ಬೆಂಗಳೂರು, ಅಕ್ಟೋಬರ್ 11: ಗೌರಿ ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ ಹೀಗೆ ಹಬ್ಬಗಳ ಸೀಸನ್ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ ಲಾಟರಿ. ಸಿಕ್ಕಿದ್ದೇ ಚಾನ್ಸ್ ಎಂದು ಜನರಿಂದ ಸುಲಿಗೆಗೆ ಇಳಿದುಬಿಡುತ್ತಾರೆ. ರಜೆ ಅಂತ ಮನೆ ಕಡೆ ಹೊರಟವರ ಜೇಬಿಗೆ ಕನ್ನ ಹಾಕುತ್ತಾರೆ. ಹೀಗೆ ಅವಕಾಶ ಸಿಕ್ಕಗಾಲೆಲ್ಲ ದರ ಏರಿಸುವ ಪ್ರವೇಟ್ ಬಸ್ ಮಾಲೀಕರು ದಸರಾ ಹಬ್ಬಕ್ಕೆ ಎರಡ್ಮೂರು ದಿನಗಳ ರಜೆ ಇದೆ ಅಂತ ಮನೆ ಕಡೆ ಹೋಗಲು ಸಜ್ಜಾದವರಿಗೆ ಟಿಕೆಟ್ ದರ ಏರಿಕೆ ಶಾಕ್ ನೀಡಿದ್ದಾರೆ.
ಶುಕ್ರವಾರ ಆಯುಧ ಪೂಜೆ, ಶನಿವಾರ ವಿಜಯದಶಮಿ, ಭಾನುವಾರ ಹೇಗೂ ರಜೆ ಇದ್ದು, ಒಟ್ಟು ಮೂರು ದಿನಗಳ ಕಾಲ ರಜೆ. ಹೀಗಾಗಿ ಗುರುವಾರವೇ ಊರಿಗೆ ತೆರಳಲು ಜನರು ಮುಂದಾಗಿದ್ದರು. ಆದರೆ ಖಾಸಗಿ ಬಸ್ಗಳಲ್ಲಿ ಟಿಕೆಟ್ ದರ ದುಪ್ಪಟ್ಟು ಏರಿಕೆ ಆಗಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ದಸರಾ ಹಬ್ಬದ ಪ್ರಯುಕ್ತ ಊರಿಗೆ ಹೋಗುವವರಿಗೆ ಕೆಎಸ್ಆರ್ಟಿಸಿ 2 ಸಾವಿರ ಹೆಚ್ಚುವರಿ ಬಸ್ ಗಳನ್ನು ನಿಯೋಜನೆ ಮಾಡಿದೆ. ಆದಾಗ್ಯೂ ಅವುಗಳಲ್ಲಿಯೂ ಬಹುತೇಕ ಸೀಟ್ಗಳನ್ನು ಮುಂಗಡ ಕಾಯ್ದಿರಿಸಲಾಗಿದೆ.
ಹಬ್ಬಗಳ ಸೀಸನ್ನಲ್ಲಿ ಟಿಕೆಟ್ ದರ ಏರಿಕೆಯನ್ನು ಖಾಸಗಿ ಬಸ್ ಮಾಲೀಕರು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಪ್ರತಿಕ್ರಿಯಿಸಿದ್ದು, ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರು ಬೀದಿಗೆ ಬಂದಿದ್ದೇವೆ. ಮೊದಲು ಶಕ್ತಿ ಯೋಜನೆಯನ್ನು ನಿಲ್ಲಿಸಿ. ನಾವು ಮಾತ್ರ ಅಲ್ಲ ಕೆಎಸ್ಆರ್ಟಿಸಿ ಬಸ್ಸಿನವರು ಕೂಡ ಟಿಕೆಟ್ ದರ ಹೆಚ್ಚಳ ಮಾಡುತ್ತಾರೆ. ಇದನ್ನು ಬಂಡವಾಳ ಮಾಡಿಕೊಳ್ಳುವ ಆರ್ಟಿಒ ಅಧಿಕಾರಿಗಳು, ಸುಳ್ಳು ಕೇಸ್ಗಳನ್ನು ದಾಖಲಿಸಿ ನಮಗೆ ತೊಂದರೆ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದಸರಾ ಹಬ್ಬದ ವಿಶೇಷ ಬಸ್ಗಳು ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಒಟ್ಟಿನಲ್ಲಿ ಈ ಬಾರಿಯ ದಸರಾ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಒಂದೆಡೆ ಖಾಸಗಿ ಬಸ್ಸುಗಳು ದರ ಏರಿಕೆ ಮಾಡಿ ಶಾಕ್ ನೀಡಿದರೆ, ಅತ್ತ ಕೆಎಸ್ಆರ್ಟಿಸಿ ಎರಡು ಸಾವಿರ ಬಸ್ಗಳ ಹೆಚ್ಚುವರಿ ನಿಯೋಜನೆ ಮಾಡಿ ಸ್ವಲ್ಪ ರಿಲೀಫ್ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