Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರಿ ಸಾಕಣೆ ಹೆಸ್ರಲ್ಲಿ ಅಕ್ರಮ ಕಸಾಯಿಖಾನೆ: ಮೇಯರ್ ದಾಳಿ ವೇಳೆ ಗೋವಿನ ರುಂಡ-ಮುಂಡ ಪತ್ತೆ

ಮಂಗಳೂರಿನಲ್ಲಿ ಅಕ್ರಮ ಗೋಹತ್ಯೆ ನಡೆಯುತ್ತಿರುವ ಬಗ್ಗೆ ಮೇಯರ್ ಮನೋಜ್ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿ ಪತ್ತೆ ಮಾಡಲಾಗಿದೆ. ಕುದ್ರೋಳಿ ಕಸಾಯಿಖಾನೆ ಪಕ್ಕದಲ್ಲಿರುವ ಅಕ್ರಮ ಕಟ್ಟಡದಲ್ಲಿ ಸಾವಿರಾರು ಜಾನುವಾರುಗಳ ದೇಹದ ಭಾಗಗಳು ಪತ್ತೆಯಾಗಿವೆ. ಕಾನೂನು ಉಲ್ಲಂಘನೆಯ ಘಟನೆಗೆ ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣ ಎಂದು ಮೇಯರ್ ಆರೋಪಿಸಿದ್ದಾರೆ.

ಕುರಿ ಸಾಕಣೆ ಹೆಸ್ರಲ್ಲಿ ಅಕ್ರಮ ಕಸಾಯಿಖಾನೆ: ಮೇಯರ್ ದಾಳಿ ವೇಳೆ ಗೋವಿನ ರುಂಡ-ಮುಂಡ ಪತ್ತೆ
ಕುರಿ ಸಾಕಣೆ ಹೆಸ್ರಲ್ಲಿ ಅಕ್ರಮ ಕಸಾಯಿಖಾನೆ: ಮೇಯರ್ ದಾಳಿ ವೇಳೆ ಗೋವಿನ ರುಂಡ-ಮುಂಡ ಪತ್ತೆ
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Feb 09, 2025 | 2:12 PM

ಮಂಗಳೂರು, ಫೆಬ್ರವರಿ 09: ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರು ಕೂಡ ಗೋಹತ್ಯೆಗೆ ಬ್ರೇಕ್‌ ಬಿದ್ದಿಲ್ಲ. ಪ್ರತೀ ಬಾರಿ ಗೋ ಹತ್ಯೆಯ ಕಾರಣಕ್ಕೆ ಸುದ್ದಿಯಾಗುವ ಮಂಗಳೂರಿನಲ್ಲಿ ಇನ್ನೂ ಹಲವಡೆ ಅಕ್ರಮ ಕಸಾಯಿಖಾನೆಗಳು (Cow Slaughter) ಕಾರ್ಯಾನಿರ್ವಹಿಸುತ್ತಿವೆ. ಕುರಿ ಸಾಕಾಣೆ ಕೇಂದ್ರದ ಹೆಸರಿನಲ್ಲಿ ಅಕ್ರಮ ಜಾಗದಲ್ಲಿ ನಡೆಯುತ್ತಿದ್ದ ಬೆಚ್ಚಿ ಬೀಳಿಸುವ ಗೋ ವಧೆಯ ಸಾಕ್ಷ್ಯಗಳು ಸಿಕ್ಕಿದೆ. ಈ ಅಕ್ರಮ ಕಸಾಯಿಖಾನೆಗಳ ವಿರುದ್ದ ಸಮರ ಸಾರಿರುವ ಮಂಗಳೂರು ಮೇಯರ್‌, ತಮ್ಮ ತಂಡದ ಜೊತೆ ದಾಳಿಗಿಳಿದ ವೇಳೆ ಅಕ್ರಮದ ಅಟ್ಟಹಾಸ ಕಂಡು ಶಾಕ್‌ ಆಗಿದ್ದಾರೆ.

ರಾಜ್ಯದಲ್ಲಿ ಗೋ ಹತ್ಯೆ ನಿಷೇಧದ ಕಾನೂನಿನ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೂ ಕರ್ನಾಟಕದ ಹಲವು ಭಾಗಗಳಲ್ಲಿ ಇಂದಿಗೂ ಅವ್ಯಾಹತವಾಗಿ ಅಕ್ರಮ ಗೋಹತ್ಯೆ ನಡೆಯುತ್ತಿದೆ. ಹಿಂದೂ ಸಂಘಟನೆಗಳು ಅಂಥಹ ಜಾಗಗಳ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿ ವರ್ಗ ಮಾತ್ರ ಸುಮ್ಮನಿದೆ ಎಂಬ ಆರೋಪಗಳಿವೆ. ಹೀಗಾಗಿ ಮಂಗಳೂರಿನ ಅಕ್ರಮ ಕಸಾಯಿಖಾನೆಗಳ ವಿರುದ್ದ ಸ್ವತಃ ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಮನೋಜ್‌ ಕುಮಾರ್‌ ಸಮರ ಸಾರಿದ್ಧಾರೆ. ಹೀಗಾಗಿ ಮಂಗಳೂರಿನ ಹೃದಯಭಾಗದಲ್ಲಿರುವ ಕುದ್ರೋಳಿ ಕಸಾಯಿಖಾನೆ ಪರಿಸರಕ್ಕೆ ದಿಢೀರ್ ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಗೋ ಕಳ್ಳತನ, ಹತ್ಯೆ ಮಾಡೋರನ್ನು ರಸ್ತೆಯಲ್ಲಿ ಸರ್ಕಲಲ್ಲಿ ನಿಲ್ಲಿಸಿ ಗುಂಡಿಕ್ಕಬೇಕು: ಮಂಕಾಳ ವೈದ್ಯ

