ದಾವಣಗೆರೆ: 10 ನೇ ತರಗತಿ ಪಠ್ಯ ಪುಸ್ತಕದಲ್ಲಿ ಆರ್ಎಸ್ಎಸ್ (RSS) ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ ಮಾಡಿದ್ದು, ಆದರ್ಶ ಪುರುಷ ಯಾರಾಗಬೇಕು? ಏನೆಲ್ಲ ಗುಣ ಇರಬೇಕು? ಇದನ್ನೆಲ್ಲ ಮಕ್ಕಳು ಕಲಿಯಬೇಕು. ಹೀಗಾಗಿ ಈ ಗದ್ಯ ಸೇರ್ಪಡೆ ಮಾಡಲಾಗಿದೆ. ಸದ್ಯ ಪಠ್ಯದಲ್ಲಿನ ಹೆಗ್ಡೆವಾರ್ ಭಾಷಣವನ್ನು ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದು, ಇದರಲ್ಲಿ ತಪ್ಪೇನಿದೆ, ನಿನ್ನೆ ಪಠ್ಯಪುಸ್ತಕ ತರಿಸಿಕೊಂಡು ಓದಿದ್ದೇನೆ ಎಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದೇವರಕೊಟ್ಟ ಹೆಲಿಪ್ಯಾಡ್ನಲ್ಲಿ ಹೇಳಿಕೆ ನೀಡಿದರು. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಲಾಗಿದೆ. ಪಠ್ಯದ ಬಗ್ಗೆ ಹಲವಾರು ಮಠಾಧೀಶರುಗಳು ಪತ್ರ ಬರೆದಿದ್ದಾರೆ. ಹೀಗಾಗಿ ಬಸವಣ್ಣನವರ ವಿಚಾರಗಳ ಬಗ್ಗೆ ಸಣ್ಣಪುಟ್ಟ ತಿದ್ದುಪಡಿ ಮಾಡಿ ಮಕ್ಕಳಿಗೆ ಪುಸ್ತಕ ವಿತರಿಸಲಾಗುವುದು. ನಮ್ಮದು ಬಸವ ಪಥ ಸರ್ಕಾರ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜಿಸಿದ ಸಿಎಂ ಬೊಮ್ಮಾಯಿ
ಹಿಂದುತ್ವ ಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಚಿಂತಕ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯನ್ನು (Text Book Revision Committee) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಸರ್ಜಿಸಿದ್ದಾರೆ. ಪಠ್ಯ ಪರಿಷ್ಕರಣೆಯ ಕ್ರಮಗಳ ಬಗ್ಗೆ ಎದ್ದಿರುವ ವಿವಾದಗಳ ಕಾರಣಕ್ಕೆ ಅಥವಾ ಯಾವುದೇ ಒತ್ತಡಕ್ಕೆ ಮಣಿದು ಈ ಸಮಿತಿಯನ್ನು ವಿಸರ್ಜಿಸುತ್ತಿಲ್ಲ ಎಂಬ ಸೂಚನೆಯನ್ನೂ ಪತ್ರಿಕಾ ಪ್ರಕಟಣೆಯಲ್ಲಿ ಮುಖ್ಯಮಂತ್ರಿ ನೀಡಿದ್ದಾರೆ. ಪರೋಕ್ಷವಾಗಿ ಸಮಿತಿಯ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಶಾಲಾ ಶಿಕ್ಷಣದಲ್ಲಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ಕಾಲಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ರಾಜ್ಯದಲ್ಲಿ ಹಲವು ಬಾರಿ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral News: ನಾನೇ ಪಾರ್ವತಿ, ಶಿವನನ್ನು ಮದುವೆಯಾಗುತ್ತೇನೆ; ಭಾರತ-ಚೀನಾ ಗಡಿಯಲ್ಲಿ ಮಹಿಳೆಯ ಹೈಡ್ರಾಮಾ
ಸರ್ಕಾರದ ಈ ಕ್ರಮದೊಂದಿಗೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ವಿವಾದವೊಂದಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಂತೆ ಆಗಿದೆ. ಆದರೆ, ಮುಖ್ಯಮಂತ್ರಿಯ ಈ ಕ್ರಮವು ಪಠ್ಯಪರಿಷ್ಕರಣೆ ವಿವಾದವನ್ನು ಸಂಪೂರ್ಣ ಶಮನ ಮಾಡಿಲ್ಲ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ ಆಗಿರುವ ಪಠ್ಯ ಪರಿಷ್ಕರಣೆ ತಿರಸ್ಕರಿಸಬೇಕು. ಅಂಬೇಡ್ಕರ್, ಕನ್ನಡ ಧ್ವಜ ಮತ್ತು ರಾಷ್ಟ್ರಕವಿ ಕುವೆಂಪು ಅವರಿಗೆ ಈ ಹಿಂದೆ ಅವಮಾನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ, ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಾಯ ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:55 pm, Sat, 4 June 22