AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರುನಾಡಿನ ಸಂಸ್ಕೃತಿ ಎತ್ತಿಹಿಡಿದಿದ್ದಾಳೆ: ಮುಸ್ಕಾನ್ ಧೈರ್ಯ, ದಾನಪ್ರಜ್ಞೆಗೆ ಸಿಎಂ ಇಬ್ರಾಹಿಂ ಶ್ಲಾಘನೆ

CM Ibrahim: ಮುಷ್ಕಾನ್ ಅವರು ಪಠಾಣ ಜನಾಂಗಕ್ಕೆ ಸೇರಿದವರು, ಗಟ್ಟಿಯಾಗಿದ್ದಾರೆ. ನನ್ನ ತಾಯಿಯೂ ಇದೆ ಜನಾಂಗದವರು ಎಂದು ನೆನಪಿಸಿಕೊಂಡರು.

ಕರುನಾಡಿನ ಸಂಸ್ಕೃತಿ ಎತ್ತಿಹಿಡಿದಿದ್ದಾಳೆ: ಮುಸ್ಕಾನ್ ಧೈರ್ಯ, ದಾನಪ್ರಜ್ಞೆಗೆ ಸಿಎಂ ಇಬ್ರಾಹಿಂ ಶ್ಲಾಘನೆ
ಸಿಎಂ ಇಬ್ರಾಹಿಂ
TV9 Web
| Edited By: |

Updated on: Feb 11, 2022 | 10:16 PM

Share

ಮಂಡ್ಯ: ವಿದ್ಯಾರ್ಥಿನಿ ಮುಸ್ಕಾನ್​ಗೆ ದೇವರು ಒಳ್ಳೆಯ ಧೈರ್ಯ ನೀಡಿದ್ದಾನೆ. ತನಗೆ ನೀಡಿರುವ ಹಣವನ್ನು ಬಡವರಿಗೆ ನೀಡುವುದಾಗಿ ಭರವಸೆ ಕೊಟ್ಟಿದ್ದಾಳೆ. ದಾನ-ಧರ್ಮದ ಬಗ್ಗೆ ಮುಸ್ಕಾನ್ ಆಡಿರುವ ಮಾತುಗಳು ಮೆಚ್ಚುವಂಥದ್ದು. ಈ ಹುಡುಗಿ ಕರುನಾಡಿನ ಸಂಸ್ಕೃತಿ ಎತ್ತಿಹಿಡಿದಿದ್ದಾಳೆ. ಎಲ್​ಎಲ್​ಬಿ ಓದುವುದಾಗಿ ಮುಸ್ಕಾನ್ ಇಂಗಿತ ವ್ಯಕ್ತಪಡಿಸಿದ್ದಾಳೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದರು. ಹಿಜಾಬ್ ವಿವಾದದ ವೇಳೆ ಮಂಡ್ಯ ಪಿಇಎಸ್​ ಕಾಲೇಜಿಗೆ ಬರುತ್ತಿದ್ದ ಕೆಲ ಬುರ್ಖಾಧಾರಿ ಯುವತಿಯರ ಎದುರು ಕೆಲ ಯುವಕರು ಕೇಸರಿ ಶಾಲು ತಿರುವುತ್ತಾ ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ತನ್ನ ಸುತ್ತ ನೆರೆದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದ್ದರಿಂದ ಆ ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಳು. ಈ ಘಟನೆಯ ನಂತರ ಹಲವು ಮುಖಂಡರು ಮುಸ್ಕಾನ್ ಮನೆಗೆ ಭೇಟಿ ನೀಡುತ್ತಿದ್ದಾರೆ. ಅದರಂತೆ ಶುಕ್ರವಾರ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಸಹ ಮುಸ್ಕಾನ್ ಮನೆಗೆ ಭೇಟಿ ನೀಡಿದರು. ‘ಕಾಲೇಜು ಆವರಣದಲ್ಲಿ ನಡೆದ ಘಟನೆ ಬಗ್ಗೆ ವಿವರಣೆ ಪಡೆದಿದ್ದೇನೆ. ಕೆಲವು ಯುವಕರು ದಾಳಿ ಮಾಡಲು ಬಂದಂತೆ ಧಾವಿಸಿ ಬಂದಿದ್ದರು. ಅವರು ಘೋಷಣೆ ಕೂಗುತ್ತಿದ್ದರಿಂದ ನಾನೂ ಘೋಷಣೆ ಕೂಗಿದೆ. ಕಾಲೇಜಿನ ಸಿಬ್ಬಂದಿ ಮತ್ತು ಅಲ್ಲಿದ್ದ ಹಿಂದೂಗಳು ನನಗೆ ನೆರವು ನೀಡಿದರು’ ಎಂದು ಮುಸ್ಕಾನ್ ವಿವರಿಸಿದ್ದಾಳೆ ಎಂದರು.