ಕುದ್ರೋಳಿ ಕಸಾಯಿಖಾನೆ ಈ ಹಿಂದೆ ಅಧಿಕೃತವಾಗಿದ್ದರೂ ಹಸಿರು ಪೀಠದ ಆದೇಶದ ಹಿನ್ನಲೆಯಲ್ಲಿ ಸ್ಥಗಿತಗೊಳಿಸಿ ನಾಲ್ಕು ವರ್ಷ ಕಳೆದಿದೆ. ಆದರೆ ಈ ಕಸಾಯಿಖಾನೆ ಪಕ್ಕದ ಖಾಸಗಿ ಜಾಗದಲ್ಲಿ ಅಕ್ರಮವಾಗಿ ಕಸಾಯಿಖಾನೆ ವ್ಯವಹಾರ ನಡೆಯುತ್ತಿದ್ದು, ಪ್ರತಿನಿತ್ಯ ಗೋವು, ಆಡು, ಕುರಿಗಳನ್ನು ವಧೆ ಮಾಡುತ್ತಿರುವ ಬಗ್ಗೆ ದೂರುಗಳಿತ್ತು. ಹೀಗಾಗಿ ಮಂಗಳೂರು ಮೇಯರ್ ಮನೋಜ್ ಕುಮಾರ್ ಕುದ್ರೋಳಿ ಕಸಾಯಿಖಾನೆ ಪರಿಸರದ ಭಾಗಕ್ಕೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಸ್ವತಃ ಮೇಯರ್‌ ಮತ್ತು ಅವರ ತಂಡ ಶಾಕ್‌ಗೆ ಒಳಗಾಗಿದೆ.

ಗರಂ ಆದ ಮೇಯರ್ ಮನೋಜ್‌ ಕುಮಾರ್

ಇಲ್ಲಿನ ಖಾಸಗಿ ಜಾಗದಲ್ಲಿರುವ ಕುರಿ ಸಾಕಾಣೆ ಕೇಂದ್ರದ ಹೆಸರಿನ ಅನಧಿಕೃತ ಕಟ್ಟಡವನ್ನು ಪರಿಶೀಲನೆ ನಡೆಸಿದಾಗ ದನ, ಆಡು, ಕುರಿಗಳ ರುಂಡಗಳು, ದೇಹದ ಭಾಗಗಳು ಒಂದು ಕೊಣೆಯಿಡೀ ರಾಶಿ ಬಿದ್ದಿರುವುದು ಪತ್ತೆಯಾಗಿದೆ. ಇದನ್ನು ನೋಡಿ ಗರಂ ಆದ ಮೇಯರ್ ಮನೋಜ್‌ ಕುಮಾರ್, ಆರೋಗ್ಯ ಅಧಿಕಾರಿಗಳೇ ನೀವೇನು ಮಾಡುತ್ತಿದ್ದೀರಿ, ನಗರದ ಹೃದಯಭಾಗದಲ್ಲೇ ಇಂತಹ ಚಟುವಟಿಕೆ ನಿರಂತರ ನಡೆಯುತ್ತಿರುವಾಗ ನಿಮಗೆ ಯಾಕೆ ಗೊತ್ತಾಗಿಲ್ಲ? ಕೂಡಲೇ ಕ್ರಮಕೈಗೊಳ್ಳಿ ಎಂದು ತಾಕೀತು ಮಾಡಿದ್ದಾರೆ.

