ಬೆಂಗಳೂರು: ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಮೇಲೆ (Food Grains) ಶೇ 5ರ ಜಿಎಸ್ಟಿ (Goods and Service Tax – GST) ವಿಧಿಸಿರುವುದನ್ನು ಅಕ್ಕಿಗಿರಣಿ ಮಾಲೀಕರು ಮತ್ತು ಯಶವಂತಪುರ ಎಪಿಎಂಸಿ ಯಾರ್ಡ್ನ ವರ್ತಕರು ಹಾಗೂ ಕಾರ್ಮಿಕರು ಇಂದು ಮತ್ತು ನಾಳೆ (ಜುಲೈ 15-16) ಕಾರ್ಯಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ. ದಾವಣಗೆರೆಯ ಎಲ್ಲ 96 ಅಕ್ಕಿಗಿರಣಿಗಳು ಮತ್ತು ಮೆಕ್ಕೆಜೋಳ ವರ್ತಕರು ಬಂದ್ಗೆ ಬೆಂಬಲ ಸೂಚಿಸಿವೆ.
ದಾವಣಗೆರೆ ಜಿಲ್ಲೆಯಲ್ಲಿ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತಿದೆ. ವರ್ಷಕ್ಕೆ ಸುಮಾರು 3.25 ಲಕ್ಷ ಟನ್ ಭತ್ತ ಉತ್ಪಾದನೆಯಾಗುತ್ತಿದೆ. ಕೇಂದ್ರ ಸರ್ಕಾರವು ಜಾರಿ ಮಾಡಿರುವ ಹೊಸ ನಿಯಮದಿಂದ ಭತ್ತದ ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ನಷ್ಟವಾಗಲಿದೆ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ಕಿಗಿರಣಿಗಳನ್ನು ಬಂದ್ ಮಾಡಲಿರುವ ವರ್ತಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ.
ಜಿಎಸ್ಟಿ ವಿರೋಧಿ ಹೋರಾಟವನ್ನು ಬೆಂಗಳೂರಿನ ಯಶವಂತಪುರ ಎಪಿಎಂಸಿ ಯಾರ್ಡ್ ಮಾಲೀಕರು ಸಹ ಬೆಂಬಲಿಸಿದ್ದಾರೆ. ಗೋಧಿ, ಅಕ್ಕಿ, ಬೇಳೆಕಾಳುಗಳಿಗೆ ಶೇ 5ರ ಜಿಎಸ್ಟಿ ಹೇರುವ ಕೇಂದ್ರದ ನಿರ್ಧಾರವನ್ನು ವರ್ತಕರು ಮತ್ತು ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ.
ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಯಾರ್ಡ್ ಬಂದ್ ಮಾಡಿ ವರ್ತಕರು ತಮ್ಮ ಪ್ರತಿರೋಧ ದಾಖಲಿಸಿದ್ದಾರೆ. ನಾನ್ ಬ್ರಾಂಡೆಡ್ ವಸ್ತುಗಳ ವರ್ತಕರಿಗೆ ಸರ್ಕಾರದ ಹೊಸ ನಡೆಯಿಂದ ಬಹಳ ದೊಡ್ಡ ನಷ್ಟವಾಗಲಿದೆ. ಎಪಿಎಂಸಿ ಯಾರ್ಡ್ ಕಾರ್ಮಿಕ ಸಂಘಟನೆಗಳು ಸಹ ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ.
ಅಕ್ಕಿ ಗಿರಣಿದಾರರ ಸಂಘದ ಪ್ರತಿಭಟನೆಗೆ ದಿ ಬೆಂಗಳೂರು ಹೋಲ್ ಸೇಲ್ ಫುಡ್ ಅಂಡ್ ಗ್ರೇನ್ಸ್ ಅಂಡ ಪಲ್ಸಸ್ (ಮರ್ಚೆಂಟ್ಸ್ ಅಸೋಸಿಯೇಷನ್), ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಅಸೋಸಿಯೇಷನ್, ಕರ್ನಾಟಕ ರೋಲರ್ ಫ್ಲೋರ್ ಮಿಲ್ಲರ್ಸ್ ಅಸೋಸಿಯೇಷನ್, ನ್ಯೂ ತರಗುಪೇಟೆ ಮರ್ಚೆಂಟ್ಸ್ ಅಸೋಸಿಯೇಷನ್ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಉಡುಪಿ ಜಿಲ್ಲೆಯ ಅಕ್ಕಿಗಿರಣಿದಾರರ ಸಂಘವೂ ಧರಣಿಗೆ ಬೆಂಬಲ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಜಿಎಸ್ಟಿ ಮಂಡಳಿಯು ಆಹಾರ ಧಾನ್ಯಗಳ ಮೇಲೆ ವಿಧಿಸಿರುವ ಶೇ 5ರ ಜಿಎಸ್ಟಿ ತೆರಿಗೆಯು ಜುಲೈ 18ರಿಂದ ಜಾರಿಗೆ ಬರಲಿದೆ. ಈ ತೆರಿಗೆಯಿಂದ ಅಕ್ಕಿ, ಜೋಳ, ರಾಗಿಯಂಥ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ. ಈಗಾಗಲೇ ಹಣದುಬ್ಬರದಿಂದ ಕಂಗಾಲಾಗಿರುವ ಕಾರ್ಮಿಕರು, ಬಡವರು, ಮಧ್ಯಮವರ್ಗದ ಜನರು ಹೊಸ ಹೊರೆಯನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ತೆರಿಗೆ ಹೇರುವ ನಿರ್ಧಾರ ಹಿಂಪಡೆಯಬೇಕು ಎಂದು ಸಂಘವು ಆಗ್ರಹಿಸಿದರು.
ಆಹಾರ ಧಾನ್ಯಗಳ ಮೇಲಿನ ತೆರಿಗೆ ತೆಗೆಯುವಂತೆ ಹಲವು ಬಾರಿ ಮನವಿ ನೀಡಿದರೂ ಜಿಎಸ್ಟಿಯ ಕೇಂದ್ರ ಮತ್ತು ರಾಜ್ಯ ಕಚೇರಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ. ಜುಲೈ 15 ಮತ್ತು 16ರಂದು ಅಕ್ಕಿಗಿರಣಿಗಳಿಗೆ ಸಂಬಂಧಿಸಿದ ಎಲ್ಲ ರೀತಿಯ ವಹಿವಾಟುಗಳನ್ನು ಸಂಪೂರ್ಣ ಬಂದ್ ಮಾಡಲಾಗುವುದು. ಪ್ರತಿಭಟನೆ ನಡೆಸಿದ ನಂತರ ತೆರಿಗೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅಕ್ಕಿಗಿರಣಿದಾರರ ಸಂಘದ ಮುಖಂಡರಾದ ರಮೇಶ್ ನಾಯಕ್ ಹೇಳಿದ್ದಾರೆ.
Published On - 9:00 am, Fri, 15 July 22