ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: 60 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಡಿಸಿ
ಮಂಡ್ಯ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. CL7 ಪರವಾನಗಿಗಾಗಿ 60 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಡಿಸಿ ನಾಗಾಶಯನ ವಿರುದ್ಧ ಕೇಳಿಬಂದಿದೆ. ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಜಾತಿ ರಾಜಕಾರಣದ ಆರೋಪಗಳೂ ಕೇಳಿಬಂದಿದ್ದು. ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮಂಡ್ಯ, ಆಗಸ್ಟ್ 16: ಮಂಡ್ಯ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ (Excise Department Corruption) ಮಿತಿ ಮೀರಿದೆ. CL7 ಲೈಸೆನ್ಸ್ ನೀಡಲು 60ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟ ಗಂಭೀರ ಆರೋಪ ಮಂಡ್ಯ (Mandya) ಅಬಕಾರಿ ಇಲಾಖೆ ಡಿಸಿ ವಿರುದ್ಧ ಕೇಳಿಬಂದಿದೆ. ಮಂಡ್ಯ ಅಬಕಾರಿ ಇಲಾಖೆ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುತ್ತಲೆ ಇರುತ್ತದೆ. ಇದೀಗ, ಮಂಡ್ಯ ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿ ನಾಗಾಶಯನ ಅವರು CL7 ಲೈಸೆನ್ಸ್ ನೀಡಲು 60ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಎದುರಿಸುತ್ತಿದ್ದಾರೆ.
ಕೆಆರ್ ಪೇಟೆಯ ಸುಂದರ್ ಎಂಬುವವರು ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅಂದಹಾಗೇ ಕೆಆರ್ ಪೇಟೆಯ ಸೋಮನಹಳ್ಳಿ ಗ್ರಾಮದಲ್ಲಿ MBS ಬೋರ್ಡಿಂಗ್ & ಲಾಡ್ಜಿಂಗ್ ಹೆಸರಿನ ಕಟ್ಟಡ ನಿರ್ಮಿಸಿರುವ ಸುಂದರ್ ತಮ್ಮ ತಂದೆಯ ಹೆಸರಲ್ಲಿ CL7 ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಬ್ಯಾಂಕಿನಿಂದ ಸಾಲ ಪಡೆದು ಕಾನೂನು ಬದ್ಧವಾಗಿ 1.20ಕೋಟಿ ವೆಚ್ಚದಲ್ಲಿ ಕಟ್ಟಡ ಕಟ್ಟಲಾಗಿದೆ. ಅಗತ್ಯ 11 ದಾಖಲೆ ಸಮೇತ ವರ್ಷದ ಹಿಂದೆಯೇ ಅರ್ಜಿ ಸಲ್ಲಿಕೆಯಾಗಿದ್ದರೂ, ತಿರಸ್ಕೃತವಾಗಿದೆ.
ಇನ್ಸ್ಪೆಕ್ಟರ್, ಡೆಪ್ಯೂಟಿ ಸೂಪರ್ಡೆಂಟ್ ಶಿಫಾರಸ್ಸು ಮಾಡಿದರೂ ವಿನಾಕಾರಣ ತಡೆಹಿಡಿಯಲಾಗಿದೆ. ಅಷ್ಟೇ ಅಲ್ಲ ನಾಲ್ಕು ವಾರದೊಳಗೆ ನಿಯಮಾನುಸಾರ ಕ್ರಮವಹಿಸುವಂತೆ ಹೈಕೋರ್ಟ್ ನಿರ್ದೇಶನ ನೀಡದರೂ, ಅಬಕಾರಿ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಏಕೆಂದರೆ ಅರ್ಜಿದಾರ ಸುಂದರ್ ಅವರು ಅಧಿಕಾರಿಗಳ ಕೇಳಿದಷ್ಟು ಲಂಚ ಕೊಡದೆ ಇರುವುದೇ ಇಷ್ಟಕ್ಕೆಲ್ಲ ಕಾರಣ ಅಂತ ಆರೋಪ ಮಾಡಿದ್ದಾರೆ.
