ಭ್ರಷ್ಟಾಚಾರ ಆರೋಪ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸ್ಪೀಕರ್ ಖಾದರ್ ಖಡಕ್ ತಿರುಗೇಟು
ತಮ್ಮ ವಿರುದ್ಧ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ಸ್ಪೀಕರ್ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ. 'ಅಸೂಯೆಗೆ ಮದ್ದಿಲ್ಲ' ಎಂದ ಖಾದರ್, ಲಿಖಿತ ದೂರು ನೀಡಿದರೆ ಉತ್ತರ ನೀಡುವುದಾಗಿ ಸವಾಲು ಹಾಕಿದ್ದಾರೆ. ವಿಧಾನಸಭೆ ಮತ್ತು ಶಾಸಕರ ಭವನದಲ್ಲಿನ ದುಂದುವೆಚ್ಚ ಮತ್ತು ಖರೀದಿ ಅಕ್ರಮಗಳ ಬಗ್ಗೆ ಕಾಗೇರಿ ದೂಷಿಸಿದ್ದರು. ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.

ಮಂಗಳೂರು, ಅಕ್ಟೋಬರ್ 29: ತಮ್ಮ ವಿರುದ್ಧ ಭ್ರಷ್ಟಾಚಾರ (Corruption) ಆರೋಪ ಮಾಡಿದ್ದ ಮಾಜಿ ಸ್ಪೀಕರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ. ಭ್ರಷ್ಟಾಚಾರದ ಆರೋಪ ವಿಚಾರ ನನ್ನ ಗಮನಕ್ಕೆ ಬಂದಿದೆ. ಎಲ್ಲ ರೋಗಕ್ಕೆ ಮದ್ದಿದೆ, ಆದರೆ ಅಸೂಯೆಗೆ ಮದ್ದಿಲ್ಲ. ಒಳ್ಳೇ ಕಾರ್ಯ ಆಗುವಾಗ ದೃಷ್ಟಿ ಬೊಟ್ಟು ಇಟ್ಟಂತೆ ಆರೋಪಿಸಿದ್ದಾರೆ. ಯಾರಿಗಾದರೂ ಸಂಶಯ ಇದ್ರೆ ನಾಳೆ ಬೆಳಗ್ಗೆ ಕಚೇರಿಯಲ್ಲಿ ಇರುತ್ತೇನೆ. ಏನಾದ್ರೂ ಕೇಳಬೇಕಿದ್ರೆ, ಸಂಶಯ ಇದ್ದರೆ ಬರಹ ರೂಪದಲ್ಲಿ ಕೊಡಲಿ. ಸಕಾರಾತ್ಮಕ ಉತ್ತರ ದೊರೆಯಲಿದೆ ಎಂದಿದ್ದಾರೆ.
ಎಲ್ಲೆಲ್ಲೋ ಕುಳಿತು ಮಾತಾನಾಡಿದ್ರೆ ಉತ್ತರ ಕೊಡಲು ಆಗುತ್ತಾ? ರಾಜಕೀಯ ವ್ಯಕ್ತಿಯಾಗಿ ನಾನು ಕೂಡ ಏನನ್ನೋ ಮಾತಾಡಬಹುದು. ಆದರೆ, ನಾನು ಸಂವಿಧಾನಬದ್ಧ ಸ್ಪೀಕರ್ ಸ್ಥಾನದಲ್ಲಿದ್ದೇನೆ. ನನ್ನ ಕರ್ತವ್ಯ ಮಾಡುತ್ತಿದ್ದೇನೆ. ನನ್ನ ವಿರುದ್ಧ ಆರೋಪ ಮೊದಲೇನಲ್ಲ. ಶಾಸಕ ಆಗಿದ್ದಾಗಿನಿಂದ ಈ ರೀತಿ ಮಾತುಗಳನ್ನು ಕೆಳಿಕೊಂಡೇ ಬಂದಿದ್ದೇನೆ ಎಂದು ಖಾದರ್ ಹೇಳಿದ್ದಾರೆ.
