ಅಮ್ಮನ ಮೊಬೈಲ್​ಗಾಗಿ ಮಗಳ ಪರದಾಟ ಪ್ರಕರಣ; ಆಸ್ಪತ್ರೆಯಲ್ಲೂ ಸಿಗದ ಮೊಬೈಲ್

ಅಮ್ಮನ ಮೊಬೈಲ್​ಗಾಗಿ ಮಗಳ ಪರದಾಟ ಪ್ರಕರಣ; ಆಸ್ಪತ್ರೆಯಲ್ಲೂ ಸಿಗದ ಮೊಬೈಲ್
ಮೊಬೈಲ್ ಹುಡುಕಿಕೊಡುವಂತೆ ಪುಟ್ಟ ಕಂದಮ್ಮನ ಮನವಿ

ಅಮ್ಮನ ಮೊಬೈಲ್​ಗಾಗಿ ಪರದಾಟ ಪಡುತ್ತಿರುವ ಮಗಳು ಹೃತಿಕ್ಷ ಮೊಬೈಲ್ ಸಿಕ್ಕೆ ಸಿಗುತ್ತೆ ಎನ್ನುವ ಭರವಸೆಯಲ್ಲಿದ್ದಾಳೆ. ಪೊಲೀಸರು, ಜಿಲ್ಲಾಧಿಕಾರಿಗಳು ಮೊಬೈಲ್ ಹುಡುಕಿಕೊಡುತ್ತೇವೆ ಎಂದು ಹೇಳಿದ್ದಾರೆ. ನನ್ನ ತಾಯಿಯ ನೆನಪುಗಳಿವೆ. ಹೀಗಾಗಿ ನನಗೆ ಆ ಮೊಬೈಲ್ ಬೇಕೆ ಬೇಕು ಎಂದು ಟಿವಿ9 ಡಿಜಿಟಲ್​ನೊಂದಿಗೆ ಬೇಸರ ವ್ಯಕ್ತಪಡಿಸಿದ್ದಾಳೆ.

sandhya thejappa

|

May 24, 2021 | 2:16 PM

ಕೊಡಗು: ಅಮ್ಮ ಇಲ್ಲದ ಮನೆ ಮನೇನೆ ಅಲ್ಲ ಅಂತಾರೆ. ಆದರೆ ಈ ಮಹಾಮಾರಿ ಕೊರೊನಾ ಅದೆಷ್ಟೋ ಜನರ ತಾಯಿಯನ್ನು ಬಲಿ ಪಡೆದು ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ. ಹೀಗೆ ಕೊಡಗು ಜಿಲ್ಲೆಯ ಗುಮ್ಮನಕೊಲ್ಲಿ ಗ್ರಾಮದ ಪುಟ್ಟ ಬಾಲಕಿ ಕೊರೊನಾ ಸೋಂಕಿನಿಂದ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದಾಳೆ. ಮೊಬೈಲ್​ನಲ್ಲಿ ನನ್ನ ಅಮ್ಮನ ನೆನಪುಗಳಿವೆ. ದಯವಿಟ್ಟು ಅಮ್ಮನ ಮೊಬೈಲ್​ನ ಹಿಂದಿರುಗಿಸಿ ಎಂದು ತಾಯಿಯನ್ನು ಕಳೆದುಕೊಂಡ ಮಗಳು ಕೊಡಗು ಜಿಲ್ಲಾಧಿಕಾರಿಗೆ, ಕೊವಿಡ್ ಆಸ್ಪತ್ರೆ ಸಿಬ್ಬಂದಿಗೆ, ಶಾಸಕರಿಗೆ ಪತ್ರ ಬರೆದಿದ್ದಳು. ಅಮ್ಮನ ನೆನಪಿರುವ ಆ ಮೊಬೈಲ್​ನ ನನಗೆ ಬೇಕು ಹುಡುಕಿಕೊಡಿ ಎಂದು ಪುಟ್ಟ ಹುಡುಗಿ ಅಂಗಲಾಚಿ ಕೇಳಿದ್ದಳು. ಆದರೆ ಮೊಬೈಲ್ ಇನ್ನು ಸಿಗಲೇ ಇಲ್ಲ.

ಅಮ್ಮನ ಮೊಬೈಲ್​ಗಾಗಿ ಪರದಾಟ ಪಡುತ್ತಿರುವ ಮಗಳು ಹೃತಿಕ್ಷ ಮೊಬೈಲ್ ಸಿಕ್ಕೆ ಸಿಗುತ್ತೆ ಎನ್ನುವ ಭರವಸೆಯಲ್ಲಿದ್ದಾಳೆ. ಪೊಲೀಸರು, ಜಿಲ್ಲಾಧಿಕಾರಿಗಳು ಮೊಬೈಲ್ ಹುಡುಕಿಕೊಡುತ್ತೇವೆ ಎಂದು ಹೇಳಿದ್ದಾರೆ. ನನ್ನ ತಾಯಿಯ ನೆನಪುಗಳಿವೆ. ಹೀಗಾಗಿ ನನಗೆ ಆ ಮೊಬೈಲ್ ಬೇಕೆ ಬೇಕು ಎಂದು ಟಿವಿ9 ಡಿಜಿಟಲ್​ನೊಂದಿಗೆ ಬೇಸರ ವ್ಯಕ್ತಪಡಿಸಿದ್ದಾಳೆ.

