ಕರ್ನಾಟಕದಾದ್ಯಂತ ಮುಂಗಾರು ಚುರುಕಾಗಿದೆ, ದಾವಣಗೆರೆಯಲ್ಲೂ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಕಳೆದ 10 ದಿನಗಳಲ್ಲಿ 76 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೂರು ಮನೆಗಳು ಸಂಪೂರ್ಣವಾಗಿ ಕುಸಿದಿವೆ, ಅತಿ ಹೆಚ್ಚು ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕಿನಲ್ಲಿ ಹಾನಿಯುಂಟಾಗಿವೆ.
ಚನ್ನಗಿರಿ ತಾಲೂಕಿನಲ್ಲಿ ಒಂದು ಮನೆ ಸಂಪೂರ್ಣ ಕುಸಿತ ಕಂಡರೆ 27 ಮನೆಗಳು ಭಾಗಶ ಹಾನಿ ಆಗಿವೆ. ಹೊನ್ನಾಳಿಯಲ್ಲಿ ಎರಡು ಸಂಪೂರ್ಣ ಕುಸಿತ, 12ಮನೆಗಳಿಗೆ ಭಾಗಶ ಹಾನಿಯುಂಟಾಗಿದೆ.
ದಾವಣಗೆರೆ 15, ಹರಿಹರದಲ್ಲಿ 5, ನ್ಯಾಮತಿ 13 ಹಾಗೂ ಜಗಳೂರನಲ್ಲಿ ಎರಡು ಮನೆಗಳಿಗೆ ಭಾಗಶ ಹಾನಿಯಾಗಿರುವ ಕುರಿತು ಅಪರ ಜಿಲ್ಲಾಧಿಕಾರಿ ಲೋಕೇಶ್ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲೂ ಮಳೆ: ಕಾಫಿನಾಡು ಚಿಕ್ಕಮಗಳೂರಿನಲ್ಲೂ ಕಾಫಿ ತೋಟಗಳು ಕೊಚ್ಚಿ ಹೋಗುತ್ತಿವೆ. ಜಲ ಸ್ಫೋಟದ ಹೊಡೆತಕ್ಕೆ ಒಂದು ಎಕರೆ ಕಾಫಿ, ಅಡಿಕೆ ತೋಟ ಸರ್ವನಾಶವಾಗಿದೆ.
ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ರಾಮು-ವಸಂತಿ ದಂಪತಿಗೆ ಸೇರಿದ ಕಾಫಿ ತೋಟದಲ್ಲಿ ಜಲಸ್ಫೋಟ ಉಂಟಾಗಿತ್ತು, ಅದರ ಪರಿಣಾಮ, ಮನೆಯ ಬಳಿಯೇ ಬಂಡೆಗಳು ಬಂದು ನಿಂತಿವೆ
ಕಷ್ಟಪಟ್ಟು ಕೂಲಿ ನಾಲಿ ಮಾಡಿ ಬೆಳೆಸಿದ ಕಾಫಿ ತೋಟ ಕ್ಷಣ ಮಾತ್ರದಲ್ಲಿ ನಾಶವಾಗಿದೆ. 30 ವರ್ಷಗಳ ಹಿಂದೆ ತಲೆ ಮೇಲೆ ಮಣ್ಣು ಹೊತ್ತು ತಂದು ತೋಟ ಮಾಡಿದ್ದೆ. ಇದೀಗ ಎಲ್ಲವೂ ಮಳೆಯಿಂದ ಕೊಚ್ಚಿಕೊಂಡು ಹೋಗಿದೆ. ಕಣ್ಣೆದುರೇ ಸರ್ವನಾಶವಾಗಿರುವ ತೋಟವನ್ನು ನೋಡಿ ಮಹಿಳೆ ಕಣ್ಣೀರಿಟ್ಟಿದ್ದಾರೆ.
ಮುಂದಿನ ನಾಲ್ಕು ದಿನ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲೂ ಭಾರಿ ಮಳೆಯಾಗಲಿವೆ ಎಂದು ಹೇಳಲಾಗಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಸುಬ್ರಹ್ಮಣ್ಯದಲ್ಲಿ 21 ಸೆಂ.ಮೀ ಮಳೆಯಾಗಿದೆ, ಮುಲ್ಕಿ, ಕ್ಯಾಸಲ್ರಾಕ್, ಮೂಡುಬಿದಿರೆ, ಬೆಳ್ತಂಗಡಿ, ಧರ್ಮಸ್ಥಳ, ಭಾಗಮಂಡಲ, ಜಯಪುರ, ಮಾಣಿ, ಕೊಟ್ಟಿಗೆಹಾರ, ಕಾರ್ಕಳ, ಶೃಂಗೇರಿ, ಪುತ್ತೂರಿನಲ್ಲೂ ಅಧಿಕ ಮಳೆಯಾಗಿದೆ.
ಉಡುಪಿ, ಕೊಲ್ಲೂರು, ಬಾಳೆಹೊನ್ನೂರು, ಲಿಂಗನಮಕ್ಕಿ, ಕಳಸ, ಕೋಟ, ಸೋಮವಾರಪೇಟೆ, ನಾಪೋಕ್ಲು, ಶಿರಾಲಿ, ಗೇರುಸೊಪ್ಪ, ವಿರಾಜಪೇಟೆ, ಪೊನ್ನಂಪೇಟೆಯಲ್ಲೂ ಭಾರಿ ಮಳೆ ಸುರಿದಿದೆ.
Published On - 3:50 pm, Mon, 11 July 22