ಇದನ್ನೂ ಓದಿ: ಸ್ಪೀಕರ್ ಯುಟಿ ಖಾದರ್ ವಿರುದ್ಧವೇ ಕೇಳಿಬಂತು ಭ್ರಷ್ಟಾಚಾರ ಆರೋಪ: ಬಿಜೆಪಿ ಶಾಸಕ ಭರತ್ ಶೆಟ್ಟಿ ಹೇಳಿದ್ದೇನು?
ಸಂಸದ ಕಾಗೇರಿ ಆರೋಪ ಏನು?
ಸ್ಪೀಕರ್ ಯು.ಟಿ. ಖಾದರ್ ಲೂಟಿ ಖಾದರ್ ಹಂತಕ್ಕೆ ತಲುಪಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ಈ ಬಗ್ಗೆ ಪತ್ರ ಬರೆಯುತ್ತೇನೆ. ಖಾದರ್ ಇದನ್ನ ಸವಾಲಾಗಿ ಸ್ವೀಕರಿಸಬೇಕು, ಆರೋಪ ಮುಕ್ತರಾಗುತ್ತೇನೆ ಅಂತ ಹೇಳಬೇಕು ಎಂದು ಸಂಸದ ವಿಶ್ವೆಶ್ವರ ಹೆಗಡೆ ಕಾಗೇರಿ ಹೇಳಿದ್ದರು. ಸ್ಪೀಕರ್ ಖಾದರ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿರುವ ಕಾರಣ, ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶ ನೀಡಬೇಕು. ವಿಧಾನಸಭೆಯಲ್ಲಿ ಬಾಗಿಲಿಗೆ ಮರದ ಕೆತ್ತನೆಯ ಪ್ರಧಾನ ಬಾಗಿಲು., ಶಾಸಕರ ಭವನದಲ್ಲಿ ಹಾಸಿಗೆ, ದಿಂಬು ಇತರೆ ವಸ್ತುಗಳಿಗೆ ಖರೀದಿಯಲ್ಲಿ ಕೋಟ್ಯಂತರ ಹಣ ದುಂದುವೆಚ್ಚ ಆಗಿದೆ. ಬೇಕಾದವರಿಗೆ ಟೆಂಡರ್ ಕೊಟ್ಟಿರುವ ಆರೋಪ ಕೇಳಿ ಬಂದಿದೆ ಎಂದು ಹೇಳಿದ್ದರು.
ಸಭಾಂಗಣದಲ್ಲಿ ಹೊಸ ಟಿವಿ, ಎಐ ಮಾನಿಟರ್ ಸಿಸ್ಟಂ ಹಾಗೂ ಗಂಡಭೇರುಂಡ ಗಡಿಯಾರದ ಬಗ್ಗೆ ಚರ್ಚೆ ಆಯ್ತು. ರಿಕ್ಲೇನರ್ ಚೇರ್, ಮಸಾಜ್ ಚೇರ್ಗೆ ಬಹಳ ವಿರೋಧ ವ್ಯಕ್ತವಾಯ್ತು. ಶಾಸಕರ ಕೊಠಡಿಗಳ ಭದ್ರತೆಗೆ ಸ್ಮಾರ್ಟ್ ಡೋರ್ ಲಾಕರ್ , ಶಾಸಕರ ಭವನಕ್ಕೆ ಬಣ್ಣ, ಸುಣ್ಣ, ಕಾರ್ಪೆಟ್ ಹಾಕಿದ್ರು. ಪುಸ್ತಕ ಮೇಳಕ್ಕೆ 4.5 ಕೋಟಿ ವೆಚ್ಚ ಖರ್ಚು ಮಾಡಿದ್ರು. ಸ್ಪೀಕರ್ ಈ ರೀತಿ ಮಾಡುವ ಅವಶ್ಯಕತೆ ಇತ್ತಾ? ಇರಲಿಲ್ಲ. ಖರ್ಚು ವೆಚ್ಚದಲ್ಲೂ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಎಲ್ಲದರ ಬಗ್ಗೆ ತನಿಖೆ ನಡೆಸಲು ಸರ್ಕಾರ ಸೂಚಿಸಬೇಕು ಎಂದು ಕಾಗೇರಿ ಆಗ್ರಹಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:09 pm, Wed, 29 October 25