ನಿನ್ನೆ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದ 10 ಮೊಬೈಲ್​ಗಳನ್ನು ಪರಿಶೀಲಿಸುವಂತೆ ಆಸ್ಪತ್ರೆ ವೈದ್ಯರು ಹೇಳಿದ್ದರು. ಹೀಗಾಗಿ ಮೃತ ಪ್ರಭಾಳ ಸಹೋದರ ಸಂತೋಷ್ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿರುವ 10 ಮೊಬೈಲ್​ಗಳಲ್ಲಿ ಮೃತ ಮಹಿಳೆಯ ಮೊಬೈಲ್ ಇಲ್ಲ. ಹೀಗಾಗಿ ತಾಯಿಯ ಮೊಬೈಲ್​ಗಾಗಿ ಮಗಳು ಹೃತಿಕ್ಷಾ ಪರಿತಪಿಸುತ್ತಿದ್ದಾಳೆ.

ಮೊಬೈಲ್ ಬಗ್ಗೆ ದೂರು ದಾಖಲಾಗಿದೆ. ಡಿಎಸ್​ಪಿ ಹುಡುಕಿ ಕೊಡುತ್ತೇವೆ ಅಂತ ಹೇಳಿದ್ದಾರೆ. ಆಸ್ಪತ್ರೆಯಲ್ಲಿದ್ದ 11 ದಿನಗಳಲ್ಲಿ 9 ದಿನ ನನ್ನ ಹೆಂಡತಿ ನನ್ನ ಜೊತೆ ಮೊಬೈಲ್ನಲ್ಲಿ ಮಾತನಾಡಿದ್ದಾರೆ. ಹೀಗಾಗಿ ಮೊಬೈಲ್ ಆಸ್ಪತ್ರೆಯಲ್ಲಿಯೇ ಕಳೆದು ಹೋಗಿದೆ. ಕಳೆದು ಹೋದ ಮೊಬೈಲ್​ಗೆ ಕರೆ ಮಾಡಿದ್ದಾಗ ಮೊದಲು ರಿಂಗ್ ಆಗಿತ್ತು. ಆ ನಂತರ ಸ್ವಿಚ್ಛ್ ಆಫ್ ಆಗಿದೆ. ಪತ್ನಿಯ ಫೋಟೋ ಆ ಮೊಬೈಲ್​ನಲ್ಲಿದೆ. ಹೀಗಾಗಿ ಮಗಳು ಆ ಮೊಬೈಲ್ ಬೇಕೆಂದು ಪಟ್ಟು ಹಿಡಿದ್ದಾಳೆ ಅಂತ ಹೃತಿಕ್ಷಾ ತಂದೆ ಟಿವಿ9 ಡಿಜಿಟಲ್​ಗೆ ತಿಳಿಸಿದರು.

ನಾವು ಕೂಲಿ ಕೆಲಸ ಮಾಡಿ ಬದುಕುತ್ತಿದ್ದೇವೆ. ಲಾಕ್​ಡೌನ್​ನಿಂದ 20 ದಿನಗಳಾಯ್ತು ಯಾವ ಕೆಲಸವೂ ಇಲ್ಲ. ತಿನ್ನುವುದಕ್ಕೂ ಕಷ್ಟವಾಗಿದೆ. ಈ ನಡುವೆ ಏಳೆಂಟು ಸಾವಿರ ರೂಪಾಯಿಯ ಮೊಬೈಲ್ ತೆಗೆದುಕೊಳ್ಳುವ ಸಾಮರ್ಥ್ಯನೂ ನಮಗೆ ಇಲ್ಲ. ಯಾರಾದರೂ ಮೊಬೈಲ್ ತೆಗೆದುಕೊಂಡರೆ ದಯವಿಟ್ಟು ಕೊಡಿ. ಅವರ ವಿರುದ್ಧ ಕೇಸ್​ ಹಾಕಲ್ಲ ಎಂದು ಮೃತ ಮಹಿಳೆಯ ಪತಿ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ

ಕೊರೊನಾಕ್ಕೆ ತಾಯಿ ಕಳೆದುಕೊಂಡ ಹುಡುಗಿಯ ಭಾವುಕ ಪತ್ರ: ಅಮ್ಮನ ಮೊಬೈಲ್ ಸಿಕ್ಕರೆ ಹಿಂದಿರುಗಿಸಿ

ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಸುಳ್ಳು ಸುದ್ದಿಗಳ ಹಾವಳಿ: ಧಾರವಾಡ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಆತಂಕ

(daughter who was struggle for her mother mobile could not find mobile at kodagu)

Follow us on

Related Stories

Most Read Stories

Click on your DTH Provider to Add TV9 Kannada