
ದಾವಣಗೆರೆ, ಜುಲೈ 2: ದಾವಣಗೆರೆ (Davanagere) ಜಿಲ್ಲಾ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ (OT) ಜೂನ್ 30 ರಂದು ನಡೆದ ಅಗ್ನಿ ಅವಘಡಕ್ಕೆ ಸಂಬಂಧಿಸಿ ತನಿಖೆಯಲ್ಲಿ ಆಘಾತಕಾರಿ ಸತ್ಯಗಳು ಹೊರಬಂದಿವೆ. ಆಸ್ಪತ್ರೆಯಲ್ಲಿ ಸುಸ್ಥಿತಿಯಲ್ಲಿ ಇಲ್ಲದ ಮತ್ತು ಬಳಸಲು ಯೋಗ್ಯವಲ್ಲದ ವೈದ್ಯಕೀಯ ಯಂತ್ರೋಪಕರಣಗಳನ್ನು ಬಳಸಿದ್ದೇ ಈ ಅಗ್ನಿ ದುರಂತಕ್ಕೆ ಕಾರಣ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ನೇಮಿಸಿದ್ದ ತನಿಖಾ ತಂಡ ಪತ್ತೆಹಚ್ಚಿದೆ. ಉಪ ವಿಭಾಗಾಧಿಕಾರಿ (AC) ಸಂತೋಷ್ ಕುಮಾರ್ ನೇತೃತ್ವದ ತಂಡವು ಸ್ಥಳಕ್ಕೆ ಭೇಟಿ ನೀಡಿ ಕೂಲಂಕಷ ತನಿಖೆ ನಡೆಸಿದ ಬಳಿಕ ಈ ತಾಂತ್ರಿಕ ಲೋಪಗಳು ಬೆಳಕಿಗೆ ಬಂದಿದೆ. ಜೂನ್ 30 ರಂದು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ ಸಂಭವಿಸಿ, ಅದೃಷ್ಟವಶಾತ್ ದೊಡ್ಡ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿತ್ತು.
ತನಿಖಾ ತಂಡದ ವರದಿಯ ಪ್ರಕಾರ, ಅಗ್ನಿ ಅವಘಡ ಸಂಭವಿಸಿದ ಆಪರೇಷನ್ ರೂಮ್‌ನಲ್ಲಿದ್ದ ‘ಅರಿವಳಿಕೆ ವರ್ಕ್ ಸ್ಟೇಷನ್’ (Anesthesia Workstation) ಸೇರಿದಂತೆ ಹಲವು ಪ್ರಮುಖ ಯಂತ್ರಗಳು ಸುಸ್ಥಿತಿಯಲ್ಲಿ ಇರಲಿಲ್ಲ. ಈ ಯಂತ್ರೋಪಕರಣಗಳಿಗೆ ಅಳವಡಿಸಲಾಗಿದ್ದ ಬ್ಯಾಟರಿಗಳು ಸಂಪೂರ್ಣವಾಗಿ ಹಾಳಾಗಿದ್ದವು. ಈ ಬಗ್ಗೆ ಆಸ್ಪತ್ರೆಯ ಯಂತ್ರಗಳ ಉಸ್ತುವಾರಿ ಹೊತ್ತಿದ್ದ ಖಾಸಗಿ ಏಜೆನ್ಸಿಯು ಮೊದಲೇ ಪರಿಶೀಲನೆ ನಡೆಸಿ, ಬ್ಯಾಟರಿಗಳನ್ನು ತಕ್ಷಣವೇ ಬದಲಾಯಿಸುವಂತೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಲಿಖಿತ ವರದಿ ನೀಡಿತ್ತು. ಆದರೆ, ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದ ವೈದ್ಯರು ಹಾಗೂ ಸಿಬ್ಬಂದಿ ಅದೇ ಹಾಳಾದ ಯಂತ್ರಗಳನ್ನು ಬಳಸುವ ಮೂಲಕ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರು ಈ ಎಲ್ಲಾ ಅಂಶಗಳನ್ನೊಳಗೊಂಡ ಅಧಿಕೃತ ವರದಿಯನ್ನು ಶೀಘ್ರದಲ್ಲೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.
ಮತ್ತೊಂದೆಡೆ, ಜಿಲ್ಲಾ ಆಸ್ಪತ್ರೆಯ ಈ ಅಗ್ನಿ ಅವಘಡವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಸಚಿವ ಯುಟಿ ಖಾದರ್, ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಸಚಿವರ ಆದೇಶದ ಬೆನ್ನಲ್ಲೇ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ತನಿಖಾ ತಂಡವು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಲ್ಲಿನ ಮುಖ್ಯ ವೈದ್ಯರೊಂದಿಗೆ ಸಮಾಲೋಚನೆ ನಡೆಸಿರುವ ಅಧಿಕಾರಿಗಳು, ಅಂದು ಕರ್ತವ್ಯದಲ್ಲಿದ್ದ ನರ್ಸಿಂಗ್ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಯಿಂದ ಇಂಚಿಂಚೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಆಕ್ಸಿಜನ್ ಸಿಲಿಂಡರ್ ಸ್ಫೋಟ: ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ
ತಪ್ಪಿತಸ್ಥ ಅಧಿಕಾರಿಗಳು ಹಾಗೂ ವೈದ್ಯರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವ ಮುನ್ಸೂಚನೆ ಲಭ್ಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