ವಿದ್ಯಾರ್ಥಿನಿ ಮುಸ್ಕಾನ್‌ಗೆ ನಾನು ಯಾವುದೇ ಗಿಫ್ಟ್‌ ಕೊಟ್ಟಿಲ್ಲ. ಅವಳಿಗೆ ಗಿಫ್ಟ್‌ ನೀಡುವ ಅಗತ್ಯವೂ ಇಲ್ಲ. ಅವರು ಫಸ್ಟ್ ಪ್ಲೋರ್‌ನಲ್ಲಿ ಇದ್ದಾರೆ, ಎಲ್ಲಾ ಅನುಕೂಲವಿದೆ. ಇವರು ಪಠಾಣ ಜನಾಂಗಕ್ಕೆ ಸೇರಿದವರು, ಗಟ್ಟಿಯಾಗಿದ್ದಾರೆ. ನನ್ನ ತಾಯಿಯೂ ಇದೆ ಜನಾಂಗದವರು ಎಂದು ನೆನಪಿಸಿಕೊಂಡರು.

ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್​ ನೀಡುವ ಯಾವುದೇ ಆದೇಶವನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಈಶ್ವರಪ್ಪ ಅವರರಲ್ಲಿ ನಾನು ವಿನಂತಿಸುವುದು ಒಂದೇ. ಈ ವಿಚಾರವನ್ನು ದೊಡ್ಡದು ಮಾಡಬೇಡಿ. ವೋಟ್​ಗಾಗೇ ಇದನ್ನೆಲ್ಲ ಮಾಡಿದ್ದೀರಿ ಎಂದು ಜಗತ್ತಿಗೆ ಗೊತ್ತಿದೆ. ಇದರಿಂದ ನಿಮಗೆ ಹೆಚ್ಚು ಮತ ಸಿಗುವುದಿಲ್ಲ. ತಲೆ ಮೇಲೆ ಸೆರಗು ಹಾಕುವುದು ನಮ್ಮ ಸಂಸ್ಕೃತಿ. ಸೆರಗು ಹಾಕುವುದು ಬೇಡವೆಂದು ಯಾವುದೇ ಕೋರ್ಟ್​ ಹೇಳಲ್ಲ. ಹೆಣ್ಣಿನ ಮೈಮುಚ್ಚುವುದೇ ನಮ್ಮ ಸಂಸ್ಕೃತಿ, ಆಕೆಗೆ ಸೌಂದರ್ಯ. ದೇಶ ಒಡೆಯಲು ನೋವು ಬರಲಿಲ್ಲ ಅವರಿಗೆ, ಇನ್ನು ಮಕ್ಕಳ ಮನಸ್ಸು ಒಡೆಯಲು ನೋವು ಬರುತ್ತಾ ಅವರಿಗೆ ಎಂದು ವ್ಯಂಗ್ಯವಾಡಿದರು.

ಬೊಮ್ಮಣ್ಣ ನೀನು, ನಿಮ್ಮಪ್ಪ ನಮ್ಮ ಜತೆಯಿದ್ದವರು. ಸಿಎಂ ಬಸವರಾಜ ಬೊಮ್ಮಾಯಿಯವರೇ ಅಧಿಕಾರ ಶಾಶ್ವತವಲ್ಲ. ನಿಮ್ಮಪ್ಪನ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಸಮಾನರಾಗಿ ನೋಡು. ಎಲ್ಲಾ ಮಕ್ಕಳನ್ನು ಒಂದು ತಾಯಿಯ ಮಕ್ಕಳಂತೆ ನೋಡಬೇಕು. ಹಿಜಾಬ್ ವಿವಾದದ ಹಿಂದೆ ಇದುರ ಸಿಎಫ್​ಐ ಕೈವಾಡದ ಬಗ್ಗೆ ತನಿಖೆಯಾಗಬೇಕು. ತಪ್ಪು ಯಾರೇ ಮಾಡಿದ್ದರೂ ಹಿಡಿದು ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಸಿಎಫ್​ಐ ಅಂದ್ರೆ ಮಂಡ್ಯಕ್ಕಾಗಲಿ, ಈ ಮಕ್ಕಳಿಗೆ ಏನೂ ಗೊತ್ತಿಲ್ಲ ಎಂದರು.

