ದಾವಣಗೆರೆ ಖಾಸಗಿ ಬಸ್ ನಿಲ್ದಾಣಕ್ಕೆ ಶಾಮನೂರು ಹೆಸರಿಡಲು ಕಾಂಗ್ರೆಸ್ ಆಗ್ರಹ; ವಾಜಪೇಯಿ ಹೆಸರಿಡಲು ಬಿಜೆಪಿ ರೆಸಲ್ಯೂಷನ್ ಪಾಸ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 03, 2022 | 12:01 PM

ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಉನ್ನತೀಕರಿಸಲಾದ ಬಸ್ ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಈಗ ರಾಜಕೀಯ ಶುರುವಾಗಿದೆ.

ದಾವಣಗೆರೆ ಖಾಸಗಿ ಬಸ್ ನಿಲ್ದಾಣಕ್ಕೆ ಶಾಮನೂರು ಹೆಸರಿಡಲು ಕಾಂಗ್ರೆಸ್ ಆಗ್ರಹ; ವಾಜಪೇಯಿ ಹೆಸರಿಡಲು ಬಿಜೆಪಿ ರೆಸಲ್ಯೂಷನ್ ಪಾಸ್
ದಾವಣಗೆರೆ
Follow us on

ದಾವಣಗೆರೆ: ನಗರದ ಹೃದಯ ಭಾಗದಲ್ಲಿ 28.67 ಕೋಟಿ ರೂಪಾಯಿ ವೆಚ್ಚದಲ್ಲಿ ಫುನರ್ ನಿರ್ಮಾಣ ಆಗುತ್ತಿರುವ ಹಳೇ ಖಾಸಗಿ ಬಸ್ ನಿಲ್ದಾಣಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲು ಬಿಜೆಪಿ ಮುಂದಾಗಿದೆ. ಪಾಲಿಕೆಯಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನಿನ್ನೆ(ಡಿ.1) ಏಕ ಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದು, ಕಾಂಗ್ರೆಸ್ ಕಟುವಾಗಿ ವಿರೋಧಿಸಿದೆ. 2005 ರಲ್ಲಿ ಹಳೇ ಬಸ್ ನಿಲ್ದಾಣಕ್ಕೆ ಡಾ.ಶಾಮನೂರು ಶಿವಶಂಕರಪ್ಪ ಅವರ ಹೆಸರಿಡಲು ಸರ್ವ ಸದಸ್ಯರು ಒಪ್ಪಿ ಸರ್ಕಾರಕ್ಕೆ ಕಳುಹಿಸಿ ಅದೇಶ ಕೂಡ ಮಾಡಿಸಲಾಗಿತ್ತು. ಆದರೆ ಸಂಸದ ಜಿ.ಎಂ.ಸಿದ್ದೇಶ್ವರ್ ಈಗ ಹೆಸರಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಲಿಕೆ ಬಿಜೆಪಿ ಸದಸ್ಯರು ಈ ಮೊದಲು ಶಾಮನೂರು ಶಿವಶಂಕರಪ್ಪ ಹೆಸರನ್ನು ನಿಯಮಾವಳಿ ಪ್ರಕಾರ ಇಟ್ಟಿರಲಿಲ್ಲ. ಅನಧಿಕೃತವಾಗಿ ಹೆಸರು ನಾಮಕರಣ ಮಾಡಿದ್ದರು. ನಾವು ಹಳೇ ಬಸ್ ನಿಲ್ದಾಣಕ್ಕೆ ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲು ನಿರ್ಧರಿಸಿದ್ದೇವೆ. ಈ ಬಗ್ಗೆ ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ತೀರ್ಮಾನ ಸರ್ಕಾರಕ್ಕೆ ಕಳುಹಿಸಿ ಆದೇಶ ಮಾಡಿಸಿ ಹೆಸರಿಡುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕಾಂಗ್ರೆಸ್ ಮುಂಡರು ಬರೀ ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಅವರ ಬಳಿ ಸೂಕ್ತ ದಾಖಲೆ ಇದ್ದರೆ ಪಾಲಿಕೆಗೆ ಸಲ್ಲಿಸಲಿ ನಂತರ ನೋಡೋಣ ಎನ್ನುತ್ತಾರೆ ಪಾಲಿಕೆ ಆಡಳಿತ ಪಕ್ಷದ ಸದಸ್ಯ ಎಸ್.ಟಿ.ವೀರೇಶ್.

ಇದನ್ನೂ ಓದಿ: ಬೆಂಗಳೂರು: ಕಲ್ಯಾಣ ಮಂಟಪಕ್ಕೂ ತಟ್ಟಿದ ಚಿರತೆ ಭಯ; ಹಾಲ್​ ಕಡೆ ಮುಖಮಾಡದ ಜನ, 30 ಬಗೆಯ ಅಡುಗೆ ವ್ಯರ್ಥ

ಬಿಜೆಪಿ, ಕಾಂಗ್ರೆಸ್ ಹೆಸರಿನ ರಾಜಕೀಯ ನೋಡಿದ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ರಾಜಕೀಯ ಮಾಡದೆ, ನಿಸ್ವಾರ್ಥ ಕೊಡುಗೈ ದಾನಿಗಳಾದ ರಾಜನಹಳ್ಳಿ ಹನುಮಂತಪ್ಪ, ಚಿಗಟೇರಿ, ಚನ್ನಗಿರಿ ಫ್ಯಾಮಿಲಿಗಳ ಹೆಸರು ನಾಮಕರಣ ಮಾಡಬೇಕು. ಜನರ ತೆರಿಗೆ ಹಣದಿಂದ ಅಭಿವೃದ್ಧಿ ಪಡಿಸಿದ ಕಾಮಗಾರಿಗಳಿಗೆ ರಾಜಕಾರಣಿಗಳ ಹೆಸರು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಹೆಸರಿನ ರಾಜಕೀಯ ಎಲ್ಲಿಗೆ ಹೋಗಿ ನಿಲ್ಲತ್ತದೆ ಎಂದು ಕಾದು ನೋಡಬೇಕಾಗಿದೆ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