ದಾವಣಗೆರೆ: ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಕಥೆ ಮುಗಿದಿದೆ. ಅದನ್ನ ಸುಡಬೇಕೋ, ಹೂಳಬೇಕೋ ಎಂಬ ಪ್ರಶ್ನೆ ಇದೆ. ಬಿಜೆಪಿಯವರದ್ದು ಬಸವಕೃಪ ಅಂದರೆ ಹೂಳಬೇಕಾಗುತ್ತೆ. ಕೇಶವಕೃಪ ಅಂದರೆ ಸುಡಬೇಕಾದ ಸ್ಥಿತಿ ಇದೆ. ಸಿಎಂ ಬೊಮ್ಮಾಯಿ ಸರ್ಕಾರ ಪಂಕ್ಚರ್ ಆಗಿರುವ ಬಸ್. ಅದು ಯಾವಾಗ ಏನಾಗುತ್ತೆ ಎಂಬುದು ಗೊತ್ತಿಲ್ಲ. ಕೆಲವೇ ದಿನಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬಹುದು ಎಂದು ದಾವಣಗೆರೆಯಲ್ಲಿ ಎಂಎಲ್‌ಸಿ ಸಿ.ಎಂ. ಇಬ್ರಾಹಿಂ ಬಿಜೆಪಿ ವಿರುದ್ಧ ಭಾನುವಾರ ವ್ಯಂಗ್ಯವಾಡಿದ್ದಾರೆ.
ರಾಮಮಂದಿರ ಆಯಿತು, ಗೋಹತ್ಯೆ ನಿಷೇಧವಾಯಿತು. ಇದೀಗ ಬಿಜೆಪಿಯವರು ಹಿಜಾಬ್ ವಿವಾದ ಹಿಡಿದಿದ್ದಾರೆ. ಬಿಜೆಪಿಯವರಿಗೆ ಹಿಜಾಬ್ ಅಂದರೆ ಅರ್ಥವೇ ಗೊತ್ತಿಲ್ಲ. ವಿದ್ಯಾರ್ಥಿಗಳು ಹೆಗಲ ಮೇಲೆ ವೇಲ್ ಹಾಕಿಕೊಳ್ಳುತ್ತಾರೆ. ಅದೇ ವೇಲ್ ತಲೆ ಮೇಲೆ ಹಾಕಿಕೊಂಡರೆ ಏನು ತಪ್ಪು? ಎಂದು ದಾವಣಗೆರೆಯಲ್ಲಿ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ.
ಈ ವೇಳೆ, ವಿ.ಎಸ್. ಉಗ್ರಪ್ಪಗೆ ಎಂಎಲ್‌ಸಿ ಸಿ.ಎಂ. ಇಬ್ರಾಹಿಂ ಸವಾಲು ಹಾಕಿದ್ದಾರೆ. ವಕ್ಫ್ ಆಸ್ತಿ ಕಬಳಿಸಿರುವುದಾಗಿ ಆರೋಪ ಮಾಡಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತುಪಡಿಸಲಿ. ವಿ.ಎಸ್.ಉಗ್ರಪ್ಪ ಗಂಡಸಾಗಿದ್ದರೆ ಅದನ್ನ ಸಾಬೀತುಪಡಿಸಲಿ. ವಿ.ಎಸ್.ಉಗ್ರಪ್ಪ ವಕೀಲ, ನಾನು ಅವರ ಕಕ್ಷಿದಾರ. ವಕೀಲರು ಅವರ ಕಕ್ಷಿದಾರರ ಪರವಾಗಿ ಇರಬೇಕು. ಅದುಬಿಟ್ಟು ಕಕ್ಷಿದಾರರ ವಿರುದ್ಧ ವಾದ ಮಾಡುತ್ತಿದ್ದಾರೆ ಎಂದು ಸಿ.ಎಂ.ಇಬ್ರಾಹಿಂ ಕುಟುಕಿದ್ದಾರೆ.
