ರೈತರು ಅಂದ್ರೆ ಮಾರುಕಟ್ಟೆಯಲ್ಲಿ ಯಾವುದಕ್ಕೆ ಬೆಲೆ ಜಾಸ್ತಿಯೋ ಅದರ ಹಿಂದೆ ಬೀಳೋದು ಮಾಮೂಲಿ. ಆದ್ರೆ ಇದಕ್ಕೆ ವಿಭಿನ್ನವಾದ ರೈತನೊಬ್ಬ ಇಲ್ಲಿದ್ದಾರೆ. ಈ ರೈತನಿಗೆ ಶ್ರೀಗಂಧ ಬೆಳೆಯಬೇಕು ಎಂಬುದು ದೊಡ್ಡ ಆಸೆ. ಆದ್ರೆ ಶ್ರೀಗಂಧ (sandalwood grower) ಬರಬೇಕಾದ್ರೆ ಬರೋಬರಿ 15 ವರ್ಷ ಬೇಕು. ಅಲ್ಲಿಯ ತನಕ ಬದುಕು ನಡೆಸುವುದು ಹೇಗೆ ಅಂತಾ ವಿಚಾರ ಮಾಡಿದ. ಈತನ ಈ ವಿಚಾರಕ್ಕೆ ಸ್ನೇಹಿತರೊಬ್ಬರು ಧೈರ್ಯ ಸ್ಥೈರ್ಯ ಶಕ್ತಿ ತುಂಬಿದ್ರು. ಈ ರೈತನ ಚಿಂತನೆಗೆ ಚಮತ್ಕಾರವಾಗಿ ಈಗ ತಿಂಗಳಿಗೆ ಕನಿಷ್ಟ ಒಂದು ಲಕ್ಷ 30 ಸಾವಿರ ಆದಾಯ ಕಮಾಯಿಸುತ್ತಿದ್ದಾರೆ. ಇಲ್ಲಿದೆ (Davanagere) ಕೃಷಿ ಪಂಡಿತನ ಕಾಯಕ ಪ್ರಜ್ಞೆಯ ತೇಜೋಹಾರಿ ಸ್ಟೋರಿ (Progressive Farmer).
ಎಲ್ಲಿ ನೋಡಿದರಲ್ಲಿ ಹಸಿರೋ ಹಸಿರು. ಮೇಲಾಗಿ ಭಾರಿ ಗಾತ್ರದ ಪೇರಲ ಹಣ್ಣು ಕೆಲ ಕಡೆ. ಇದಕ್ಕೆ ಪೆರು ಹಣ್ಣು ಎಂದೂ ಸಹ ಕೆರೆಯುತ್ತಾರೆ. ಈ ಹಣ್ಣು ಹೈದ್ರಾಬಾದ್ ಸೇರಿದಂತೆ ಹತ್ತಾರು ಕಡೆ ಪ್ರಸಿದ್ಧಿ ಪಡೆದಿದೆ. ಎಲ್ಲಿಯ ದಾವಣಗೆರೆ ಸಣ್ಣ ಹಳ್ಳಿ? ಎಲ್ಲಿಯ ಹೈದ್ರಾಬಾದ್ ಅಂತೀರಾ!? ನಿಜಕ್ಕೂ ಇದೊಂದು ಚಮತ್ಕಾರಿ ಸ್ಟೋರಿಯೇ. ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಯಜ್ಞೆ ಗ್ರಾಮದ ರೈತ ಮರಗೇಶಪ್ಪ ಅವರ ಬಗ್ಗೆ.
ಈ ಮುರಗೇಶಪ್ಪ ಸಾಮಾನ್ಯ ರೈತನಲ್ಲ. ಹತ್ತಾರು ವಿವಿಗಳ ಕೃಷಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಪಾಠ ಮಾಡುವಷ್ಟು ಪ್ರಜ್ಞಾವಂತ. ಇವರ ಸಾಧನೆಗೆ ಸರ್ಕಾರ ಕೃಷಿ ಪಂಡಿತ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ ನೀಡಿದೆ. ಜೊತೆಗೆ ಇವರು ರಾಜ್ಯ ಸರ್ಕಾರ ಹೈಪವರ್ ರೈತರ ಸಮಿತಿಯ ಸದಸ್ಯರು ಕೂಡಾ. ಇದಕ್ಕೆಲ್ಲಾ ಕಾರಣ ಅವರ ಜಾಣ್ಮೆ. ಮಳೆಯಾಶ್ರಿತ ಪ್ರದೇಶದಲ್ಲಿ ಹಗಲು ರಾತ್ರಿ ಎನ್ನದೆ ಶ್ರಮಪಟ್ಟು ಒಂದು ರೀತಿ ಹಸಿರು ಸಾಮ್ರಾಜ್ಯವನ್ನೇ ಸ್ಥಾಪನೆ ಮಾಡಿಬಿಟ್ಟಿದ್ದಾರೆ.
