T20 Blast: ಸಿಕ್ಸ್-ಫೋರ್ಗಳ ಸುರಿಮಳೆ: ಟಿ20 ಬ್ಲಾಸ್ಟ್ನಲ್ಲಿ ಅಬ್ಬರಿಸಿದ RCB ಆಟಗಾರ
ಟಿ20 ಬ್ಲಾಸ್ಟ್ನ ನಾರ್ತ್ ಗ್ರೂಪ್ ಪಂದ್ಯದಲ್ಲಿ ಯಾರ್ಕ್‌ಷೈರ್ ಹಾಗೂ ಡರ್ಹಾಮ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಯಾರ್ಕ್‌ಷೈರ್ ನಾಯಕನಾಗಿ ಕಾಣಿಸಿಕೊಂಡ ಡೇವಿಡ್ ವಿಲ್ಲಿ ಆಲ್ರೌಂಡರ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಸೀಸನ್ 15 ನಲ್ಲಿ ಆರ್ಸಿಬಿ (RCB) ತಂಡವು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಹೊಸ ನಾಯಕ ಫಾಫ್ ಡುಪ್ಲೆಸಿಸ್ ನೇತೃತ್ವದಲ್ಲಿ ಕಣಕ್ಕಿಳಿದ ಆರ್ಸಿಬಿ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಸೋಲುವ ಮೂಲಕ ಐಪಿಎಲ್ ಅಭಿಯಾನ ಅಂತ್ಯಗೊಳಿಸಿತ್ತು. ವಿಶೇಷ ಎಂದರೆ ಈ ಬಾರಿ 22 ಆಟಗಾರರನ್ನು ಒಳಗೊಂಡ ಆರ್ಸಿಬಿ ಪರ 17 ಆಟಗಾರರು ಕಣಕ್ಕಿಳಿದಿದ್ದರು. ಇವರಲ್ಲಿ ಆಲ್ರೌಂಡರ್ ಡೇವಿಡ್ ವಿಲ್ಲಿ ಕೂಡ ಒಬ್ಬರು. ಆರ್ಸಿಬಿ ತಂಡದ ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಂಡ ವಿಲ್ಲಿಗೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಲೀಗ್ನಲ್ಲಿ ಡೇವಿಡ್ ವಿಲ್ಲಿ ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.
ಟಿ20 ಬ್ಲಾಸ್ಟ್ನ ನಾರ್ತ್ ಗ್ರೂಪ್ ಪಂದ್ಯದಲ್ಲಿ ಯಾರ್ಕ್‌ಷೈರ್ ಹಾಗೂ ಡರ್ಹಾಮ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಯಾರ್ಕ್‌ಷೈರ್ ನಾಯಕನಾಗಿ ಕಾಣಿಸಿಕೊಂಡ ಡೇವಿಡ್ ವಿಲ್ಲಿ ಆಲ್ರೌಂಡರ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಈ ಮ್ಯಾಚ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ ಡರ್ಹಾಮ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿತ್ತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಯಾರ್ಕ್ಷೈರ್ಗೆ ಆ್ಯಡಂ ಲಿತ್ ಸ್ಪೋಟಕ ಆರಂಭ ಒದಗಿಸಿದ್ದರು. ಕೇವಲ 33 ಎಸೆತಗಳನ್ನು ಎದುರಿಸಿದ ಲಿತ್ 10 ಫೋರ್ ಹಾಗೂ 3 ಸಿಕ್ಸ್ನೊಂದಿಗೆ 77 ರನ್ ಬಾರಿಸಿದ್ದರು. ಮತ್ತೊಂದೆಡೆ ಫಿನ್ ಅಲೆನ್ ಕೇವಲ 12 ಎಸೆತಗಳಲ್ಲಿ 29 ರನ್ ಸಿಡಿಸಿದರು. ಈ ಮೂಲಕ ಯಾರ್ಕ್ಷೈರ್ಗೆ ಭರ್ಜರಿ ಆರಂಭ ಒದಗಿಸಿದ್ದ ಈ ಜೋಡಿಯ ನಿರ್ಗಮನದ ಬಳಿಕ ನಾಯಕ ಡೇವಿಡ್ ವಿಲ್ಲಿ ಕಣಕ್ಕಿಳಿದರು.
ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡೇವಿಡ್ ವಿಲ್ಲಿ, ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 39 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 75 ರನ್ ಬಾರಿಸಿದರು. ಈ ಮೂಲಕ 17.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸುವ ಮೂಲಕ ಯಾರ್ಕ್ಷೈರ್ಗೆ 6 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
ಈ ಬಾರಿ ಆರ್ಸಿಬಿ ಪರ 4 ಪಂದ್ಯಗಳನ್ನಾಡಿದ ಡೇವಿಡ್ ವಿಲ್ಲಿ ನಿರೀಕ್ಷಿತ ಆಟ ಪ್ರದರ್ಶಿಸುವಲ್ಲಿ ವಿಫಲರಾಗಿದ್ದರು. ಆಡಿದ ನಾಲ್ಕು ಪಂದ್ಯಗಳಿಂದ ಕೇವಲ 18 ರನ್ ಮಾತ್ರ ಕಲೆಹಾಕಿದ್ದರು. ಇನ್ನು ಬೌಲಿಂಗ್ನಲ್ಲಿ ಒಂದು ವಿಕೆಟ್ ಮಾತ್ರ ಪಡೆದಿದ್ದರು. ಈ ಕಳಪೆ ಪ್ರದರ್ಶನದ ಹೊರತಾಗಿಯೂ ಇದೀಗ ಟಿ20 ಬ್ಲಾಸ್ಟ್ನಲ್ಲಿ ಅಬ್ಬರಿಸುವ ಮೂಲಕ ಡೇವಿಡ್ ವಿಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.