ಕಾಂಗ್ರೆಸ್ ಬಿಟ್ಟುಹೋಗಲ್ಲವೆಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ: ಜಮೀರ್ ಅಹ್ಮದ್ ವಿಶ್ವಾಸ
ಹಿಜಾಬ್ ಇವತ್ತಿನದ್ದಲ್ಲ, ತುಂಬಾ ಹಿಂದಿನಿಂದ ಧರಿಸಲಾಗುತ್ತಿದೆ. ಹಿಜಾಬ್ ವಿಚಾರ ಕೋರ್ಟ್ನಲ್ಲಿರುವುದರಿಂದ ಹೆಚ್ಚು ಮಾತಾಡಲ್ಲ. ಹಿಜಾಬ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಹಿಂದೂ ಮುಸ್ಲಿಂ ಅಂತ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸರ್ಕಾರದ ಸಾಧನೆ ಹೆಸರಿನಲ್ಲಿ ಬಿಜೆಪಿಯವರು ಮತ ಕೇಳಲ್ಲ. ಈ ರೀತಿ ಗೊಂದಲ ಸೃಷ್ಟಿಸುವುದು ಬಿಜೆಪಿಯವರ ಕೆಲಸ. ನ್ಯಾಯಾಲಯದ ತೀರ್ಪು ನಮ್ಮ ಪರ ಬರುವ ವಿಶ್ವಾಸವಿದೆ. ಶ್ರೀರಾಮಮಂದಿರ ತೀರ್ಪು ಸ್ವಾಗತಿಸಿದಂತೆಯೇ ಸ್ವಾಗತಿಸುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ಖಾನ್ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಯಾವುದೇ ಗೊಂದಲ, ಒಡಕಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರಲು, ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ ಎಂದು ಜಮೀರ್ ಅಹ್ಮದ್ಖಾನ್ ತಿಳಿಸಿದ್ದಾರೆ.
ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಬಿಟ್ಟೋಗಲ್ಲವೆಂಬ ವಿಶ್ವಾಸವಿದೆ. ಸಿದ್ದರಾಮಯ್ಯರನ್ನ ಬಿಟ್ಟು ಸಿ.ಎಂ.ಇಬ್ರಾಹಿಂ ಎಲ್ಲೂ ಹೋಗಲ್ಲ. ಸಿ.ಎಂ.ಇಬ್ರಾಹಿಂ ನಮ್ಮ ಪಕ್ಷದ ಹಿರಿಯ ನಾಯಕರು. ಸಿ.ಎಂ.ಇಬ್ರಾಹಿಂ ಜತೆ ಸಿದ್ದರಾಮಯ್ಯನವರು ಮಾತಾಡಿದ್ದಾರೆ. ಸಿ.ಎಂ.ಇಬ್ರಾಹಿಂ ಮುಂದೆ ನಾನು ಬಚ್ಚಾ. ಕಾಂಗ್ರೆಸ್ ಬಿಟ್ಟುಹೋಗಲ್ಲವೆಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ ಎಂದು ಜಮೀರ್ ಅಹ್ಮದ್ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರುನಾಡಿನ ಸಂಸ್ಕೃತಿ ಎತ್ತಿಹಿಡಿದಿದ್ದಾಳೆ: ಮುಸ್ಕಾನ್ ಧೈರ್ಯ, ದಾನಪ್ರಜ್ಞೆಗೆ ಸಿಎಂ ಇಬ್ರಾಹಿಂ ಶ್ಲಾಘನೆ
ಇದನ್ನೂ ಓದಿ: ಚುನಾವಣೆಗೆ ಬೇರೇನೂ ವಿಷಯವಿಲ್ಲ ಅಂತ ಹಿಜಾಬ್ ವಿಷಯ ದೊಡ್ಡದು ಮಾಡ್ತಿದ್ದಾರೆ: ಇಬ್ರಾಹಿಂ ಆರೋಪ
Published On - 2:41 pm, Sun, 13 February 22