ಎಲ್ಲರಂತೆ ಮೆಕ್ಕೆಜೋಳ, ರಾಗಿ ಬೆಳೆದು ಸುಮ್ಮನಾಗಲಿಲ್ಲ ಇವರು. ಹಠಕ್ಕೆ ಬಿದ್ದು ಅರಿಶಿನ, ಶುಂಠಿ ಬೆಳೆದು ಬೇಕಾದಷ್ಟು ಗಳಿಸಿದ್ರು. ಆದ್ರೆ ಇವರಿಗೆ ಶ್ರೀಗಂಧ ಬೆಳೆಯ ಬೇಕು ಎಂಬ ಹುಚ್ಚು. ಆದ್ರೆ ಅದಕ್ಕೆ 15 ವರ್ಷ ಕಾಯಬೇಕು. ಅದೂ ಬರಲಿ… ಅದರ ಜೊತೆಗೆ ಇನ್ನೊಂದೂ ಇರಲಿ ಎಂದು ಪೇರಲ ಬೆಳೆದಿದ್ದಾರೆ. ವರ್ಷಕ್ಕೆ 15 ರಿಂದ 16 ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಒಂದು ರೀತಿಯಲ್ಲಿ ಮರಗೇಶಪ್ಪ ಅವರ ಜಮೀನೇ ಎಟಿಎಂ ಮಷಿನ್ ಅಂದ್ರೆ ತಪ್ಪಾಗಲಿಕ್ಕಿಲ್ಲ.
ಒಂದು ಸಲ ಗುಜರಾತ್ ಗೆ ಕೃಷಿ ಪ್ರವಾಸಕ್ಕೆ ಹೋಗಿದ್ದರು. ಅಲ್ಲೊಬ್ಬ ಬೆಳಗಾವಿ ಮೂಲದ ರೈತ ಸ್ನೇಹಿತರಾಗಿದ್ದರು. ಪೇರಲ ಬಗ್ಗೆ ಹೇಳಿದ್ದರು. ಆಂಧ್ರ ಪ್ರದೇಶದ ವಿಜಯವಾಡಕ್ಕೆ ಹೋಗಿ ವಿಶಿಷ್ಟ ಗಾತ್ರದ ಹಣ್ಣ ಬಿಡುವ, ಮೇಲಾಗಿ ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಮಾನ್ಯತೆ ಪಡೆದ ಪೇರಲ ಹಣ್ಣಿನ ಸಸಿಗಳನ್ನ ತಂದೇಬಿಟ್ಟರು. ಶ್ರೀಗಂಧ ಹಾಕಿದ ಮೂರು ಎಕರೆ ಪ್ರದೇಶದಲ್ಲಿ ಪೇರಲ ಹಾಕಿಯೇ ಬಿಟ್ಟರು! ಇದರಿಂದ ನೇರವಾಗಿ ಒಂದು ವರ್ಷದಲ್ಲಿ ಆದಾಯ ಶುರುವಾಗಿ ಹೋಯಿತು. ವರ್ಷದಲ್ಲಿ ಎರಡು ಸಲ ಈ ಮರಗಳು ಹಣ್ಣು ಕೊಡುತ್ತವೆ ಬೇಸಿಗೆಯಲ್ಲಿ ಮಾತ್ರ ಹಣ್ಣು ಬಿಡಲ್ಲ. ಪ್ರತಿ ಸಲ ಎಂಟರಿಂದ ಒಂಬತ್ತು ಲಕ್ಷ ಆದಾಯ. ಅಂದ್ರೆ ವರ್ಷಕ್ಕೆ 16 ರಿಂದ 18 ಲಕ್ಷ ರೂಪಾಯಿ ಆದಾಯ. ಎಂಟು ಲಕ್ಷ ಖರ್ಚು ತೆಗೆದರು ಹತ್ತು ಲಕ್ಷ ಪ್ಯಾಕೇಜ್ ಇದ್ದಂತೆ ಈ ಪೇರಲು.
ಇಲ್ಲಿ ಇನ್ನೊಂದು ವಿಚಾರ ಅಂದ್ರೆ ಇರುವ ಮೂರು ಎಕರೆ ಪ್ರದೇಶದಲ್ಲಿ ಎಲ್ಲ ರೀತಿಯಲ್ಲಿ ಪ್ರಯೋಗ ಮಾಡಿದ್ದಾರೆ. ಶ್ರೀಗಂಧ ಮುಖ್ಯ. ಅದರ ಜೊತೆಗೆ ಸಾಗವಾನಿ ಸೇರಿದಂತೆ ಹತ್ತಾರು ದೀರ್ಘಕಾಲದ ಆದಾಯಕ್ಕೆ ಬೇಕಾದ ಬೆಳೆ ಬೆಳೆದಿದ್ದಾರೆ. ಇನ್ನು 15 ವರ್ಷ ಪೆರಲ ಬೆಳೆದ್ರೆ ಅಷ್ಟರಲ್ಲಿ ಶ್ರೀಗಂಧ ಕೈಗೆ ಬರುತ್ತದೆ. ಹೀಗೆ ಬುದ್ದಿವಂತಿಕೆಯಿಂದ ರೈತರ ಕೃಷಿಯಲ್ಲಿ ತೊಡಗಿದ್ರೆ ಸಾಕು ಸಾಲ ಮನ್ನಾ, ಬ್ಯಾಂಕ್ ಅಧಿಕಾರಿಗಳ ಕಿರುಕುಳ ರಾಜಕಾರಣಗಳ ಮುಲಾಜು ಮೇಲಾಟ ಬೇಕಾಗಿಯೇ ಇಲ್ಲ ಅಲ್ಲವಾ! ಏನಂತೀರಿ?
ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ
Published On - 12:28 pm, Thu, 5 January 23