ಖಾಸಗಿ ಜಾಗದಲ್ಲಿರುವ ಕುರಿ ಸಾಕಾಣೆ ಕೇಂದ್ರದ ಹೆಸರಿನ ಕಟ್ಟಡದೊಳಗೆ ಸುಮಾರು ಸಾವಿರಕ್ಕೂ ಅಧಿಕ ಆಡು, ಕುರಿ, ಜಾನುವಾರುಗಳ ರುಂಡ, ದೇಹದ ಭಾಗಗಳು ಪತ್ತೆಯಾಗಿದೆ. ಇದರಿಂದ ಪರಿಸರವಿಡೀ ವಾಸನೆ ಬರುತ್ತಿತ್ತು ಎನ್ನಲಾಗಿದೆ. ರಾಶಿ ರಾಶಿ ನೊಣಗಳು ಪ್ರಾಣಿಗಳ ಅಸ್ತಿಪಂಜರ ಮೇಲೆ ಮುತ್ತಿಕ್ಕುತ್ತಿದ್ದವು. ಆ ಕೋಣೆಯಲ್ಲಿ ಹೆಜ್ಜೆಹೆಜ್ಜೆಗೂ ಪ್ರಾಣಿಗಳ ದೇಹದ ಭಾಗಗಳು ಬಿದ್ದುಕೊಂಡಿದ್ದವು. ಮೇಯರ್ ದಾಳಿ ಸಂದರ್ಭ ಖಾಸಗಿ ಜಾಗದ ಮುಂಭಾಗದ ಕುರಿ ಸಾಕಾಣೆ ಕೇಂದ್ರದ ಕಟ್ಟಡ ತೆರೆದೇ ಇತ್ತು. ಆದರೆ ಹಿಂಭಾಗದ ಕಟ್ಟಡದತ್ತ ನೋಡುವಾಗ ಬೀಗ ಜಡಿದಿತ್ತು. ಬೀಗ ತೆರೆಯಲು ಯಾರೂ ಮುಂದಾಗದ ವೇಳೆ ಗರಂ ಆದ ಮೇಯರ್ ಮನೋಜ್ ಕುಮಾರ್ ಹಾಗೂ ಕಾರ್ಪೊರೇಟರ್ ಮನೋಹರ್ ಶೆಟ್ಟಿ, ತಾವೇ ಕಲ್ಲು ತಂದು ಬೀಗ ಮುರಿದು ಒಳನುಗ್ಗಿದ್ದಾರೆ.

ಇದನ್ನೂ ಓದಿ: ಗೋ ಹತ್ಯೆ ಮಾಡುವವರನ್ನು ಗುಂಡಿಕ್ಕಬೇಕು: ಸಚಿವ ಮಂಕಾಳು ವೈದ್ಯ ಹೇಳಿಕೆಗೆ ಪರಮೇಶ್ವರ ಹೇಳಿದ್ದಿಷ್ಟು

ಈ ಸಂದರ್ಭ ಜಾನುವಾರು ವಧೆ ಮಾಡುವ ಸ್ಥಳ, ತೂಕ ಮಾಪನ, ಮಾಂಸ ಜೋತು ಹಾಕುವ ಹುಕ್‌ಗಳು ಪತ್ತೆಯಾಗಿವೆ. ಇನ್ನು ಇದರ ವಿರುದ್ದ ಮಂಗಳೂರು ಉತ್ತರ ಬಿಜೆಪಿ ಶಾಸಕ ಡಾ.ವೈ ಭರತ್‌ ಶೆಟ್ಟಿ ಕೂಡ ಗರಂ ಆಗಿದ್ದಾರೆ. ಬ್ಯಾಂಕ್‌ ದರೋಡೆ ವೇಳೆ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದಾರೆ. ಹೀಗಾಗಿ ಗೋ ಹತ್ಯೆ ಮಾಡುವವರ ಕಾಲಿಗೂ ಪೊಲೀಸರು ಗುಂಡು ಹಾರಿಸಬೇಕು ಎಂದು ಸಚಿವ ಮಾಂಕಾಳು ವೈದ್ಯರೇ ಹೇಳಿದ್ಧಾರೆ. ನಾನು ಅದನ್ನ ಸ್ವಾಗತಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಪೊಲೀಸರು ಕ್ರಮ ಕೈಗೊಳ್ಳದೇ ಇದ್ದರೆ ಕಾನೂನು ಕೈಗೆತ್ತಿಗೊಳ್ಳುವ ಎಚ್ಚರಿಕೆ ಸಹ ಶಾಸಕರು ನೀಡಿದ್ದಾರೆ.

ಒಟ್ಟಾರೆ ಮಂಗಳೂರಿನಲ್ಲಿ ಅಕ್ರಮ ಕಸಾಯಿಖಾನೆಗಳು ಅಸ್ತಿತ್ವದಲ್ಲಿರೋದಕ್ಕೆ ಮತ್ತೆ ಪುರಾವೆ ಸಿಕ್ಕಿದೆ. ಗೋ ಕಳವು ಮಾಡಿ ನಗರದ ಹೃದಯಭಾಗದಲ್ಲಿ ಗೋ ವಧೆ ನಡೆಸಲಾಗುತ್ತಿದೆ. ಸ್ವತಃ ಮಂಗಳೂರು ಮೇಯರ್‌ ದಾಳಿಯಲ್ಲಿ ಈ ಅಕ್ರಮ ಪತ್ತೆಯಾಗಿರೋದ್ರಿಂದ ಮಂಗಳೂರಿನ ಬಿಜೆಪಿ ಶಾಸಕರು ಕೂಡ ಮೇಯರ್‌ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.