ಕಾಂಗ್ರೆಸ್​ ವಿದಾಯ: ಅಸ್ಪಷ್ಟ ನಿಲುವು

ಕಾಂಗ್ರೆಸ್‌ಗೆ ರಾಜೀನಾಮೆ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಸಿ.ಎಂ.ಇಬ್ರಾಹಿಂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತಾಡಿದರು. ಕಾಂಗ್ರೆಸ್ ನಾಯಕರು ನನ್ನ ಜತೆ ಮಾತಾಡುತ್ತಿದ್ದಾರೆ. ನನ್ನನ್ನು ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳಲು, ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಚರ್ಚೆಗೆ ಬರುವಂತೆ ದೆಹಲಿಯಿಂದಲೂ ಆಹ್ವಾನ ಬಂದಿದೆ. ಯಾರು ಕರೆದಿದ್ದಾರೆ, ಯಾರನ್ನು ಭೇಟಿಯಾಗಬೇಕೆಂದು ಹೇಳಲ್ಲ. ನವದೆಹಲಿಗೆ ಹೋಗುವ ಬಗ್ಗೆ ಒಂದೆರಡು ದಿನಗಳಲ್ಲಿ ಹೇಳುತ್ತೇನೆ ಎಂದರು.

ಮೋದಿಗೂ ದೇವೇಗೌಡರಿಗೂ ವ್ಯತ್ಯಾಸವಿದೆ

ನರೇಂದ್ರ ಮೋದಿ ಅವರ ಬಳಿ ದುಡ್ಡಿಗಾಗಿ ಅಂಗಲಾಚುವ ಪರಿಸ್ಥಿತಿ ಬಂದಿದೆ. ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಈ ಪರಿಸ್ಥಿತಿ ಇರಲಿಲ್ಲ. ಅಂದು ಕನ್ನಡಿಗರಿಗೆ ದೇವೇಗೌಡರ ಮನೆ ಬಾಗಿಲು ಸದಾ ತೆರೆದಿರುತ್ತಿತ್ತು. ಡಾ.ರಾಜ್​​ಕುಮಾರ್​​ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕೊಟ್ಟ ಕಾಲ ಅದು. ಸಾಕಷ್ಟು ನೀರಾವರಿ ಯೋಜನೆಗಳನ್ನು ಜಾರಿ ಮಾಡಿದೆವು. ರಾಜ್ಯಕ್ಕೆ ಹಣವು ಹರಿದುಬರ್ತಿತ್ತು. ಈಗ ನಾವು ದೆಹಲಿಯಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನನಗೆ ವ್ಯಕ್ತಿಗತ ಬೇಡಿಕೆಗಿಂತಲೂ ರಾಜ್ಯದ ಹಿತ ಮುಖ್ಯ. ಅಂದು ಎಚ್.ಡಿ.ದೇವೇಗೌಡರ ಮಾರ್ಗದರ್ಶನ ಪಡೆದಿದ್ದೆ. ಇಂದು ಕೂಡ ಅವರ ಮಾರ್ಗದರ್ಶನ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ: ಚುನಾವಣೆಗೆ ಬೇರೇನೂ ವಿಷಯವಿಲ್ಲ ಅಂತ ಹಿಜಾಬ್ ವಿಷಯ ದೊಡ್ಡದು ಮಾಡ್ತಿದ್ದಾರೆ: ಇಬ್ರಾಹಿಂ ಆರೋಪ

ಇದನ್ನೂ ಓದಿ: ಸಿ.ಎಂ ಇಬ್ರಾಹಿಂ ನನ್ನ ಸ್ನೇಹಿತ; ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಲ್ಲ: ಸಿದ್ದರಾಮಯ್ಯ ಹೇಳಿಕೆ