Shiradi Ghat Tunnel: ಶಿರಾಡಿ ಘಾಟ್ ಸುರಂಗ ಮಾರ್ಗಕ್ಕೆ ಅಸ್ತು ಅಂದ ಸಾರಿಗೆ ಸಚಿವ ಗಡ್ಕರಿ: ಪರಿಸರವಾದಿಗಳಿಂದ ಕೇಳಿಬಂತು ಅಪಸ್ವರ
ಕೇಂದ್ರದ ಈ ನಿರ್ಧಾರಕ್ಕೆ ಪರಿಸರ ಪ್ರೇಮಿಗಳು ಚಕಾರವೆತ್ತಿದ್ದಾರೆ. ಈಗಾಗಲೇ ಎತ್ತಿನಹೊಳೆ ಯೋಜನೆಯಿಂದಾಗಿ ಪಶ್ಚಿಮ ಘಟಕ್ಕೆ ಸಾಕಷ್ಟು ಹಾನಿಯಾಗಿದೆ. ಜಲ ಪ್ರಳಯ ಹಾಗೂ ಭೂಕುಸಿತ ಉಂಟಾಗುತ್ತಿದೆ. ಈ ನಡುವೆ ಸುರಂಗವನ್ನೂ ನಿರ್ಮಿಸಿದ್ರೆ ಪ್ರಕೃತಿಗೆ ಇನ್ನಷ್ಟು ಹಾನಿಯಾಗುತ್ತೆ ಅನ್ನೋದು ಪರಿಸರ ಪ್ರೇಮಿಗಳ ಆತಂಕ
ಭೂ ಮಾರ್ಗ, ವಾಯು ಮಾರ್ಗ ಮತ್ತು ಜಲಮಾರ್ಗ ಈ ಮೂರರಲ್ಲಿಯೂ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ರಾಜ್ಯದ ಏಕೈಕ ನಗರವೆಂದರೆ ಅದು ಮಂಗಳೂರು. ಹೀಗಾಗಿ ಹೆಚ್ಚಿನ ಸಾಮಾನು ಸರಂಜಾಮುಗಳು ಇಲ್ಲಿಂದಲೇ ರಾಜ್ಯ ರಾಜಧಾನಿಗೆ ಹೋಗುವುದುಂಟು. ಆದರೆ ಮಂಗಳೂರು-ಶಿರಾಡಿ ರಸ್ತೆ ಹದಗೆಟ್ಟಿರೋದ್ರಿಂದ ಇದಕ್ಕೊಂದು ಪರಿಹಾರ ಬೇಕೆಂಬುದು ಎಲ್ಲರ ಒಕ್ಕೊರಲ ಕೂಗಾಗಿತ್ತು. ಇದೀಗ ಇಲ್ಲಿನ ರಸ್ತೆ ಅಭಿವೃದ್ದಿಗೆ ಕೇಂದ್ರ (Union Transport Minister Nitin Gadkari) ಅಸ್ತು ಎಂದಿದ್ದು ಜೊತೆಗೆ ಸುರಂಗ ಮಾರ್ಗವೊಂದನ್ನು (Shiradi Ghat Tunnel Road) ಮಾಡುವುದಾಗಿಯೂ ಹೇಳಿದೆ. ಆದ್ರೆ ಈ ಸುರಂಗಮಾರ್ಗಕ್ಕೆ ಪರಿಸರವಾದಿಗಳಿಂದ (Environmentalists) ಅಪಸ್ವರ ಕೇಳಿ ಬಂದಿದ್ದು ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಶಿರಾಡಿಘಾಟ್ ಸುರಂಗ ಮಾರ್ಗ ನಿರ್ಮಾಣಕ್ಕೆ ಪರಿಸರವಾದಿಗಳ ಅಪಸ್ವರ:
ಹೌದು.. ಮಳೆಗಾಲ ಬಂತು ಅಂದರೆ ಸಾಕು ಕರಾವಳಿ ಭಾಗದಿಂದ ಬೆಂಗಳೂರು ಪ್ರಯಾಣ ಮಾಡೋದು ಅಂದರೆ ಜೀವ ಕೈಯಲ್ಲಿ ಹಿಡಿದಂತೆ ಭಾಸವಾಗುತ್ತೆ. ಇದೇ ಕಾರಣಕ್ಕೆ ಶಿರಾಡಿಘಾಟ್ ವಿಭಾಗದ ಮಾರನಹಳ್ಳಿ – ಅಡ್ಡಹೊಳೆ ನಡುವೆ ಚತುಷ್ಪಥ ನಿರ್ಮಾಣವಾಗಬೇಕು ಎಂದು ಕೆನರಾ ಚೇಂಬರ್ ಆಫ್ ಕಾಮರ್ಸ್ ಬೇಡಿಕೆಯಿಡುತ್ತಲೇ ಬಂದಿದೆ. ಕೆಲ ತಿಂಗಳ ಹಿಂದೆ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಸಂಸದ ಡಾ. ವಿರೇಂದ್ರ ಹೆಗ್ಗಡೆ ಕೂಡ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದು ರಸ್ತೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು.
