ತಲಪಾಡಿಯ ಟೋಲ್‌ಗೇಟ್‌ಗೆ ಗಡಿನಾಡ ಕನ್ನಡಿಗರು ಸವಾಲ್: ಪರ್ಯಾಯ ರಸ್ತೆ ನಿರ್ಮಿಸಲು ಮೆಗಾ ಪ್ಲ್ಯಾನ್​

ಕರ್ನಾಟಕ-ಕೇರಳ ಗಡಿ ಭಾಗದ ಕನ್ನಡಿಗರು ತಲಪಾಡಿ ಟೋಲ್‌ಗೇಟ್‌ನಿಂದ ಹೈರಾಣಾಗಿದ್ದಾರೆ. ಸ್ಥಳೀಯರಿಗೆ ಟೋಲ್ ವಿನಾಯಿತಿ ನಿರಾಕರಿಸಿದ್ದರಿಂದ, ಪರ್ಯಾಯ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಕೇರಳ ಸರ್ಕಾರದ ಬೆಂಬಲದೊಂದಿಗೆ, ಹೊಳೆಯೊಂದರ ಮೇಲೆ ಸೇತುವೆ ನಿರ್ಮಿಸಿ ಟೋಲ್‌ಗೇಟ್‌ನಿಂದ ಮುಕ್ತಿ ಪಡೆಯಲು ಯತ್ನಿಸುತ್ತಿದ್ದಾರೆ. ಈ ಯೋಜನೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರತಿಕ್ರಿಯೆಗಾಗಿ ಕುತೂಹಲದಿಂದ ಕಾಯಲಾಗುತ್ತಿದೆ.

ತಲಪಾಡಿಯ ಟೋಲ್‌ಗೇಟ್‌ಗೆ ಗಡಿನಾಡ ಕನ್ನಡಿಗರು ಸವಾಲ್: ಪರ್ಯಾಯ ರಸ್ತೆ ನಿರ್ಮಿಸಲು ಮೆಗಾ ಪ್ಲ್ಯಾನ್​
ತಲಪಾಡಿಯ ಟೋಲ್‌ಗೇಟ್‌ಗೆ ಗಡಿನಾಡ ಕನ್ನಡಿಗರು ಸವಾಲ್: ಪರ್ಯಾಯ ರಸ್ತೆ ನಿರ್ಮಿಸಲು ಮೆಗಾ ಪ್ಲ್ಯಾನ್​
Edited By:

Updated on: Feb 19, 2025 | 8:36 PM

ಮಂಗಳೂರು, ಫೆಬ್ರವರಿ 19: ಕೇರಳ-ಕರ್ನಾಟಕದ ಗಡಿನಾಡ ಕನ್ನಡಿಗರು ಟೋಲ್‌ಗೇಟ್ (Toll Gate) ಒಂದರ ವಿರುದ್ಧ ಸಿಡಿದೆದ್ದಿದ್ದಾರೆ. ಸ್ಥಳೀಯರಿಗೆ ಟೋಲ್ ವಿನಾಯಿತಿ ನಿರಾಕರಿಸಿದಕ್ಕೆ ಟೋಲ್‌ಗೇಟ್‍‌ಗೆ ಸೆಡ್ಡು ಹೊಡೆದು ಪರ್ಯಾಯ ರಸ್ತೆ ಮಾಡಲು ಮೆಗಾ ಪ್ಲ್ಯಾನ್ ಮಾಡಿದ್ದಾರೆ. ಹೊಳೆಯೊಂದಕ್ಕೆ ಸೇತುವೆ ಕಟ್ಟಿ ಟೋಲ್‌ಗೇಟ್‌ನಿಂದ ಮುಕ್ತಿ ನೀಡಲು ನಡೆಸುತ್ತಿರುವ ಹೋರಾಟಕ್ಕೆ ಕೇರಳ ಸರ್ಕಾರವು ಸಾಥ್ ನೀಡಿದೆ.

