ ಮುನಿಸ್ವಾಮಿ ಉಳಿದುಕೊಂಡು ತನ್ನ ಬಾಮೈದ ನಾರಾಯಣಸ್ವಾಮಿ ನಿನಗೇನಾದ್ರು ಕೆಲಸವಿದ್ದರೆ ನೋಡು ಎಂದು ಕಳಿಸಿದ್ದ. ನಂತರ ಅಲ್ಲಿಂದ ಈ ನಯಾಜ್ ಪಾಷಾ ಮುನಿಸ್ವಾಮಿಗೆ 50 ಸಾವಿರ ಹಣ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋದ ನಯಾಜ್ ಪಾಷಾ ಮುನಿಸ್ವಾಮಿಗೆ 50 ಸಾವಿರ ರೂಪಾಯಿ ಹಣ ಸಾಲ ಕೊಡಿಸಿಕೊಂಡು ಬಂದಿದ್ದಾನೆ. ಈ ವೇಳೆ ಮಾರ್ಗಮಧ್ಯದಲ್ಲಿ ನನಗೆ ಪರಿಚಯಸ್ಥರ ಕುರಿಗಳಿವೆ ಅವರು ಕುರಿಗಳನ್ನು ಮಾರಾಟ ಮಾಡ್ತಾರೆ ಒಂದು ಸಾರಿ ಕುರಿ ತೋರಿಸೋದಾಗಿ ಹೇಳಿ ಶ್ರೀನಿವಾಸಪುರದ ಎಪಿಎಂಸಿ ಹಿಂಬಾಗದಲ್ಲಿದ್ದ ಮಾವಿನ ತೋಪಿಗೆ ಕರೆದುಕೊಂಡು ಹೋಗಿದ್ದ. ನಯಾಜ್ ಮುನಿಸ್ವಾಮಿಯ ಕುತ್ತಿಗೆ ಕುಯ್ದು ಕೊಲೆಮಾಡಿ ನಂತರ ಮುನಿಸ್ವಾಮಿ ಬಳಿ ಇದ್ದ 50 ಸಾವಿರ ರೂಪಾಯಿ ಎಗರಿಸಿ ತನಗೇನು ಗೊತ್ತಿಲ್ಲ ಎಂದು ಸುಮ್ಮನಾಗಿಬಿಟ್ಟಿದ್ದ.
ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಹಣ ಸೋತು ಸಾಲ ಹೊರೆ ತೀರಿಸಲು ಕೊಲೆ ಮಾಡಿದ್ದ ಯುವಕ..! ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದ ಶ್ರೀನಿವಾಸಪುರ ಪೊಲೀಸರು ಕೊಲೆಯಾದ ವೇಳೆ ಮುನಿಸ್ವಾಮಿ ಜೊತೆಗೆ ಕೊನೆಯದಾಗಿ ಇದ್ದ ವ್ಯಕ್ತಿ ಯಾರು ಎಂದು ಹುಡುಕಿದಾಗ ಅದು ನಯಾಜ್ ಪಾಷಾ ಅನ್ನೋದು ತಿಳಿದು ಬಂದಿತ್ತು. ಈ ವೇಳೆ ನಯಾಜ್ ಪಾಷಾನನ್ನು ಕರೆತಂದು ವಿಚಾರಣೆ ಶುರುಮಾಡಿದ್ದ ಪೊಲೀಸರಿಗೆ ನಯಾಜ್ ಪಾಷಾ ಬಾಯಿ ಬಿಟ್ಟಿರಲಿಲ್ಲ. ನನಗೇನು ಗೊತ್ತಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದ. ಈ ವೇಳೆ ಪೊಲೀಸರು ಅವನ ಪೋನ್ ವಿಚಾರಣೆ ಮಾಡಿದಾಗ ಕೊಲೆ ಆರೋಪಿ ಸಿಕ್ಕಿಬಿದ್ದಿದ್ದ.
ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್ಗೆ ಪೋನ್ ಪೇ ಸಿಕ್ಕಿಬಿದ್ದ ಕೊಲೆ ಆರೋಪಿ…! ತಾನು ಕೊಲೆ ಮಾಡಿಲ್ಲ ಎಂದು ಹೇಳುತ್ತಿದ್ದ ನಯಾಜ್ ಪಾಷಾ ವಿಚಾರಣೆ ವೇಳೆ ಸಿಕ್ಕಿಕೊಂಡಿದ್ದ, ಕೊಲೆಯಾದ ನಂತರ ನಯಾಜ್ ಪಾಷಾ ಪೋನ್ ಪೇ ಮೂಲಕ 50 ಸಾವಿರ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದ. ಅದ್ರಲ್ಲೂ ಈ ಹಿಂದೆ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ನದೀಮ್ ಪಾಷಾ ಎಂಬಾತನ ಅಕೌಂಟ್ಗೆ ಹಣ ಕಳಿಸಲಾಗಿತ್ತು. ಈ ಆಧಾರದಲ್ಲಿ ನಯಾಜ್ ಪಾಷಾನನ್ನು ಬಂಧಿಸಿ ತಮ್ಮದೇ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ನಯಾಜ್ ಪಾಷಾ ಕೊಲೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದ. ಕ್ರಿಕೆಟ್ ಬೆಟ್ಟಿಂಗ್ ಆಡಿ ಸಿಕ್ಕಪಟ್ಟೆ ಸಾಲ ಮಾಡಿದ್ದು, ಸಾಲಗಾರರ ಕಾಟ ತಡೆಯಲಾರದೆ ಹಣಕ್ಕಾಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಸದ್ಯ ನಯಾಜ್ ಪಾಷಾನ ಜೊತೆಗೆ ಬೆಟ್ಟಿಂಗ್ಗೆ ಪ್ರೇರೇಪಣೆ ನೀಡಿ, ಕೊಲೆಗೆ ಪರೋಕ್ಷಾಗಿ ಪ್ರಚೋದನೆ ನೀಡಿದ ಆರೋಪದಲ್ಲಿ ನದೀಮ್ ಪಾಷಾನನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡುವುದಾಗಿ ಕೋಲಾರ ಎಸ್ಪಿ ಡಿ.ದೇವರಾಜ್ ತಿಳಿಸಿದ್ದಾರೆ. ಒಟ್ಟಾರೆ ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ 20 ವರ್ಷದ ಯುವಕ ಇಂದು ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾನೆ. ಬೆಟ್ಟಿಂಗ್ ಭೂತ ಇಷ್ಟು ದಿನ ಮನೆ, ಮಠ ಮಾರಿಕೊಂಡು ಬೀದಿಗೆ ತಂದು ಬಿಡುತ್ತಿತ್ತು, ಆದರೆ ಈಗ ಐಪಿಎಲ್ ಬೆಟ್ಟಿಂಗ್ ಚಟಕ್ಕೆ ರಕ್ತದ ವಾಸನೆಯೂ ತಾಗಿದೆ. ಇನಷ್ಟು ಯುವಕರು ಈ ದಂಧೆಗೆ ಸಿಲುಕಿ ಜೀವನ ಹಾಳು ಮಾಡಿಕೊಳ್ಳುವ ಮೊದಲು ಕ್ರಿಕೆಟ್ ಬೆಟ್ಟಿಂಗ್ ದಂಧಗೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕು ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.
ವರದಿ : ರಾಜೇಂದ್ರ ಸಿಂಹ
ಇದನ್ನೂ ಓದಿ:
Petrol Diesel Rate Today: ಬೆಂಗಳೂರು ಹಾಗೂ ಇತರ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಇಲ್ಲಿ ತಿಳಿಯಿರಿ