CL7 ಲೈಸೆನ್ಸ್ ನೀಡಲು ಮಂಡ್ಯ ಅಬಕಾರಿ ಡಿಸಿ ನಾಗಾಶಯನ 60ಲಕ್ಷ ಲಂಚ ಕೇಳಿದ್ದಾರಂತೆ. ಇಷ್ಟೇ ಅಲ್ಲದೇ ಲೈಸೆನ್ಸ್ ಸಿಗಬೇಕಾದರೆ ಯಾವ ರೀತಿ ಜಾತಿ ರಾಜಕಾರಣ ಮಾಡಬೇಕು ಎಂಬ ಕಿವಿ ಮಾತನ್ನು ಕೂಡ ಹೇಳಿಕೊಟ್ಟಿದ್ದಾರಂತೆ.
“ಜೆಡಿಎಸ್‌ನವರಿಗಾದರೆ ಲೈಸೆನ್ಸ್ ಸಿಗುವುದು ಕಷ್ಟ. ನಿಮ್ಮೂರಿನ ಕುರುಬ ನಾಯಕರನ್ನು ಸಿಎಂ ಸಿದ್ದರಾಮಯ್ಯ, ಅವರ ಮಗ ಯತೀಂದ್ರ ಬಳಿಗೆ, ಒಕ್ಕಲಿಗ ನಾಯಕರನ್ನು ಚಲುವರಾಯಸ್ವಾಮಿ ಬಳಿಗೆ ಕರೆದುಕೊಂಡು ಹೋಗಿ ಹೇಳಿಸಿ ಆಗ ಲೈಸೆನ್ಸ್ ಸಿಗುತ್ತದೆ” ಎಂದು ಡಿಸಿ ನಾಗಾಶಯನ ಅವರು ಸುಂದರ್ ಅವರಿಗೆ ಪೋನ್ ಕರೆ ಮೂಲಕ ಹೇಳಿದ್ದಾರೆ. ನಾಗಾಶಯನ ಮಾತನಾಡಿರುವ ಆಡಿಯೋವನ್ನು ಸುಂದರ್ ಅವರು ಲೋಕಾಯುಕ್ತಕ್ಕೆ ನೀಡಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಅಬಕಾರಿ ಅಧಿಕಾರಿಗಳ ಲಂಚಕ್ಕೆ ಬೇಸತ್ತ ಮಾಲೀಕರು
ಭ್ರಷ್ಟಚಾರದ ಆಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಅಬಕಾರಿ ಡಿಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಅಬಕಾರಿ ಡಿಸಿ ವಿರುದ್ಧ ಇಲಾಖೆ ಕಾರ್ಯದರ್ಶಿಗೆ ದೂರು ನೀಡಲು ತಯಾರಿ ನಡೆಸಿದ್ದಾರೆ.
ಪ್ರಕರಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಲೈಸೆನ್ಸ್ ಪ್ರಕರಣ ಈಗಾಗಲೇ ಕೋರ್ಟ್ನಲ್ಲಿದೆ. ಡಿಸಿಯವರು ಆ ಕುರಿತು ಮಾತನಾಡುವ ಅವಶ್ಯಕತೆ ಇರಲಿಲ್ಲ. ಅಬಕಾರಿ ಡಿಸಿ ಮಾತನಾಡಿದ್ರೆ ಆ ಕುರಿತು ವರದಿ ತರಿಸಿಕೊಳ್ಳುತ್ತೇನೆ. ವರದಿ ಮೇಲೆ ಕ್ರಮಕೈಗೊಳ್ಳುವಂತೆ ಇಲಾಖೆ ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸುತ್ತೇನೆ. ಮುಖ್ಯಮಂತ್ರಿಗಳು, ಮುಖ್ಯಮಂತ್ರಿ ಪುತ್ರ, ಸಚಿವರ ಹೆಸರನ್ನು ಹೇಳಬಾರದಿತ್ತು. ಸಂಪೂರ್ಣ ಮಾಹಿತಿ ಪಡೆದು ಕ್ರಮಕೈಗೊಳ್ಳಲು ಸೂಚಿಸುತ್ತೇನೆ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Sat, 16 August 25