ಗಡಿನಾಡ ಕನ್ನಡಿಗರಿಗೆ ಟೋಲ್‌ಗೇಟ್ ಬಿಕ್ಕಟ್ಟು

ಹೌದು.. ಕರ್ನಾಟಕ-ಕೇರಳ ಗಡಿ ಭಾಗ ಮಂಗಳೂರಿನ ತಲಪಾಡಿಯಲ್ಲಿ ಟೋಲ್‌ಗೇಟ್ ಒಂದಿದೆ. ಈ ಟೋಲ್‌ಗೇಟ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀನದಲ್ಲಿದೆ. ಪ್ರತಿನಿತ್ಯ ಇದೆ ಟೋಲ್‌ಗೇಟ್ ಮೂಲಕ ಕೇರಳದಿಂದ ಕರ್ನಾಟಕಕ್ಕೆ ಗಡಿನಾಡ ಕನ್ನಡಿಗರು ಸೇರಿದಂತೆ ಲಕ್ಷಾಂತರ ಜನ ಎಂಟ್ರಿ, ಎಕ್ಸಿಟ್ ಆಗ್ತಾರೆ. ಅದರಲ್ಲೂ ಕೇರಳ ರಾಜ್ಯದಲ್ಲಿರುವ ಮಂಜೇಶ್ವರದ ಗಡಿನಾಡ ಕನ್ನಡಿಗರು ದಿನಂಪ್ರತಿ ಮಂಗಳೂರಿನ ಆಸ್ಪತ್ರೆ, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಇದೇ ತಲಪಾಡಿ ಟೋಲ್‌ಗೇಟ್ ಆಶ್ರಯಿಸುತ್ತಾರೆ. ಆದರೆ ಇದೀಗ ಈ ಗಡಿನಾಡ ಕನ್ನಡಿಗರು ಬಿಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಇದನ್ನೂ ಓದಿ: ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ, ವಿಡಿಯೋ ವೈರಲ್

ಕರ್ನಾಟಕ ಭಾಗದ ತಲಪಾಡಿಯ ಸ್ಥಳೀಯರಿಗೆ ಮಾತ್ರ ಇಲ್ಲಿ ಟೋಲ್ ವಿನಾಯಿತಿ ನೀಡಿದ್ದು, ಕೇರಳ ಭಾಗದ ಸ್ಥಳೀಯ ಗಡಿನಾಡ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ. ಟೋಲ್‌ನ ಐದು ಕಿ.ಮೀ ವ್ಯಾಪ್ತಿಯಲ್ಲಿರುವ ಗಡಿನಾಡ ಕನ್ನಡಿಗರಿಗೆ ಟೋಲ್ ವಿನಾಯಿತಿ ನೀಡುವಂತೆ ಒತ್ತಾಯಿಸಿ ಹಲವು ಪ್ರತಿಭಟನೆಗಳು ನಡೆಸಿದ ಬಳಿಕವೂ ಬೇಡಿಕೆ ಈಡೇರದ ಹಿನ್ನಲೆ, ಇದೀಗ ಕೇರಳ ರಾಜ್ಯದಲ್ಲಿರುವ ಮಂಜೇಶ್ವರ ಪಂಚಾಯತ್ ಸಹಾಯ ಪಡೆದು ಟೋಲ್‌ಗೇಟ್‌ಗೆ ಸೆಡ್ಡು ಹೊಡೆಯಲು ನಿರ್ಧಾರಿಸಲಾಗಿದೆ. ಅದುವೆ ಟೋಲ್‌ಗೇಟ್‌ಗೆ ಪರ್ಯಾಯ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

ಇಲ್ಲಿನ ಟೋಲ್‌ಗೇಟ್ ಪಕ್ಕದಲ್ಲೇ ರಸ್ತೆಯೊಂದು ಹಾದು ಹೋಗುತ್ತೆ. ಹಿಂದೆ ರಾಷ್ಟ್ರೀಯ ಹೆದ್ದಾರಿ ಆಗುವ ಮೊದಲು ಇದೇ ರಸ್ತೆಯ ಮೂಲಕ ಗಡಿನಾಡ ಕನ್ನಡಿಗರು ಮಂಗಳೂರಿಗೆ ಎಂಟ್ರಿ ಆಗುತ್ತಿದ್ದರು. ಇದೀಗ ಅದೇ ರಸ್ತೆ ಮೂಲಕ ತಲಪಾಡಿ ಹೊಳೆಗೆ ಸೇತುವೆ ಕಟ್ಟಿ 900 ಮೀಟರ್ ದೂರದ ಹೊಸ ರಸ್ತೆ ನಿರ್ಮಿಸಲು ಗಡಿನಾಡ ಕನ್ನಡಿಗರು ಯೋಜನೆ ರೂಪಿಸಿದ್ದಾರೆ. ಈ ಮೂಲಕ ಟೋಲ್‌ಗೇಟ್ ಇಲ್ಲದೆ ಮಂಗಳೂರಿಗೆ ಎಂಟ್ರಿಯಾಗಲು ಪ್ಲ್ಯಾನ್ ಮಾಡಿದ್ದಾರೆ.