ಈ ಎಲ್ಲಾ ಮನವಿಗಳ ಬಳಿಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸುಮಾರು 1,976 ಕೋಟಿ ರೂ. ಮೊತ್ತದ ಬಿಡ್ ಆಹ್ವಾನಿಸಲಾಗಿದೆ ಎಂದಿದ್ದಾರೆ. ಸಂಸದ ನಳೀನ್ ಕುಮಾರ್ ಕಟೀಲ್‌ಗೆ ಪತ್ರ ಬರೆದಿರುವ ಅವರು ಸಕಲೇಶಪುರದಿಂದ ಮಾರನಹಳ್ಳಿವರೆಗಿನ ಹದಗೆಟ್ಟಿರುವ ರಸ್ತೆ ಸಹ ದುರಸ್ತಿ ಮಾಡುವುದಾಗಿಯೂ ಹೇಳಿದ್ದಾರೆ ಎಂದು ಎಂ. ಗಣೇಶ್ ಕಾಮತ್, ಅಧ್ಯಕ್ಷರು-ಕೆನರಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಮಂಗಳೂರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕಾಮಗಾರಿಯ ಜೊತೆಯಲ್ಲಿ ಮಂಗಳೂರು-ಬೆಂಗಳೂರು ನಡುವಿನ ಸಂಚಾರಕ್ಕೆ ಸಂಚಾರ ಸಮಯ ಹಾಗೂ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಸುಮಾರು 15 ಸಾವಿರ ಕೋಟಿ ರೂ ವೆಚ್ಚದ 23 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಮೇ ತಿಂಗಳಲ್ಲಿ ಬಿಡ್ ಆಹ್ವಾನಿಸಲು ತೀರ್ಮಾನಿಸಲಾಗಿದೆ.
ಆದರೆ ಕೇಂದ್ರದ ಈ ನಿರ್ಧಾರಕ್ಕೆ ಪರಿಸರ ಪ್ರೇಮಿಗಳು ಚಕಾರವೆತ್ತಿದ್ದಾರೆ. ಈಗಾಗಲೇ ಎತ್ತಿನಹೊಳೆ ಯೋಜನೆಯಿಂದಾಗಿ ಪಶ್ಚಿಮ ಘಟಕ್ಕೆ ಸಾಕಷ್ಟು ಹಾನಿಯಾಗಿದೆ. ಜಲ ಪ್ರಳಯ ಹಾಗೂ ಭೂಕುಸಿತ ಉಂಟಾಗುತ್ತಿದೆ. ಈ ನಡುವೆ ಸುರಂಗವನ್ನೂ ನಿರ್ಮಿಸಿದ್ರೆ ಪ್ರಕೃತಿಗೆ ಇನ್ನಷ್ಟು ಹಾನಿಯಾಗುತ್ತೆ ಅನ್ನೋದು ಪರಿಸರ ಪ್ರೇಮಿಗಳ ಆತಂಕ ಎನ್ನುತ್ತಾರೆ ದಿನೇಶ್ ಹೊಳ್ಳ, ಪರಿಸರವಾದಿ-ಮಂಗಳೂರು.
ಸದ್ಯ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವರು ಮೂರು ಭರವಸೆಗಳ ಪತ್ರ ಕಳುಹಿಸಿಕೊಟ್ಟಿದ್ದಾರೆ. ಈ ಮೂರು ಯೋಜನೆಯಲ್ಲಿ ಸುರಂಗ ಮಾರ್ಗ ಯೋಜನೆಗೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂದೆ ಯಾವ ಯೋಜನೆಯನ್ನು ಸರ್ಕಾರ ಶೀಘ್ರವಾಗಿ ಕೈಗೆತ್ತಿಕೊಳ್ಳುತ್ತೆ, ಸಂಚಾರ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತೆ ಎಂದು ಕಾದುನೋಡಬೇಕಿದೆ.
ವರದಿ: ಅಶೋಕ್, ಟಿವಿ 9, ಮಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:40 am, Thu, 5 January 23