
ಬಾಗಲಕೋಟೆ: ಶತಮಾನದ ಪ್ರವಾಹಕ್ಕೆ ಆ ಗ್ರಾಮ ನಲುಗಿ ಹೋಗಿತ್ತು. ಜಲ ದಾಳಿಗೆ ಮನೆಗಳೇ ಮುಳುಗಿದ್ವು. ನೂರಾರು ಜನ ಬೀದಿಗೆ ಬಿದ್ದಿದ್ರು. ಇದ್ರ ಜೊತೆಗೆ ಪ್ರಸಿದ್ಧ ದೇವಸ್ಥಾನಕ್ಕೂ ಜಲದಿಗ್ಬಂಧನ ಆಗಿತ್ತು. ಆದ್ರೀಗ, ಚೇತರಿಸಿಕೊಂಡಿರೋ ಜನ ಅಖಾಡಕ್ಕೆ ಪೈಲ್ವಾನರನ್ನ ಇಳಿಸಿ, ಫುಲ್ ಎಂಜಾಯ್ ಮಾಡಿದ್ರು.
ಕಟ್ಟು ಮಸ್ತಾದ ದೇಹ.. ಅಖಾಡದಲ್ಲಿ ಸೆಣಸಾಡುವಷ್ಟು ತೋಳ್ಬಲ.. ಎದುರಾಳಿಗಳ ವಿರುದ್ಧ ತೊಡೆ ತಟ್ಟೋ ಜಗಜಟ್ಟಿಗಳು.. ಪೈಲ್ವಾನ್ ಅಂತಾ ಬೀಗಿದವರಿಗೆ ಮಣ್ಣು ಮುಕ್ಕಿಸೋ ಮದಗಜಗಳು..
ಅಂದ್ಹಾಗೆ, ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಾಚಕನೂರು ಗ್ರಾಮ ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿತ್ತು. ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಕೂಡ ಮುಳುಗಡೆಯಾಗಿತ್ತು. ಸದ್ಯ ಇದೇ ಹೊಳೆಬಸವೇಶ್ವರ ದೇವಾಲಯದ ಜಾತ್ರೆ ಅದ್ದೂರಿಯಾಗಿ ನಡೀತು. ಹೀಗಾಗಿ ವಿಶೇಷವಾಗಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಿದ್ರು. ಹರಿಯಾಣ, ಮಹಾರಾಷ್ಟ್ರ, ಉತ್ತರಪ್ರದೇಶ ಹಾಗೂ ಪಂಜಾಬ್ನ ಕುಸ್ತಿ ಪಟುಗಳು ಅಖಾಡದಲ್ಲಿ ತೊಡೆ ತಟ್ಟಿದ್ರು. ಒಬ್ಬರಿಗಿಂತ ಒಬ್ಬರು ಮದಗಜಗಳಂತೆ ಕಾದಾಡಿದ್ರು.
ಇನ್ನು, ಈ ಕುಸ್ತಿ ಕಣದಲ್ಲಿ ಚಿಕ್ಕ ಮಕ್ಕಳು ಕೂಡ ತಮ್ಮ ಖದರ್ ತೋರಿಸಿ ಎಲ್ಲರ ಗಮನ ಸೆಳೆದರು. ವಿಶೇಷ ಅಂದ್ರೆ, ಪ್ರಥಮ ಬಹುಮಾನ 75ಸಾವಿರ, ದ್ವಿತೀಯ ಬಹುಮಾನ 50 ಸಾವಿರ ಹಾಗೂ ಮೂರನೇ ಬಹುಮಾನ 25 ಸಾವಿರ ರೂಪಾಯಿ ನಿಗಧಿ ಮಾಡಲಾಗಿತ್ತು. ಇನ್ನು ಕುಸ್ತಿ ನೋಡೋದಕ್ಕೆ ಅಂತ್ಲೇ ಸಾವಿರಾರು ಸಂಖ್ಯೆಯಲ್ಲಿ ಜನಸೇರಿದ್ದರು.