ಪರ್ಯಾಯ ರಸ್ತೆ ನಿರ್ಮಾಣಕ್ಕೆ ಪ್ಲ್ಯಾನ್

ಈ ರಸ್ತೆಯ ಜಾಗ ಕೇರಳದ ಮಂಜೇಶ್ವರ ಗ್ರಾಮ ಪಂಚಾಯತ್ ಅಧೀನ ಇರೋದ್ರಿಂದ ಗಡಿನಾಡ ಕನ್ನಡಿಗರು ಟೋಲ್ ಸಂಕಷ್ಟ ತಪ್ಪಿಸಲು ಭರ್ಜರಿ ಪ್ಲ್ಯಾನ್ ರೂಪಿಸಿದ್ದಾರೆ. ಸದ್ಯ ಮಂಜೇಶ್ವರ ಗ್ರಾಮ ಪಂಚಾಯತ್‌ನಿಂದ ರಸ್ತೆ ನಿರ್ಮಾಣದ ಜಾಗದ ಸರ್ವೇ ರಸ್ತೆ ಮತ್ತು ಸೇತುವೆ ನಿರ್ಮಾಣ ಯೋಜನೆಗೆ ಅಂದಾಜು ಪಟ್ಟಿ ಸಿದ್ದ ಪಡಿಸಲಾಗಿದೆ. ಕೇರಳದ ಮಂಜೇಶ್ವರ ಶಾಸಕರ ನಿಧಿ ಹಾಗೂ ಸಂಸದರ ನಿಧಿ, ಪಂಚಾಯತ್ ನಿಧಿ ಬಳಸಿ ರಸ್ತೆ ನಿರ್ಮಾಣ ಮಾಡಿ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯ ಬೈಪಾಸ್‌ ರಸ್ತೆ ನಿರ್ಮಿಸುವುದಕ್ಕೆ ಪ್ಲ್ಯಾನ್ ಮಾಡಿದ್ದಾರೆ.

ಇದನ್ನೂ ಓದಿ: ಕರಾವಳಿ ಭದ್ರತೆಗೆ ಗಂಭೀರ ಅಪಾಯ ತಂದಿಟ್ಟ ಸರ್ಕಾರದ ಹೊಸ ಆದೇಶ: ಡ್ರಗ್ಸ್ ಪೂರೈಕೆ, ಭಯೋತ್ಪಾದನೆಗೆ ಮುಕ್ತ ಅವಕಾಶದ ಆತಂಕ

ಇದೆ ಮಂಜೇಶ್ವರ ಗ್ರಾಮ ಆಡಳಿತಾತ್ಮಕವಾಗಿ ಕೇರಳದಲ್ಲಿದ್ದರು ಇಲ್ಲಿನ ಜನ ಭಾವನಾತ್ಮಕವಾಗಿ ಇನ್ನೂ ಕನ್ನಡಿಗರು. ಕೇರಳಕ್ಕಿಂತ ಹೆಚ್ಚಾಗಿ ಇವರು ಕರ್ನಾಟಕ ಅದರಲ್ಲೂ ಮಂಗಳೂರನ್ನ ಆಶ್ರಯಿಸೋದು ಹೆಚ್ಚು. ಹೀಗಾಗಿ ನಿತ್ಯ ತಲಪಾಡಿ ಟೋಲ್‌‌ಗೇಟ್‌ನಲ್ಲಿ ಸುಂಕ ಪಾವತಿಸಿ ಬರುವ ಅನಿವಾರ್ಯತೆಯಿದೆ. ಹೀಗಾಗಿ ಗಡಿನಾಡ ಕನ್ನಡಿಗರು ಪರ್ಯಾಯ ರಸ್ತೆ ನಿರ್ಮಿಸುವ ಮೂಲಕ ಟೋಲ್‌ಗೇಟ್‌ಗೆ ಸೆಡ್ಡು ಹೊಡೆಯಲು ಮುಂದಾಗಿದ್ದು, ಈ ಯೋಜನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವ ರೀತಿ ಪ್ರತಿಕ್ರಿಯಿಸುತ್ತೆ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:30 pm, Wed, 19 February 25