ದಾವಣಗೆರೆ: ಜ್ಯೂಸ್ ಕುಡಿಯಲು ಬಂದು 1.20 ಲಕ್ಷ ಹಣ ಬಿಟ್ಟುಹೋದ ವ್ಯಕ್ತಿ! ಅಮೇಲೇನಾಯ್ತು?

| Updated By: Ganapathi Sharma

Updated on: Nov 05, 2024 | 11:52 AM

ವ್ಯಕ್ತಿಯೊಬ್ಬರು ಜ್ಯೂಸ್ ಕುಡಿಯಲು ಅಂಗಡಿಗೆ ಬಂದಿದ್ದಾಗ 1.20 ಲಕ್ಷ ನಗದು ಬಿಟ್ಟುಹೋದ ಘಟನೆ ದಾವಣಗೆರೆ ರಾಂ ಅಂಡ್ ಕೋ ವೃತ್ತದಲ್ಲಿ ನಡೆದಿದೆ. ಮಗನ ಕಾಲೇಜು ಶುಲ್ಕ ಕಟ್ಟುವುದಕ್ಕೆಂದು ತಂದಿದ್ದ ನಗದು ಕಾಣೆಯಾಗಿರುವುದು ಗಮನಕ್ಕೆ ಬಂದ ಬಳಿಕ ಆ ವ್ಯಕ್ತಿ ಮಾಡಿದ್ದೇನು? ಅವರಿಗೆ ಹಣ ವಾಪಸ್ ಸಿಕ್ಕಿತೇ? ಇಲ್ಲಿದೆ ವಿವರ.

ದಾವಣಗೆರೆ: ಜ್ಯೂಸ್ ಕುಡಿಯಲು ಬಂದು 1.20 ಲಕ್ಷ ಹಣ ಬಿಟ್ಟುಹೋದ ವ್ಯಕ್ತಿ! ಅಮೇಲೇನಾಯ್ತು?
ಹಣ ಕಳೆದುಕೊಂಡಿದ್ದ ವೆಂಕಟೇಶ್​ಗೆ ಅದನ್ನು ವಾಪಸ್ ನೀಡಿದ ಶಾಸಕ ಕೆಎಸ್ ಬಸವಂತಪ್ಪ
Follow us on

ದಾವಣಗೆರೆ, ನವೆಂಬರ್ 5: ಮಗನ ಕಾಲೇಜು ಶುಲ್ಕ ಪಾವತಿಸುವುದಕ್ಕೆಂದು 1.20 ಲಕ್ಷ ರೂ. ನಗದಿನ ಬ್ಯಾಗ್​ ಜತೆ ಬಂದ ವ್ಯಕ್ತಿಯೊಬ್ಬರು ಜ್ಯೂಸ್ ಕುಡಿಯಲು ಅಂಗಡಿಗೆ ತೆರಳಿದ ಸಂದರ್ಭದಲ್ಲಿ ಪ್ರಮಾದವಶಾತ್ ಅದನ್ನು ಅಲ್ಲೇ ಬಿಟ್ಟುಹೋದ ಘಟನೆ ದಾವಣಗೆರೆಯ ರಾಂ ಅಂಡ್ ಕೋ ವೃತ್ತದಲ್ಲಿ ನಡೆದಿದೆ. ನಂತರ ಕಾಲೇಜಿಗೆ ತೆರಳಿದಾಗಲೇ ಅವರಿಗೆ ನಗದಿನ ಬ್ಯಾಗ್ ಬಿಟ್ಟುಬಂದಿರುವ ವಿಚಾರ ಗಮನಕ್ಕೆ ಬಂದಿದೆ.

ದಾವಣಗೆರೆಯಲ್ಲಿ ನಡೆದಿದ್ದೇನು?

ಹಾವೇರಿ ಜಿಲ್ಲೆಯ ರಾಣೆಬೇನ್ನೂರು ಮೂಲದ ಕಿರಾಣಿ ಅಂಗಡಿ ಮಾಲೀಕ ವೆಂಕಟೇಶ್ ಎಂಬುವವರು ಮಗನನ್ನು ದಾವಣಗೆರೆಯ ಶಿರಮಗೊಂಡನಹಳ್ಳಿ ಬಳಿ ಇರುವ ಆನ್ ಮೋಲ್ ಕಾಲೇಜಿಗೆ ಸೇರಿಸಿದ್ದು, ಕಾಲೇಜು ಶುಲ್ಕ ಕಟ್ಟಲು ಸೋಮವಾರ ಸಂಜೆ 7.30ರ ಸುಮಾರಿನಲ್ಲಿ 1.20 ಲಕ್ಷ ರೂ. ತೆಗೆದುಕೊಂಡು ಕಾರಿನಲ್ಲಿ ದಾವಣಗೆರೆಗೆ ಬಂದಿದ್ದಾರೆ. ರಾಂ ಅಂಡ್ ಕೋ ವೃತ್ತದಲ್ಲಿರುವ ರಸವಂತಿ ಜ್ಯೂಸ್ ಸೆಂಟರ್​​ಗೆ ಜ್ಯೂಸ್ ಕುಡಿಯಲು ಹೋದಾಗ ಕಾರಿನಲ್ಲಿಟ್ಟಿದ್ದ ಹಣ ಇರುವ ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ. ಹಣದ ಬ್ಯಾಗ್ ಟೇಬಲ್ ಮೇಲೆ ಇಟ್ಟು ಜ್ಯೂಸ್ ಕುಡಿದಿದ್ದಾರೆ. ಬಳಿಕ ಹಣದ ಬ್ಯಾಗ್ ಟೇಬಲ್ ಮೇಲೆ ಬಿಟ್ಟು ಕಾಲೇಜಿಗೆ ಹೋಗಿದ್ದಾರೆ.

ಹಣವನ್ನು ಕಾರಿನಲ್ಲಿ ಇಟ್ಟಿದ್ದೇನೆ ಎಂದು ಭಾವಿಸಿದ್ದ ವೆಂಕಟೇಶ್ ಕಾಲೇಜು ಶುಲ್ಕ ಕಟ್ಟಲು ಹಣದ ಬ್ಯಾಗ್ ಹುಡುಕಾಡಿದ್ದಾರೆ. ಆದರೆ ಹಣದ ಬ್ಯಾಗ್ ಕಾರಿನಲ್ಲಿ ಇರಲಿಲ್ಲ. ಆಗ ಕಾಲೇಜಿಗೆ ಬರುವ ಮಾರ್ಗ ಮಧ್ಯೆ ಜ್ಯೂಸ್ ಸೆಂಟರ್​ಗೆ ಹೋಗಿ ಜ್ಯೂಸ್ ಕುಡಿದು ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ.

ಹಣವನ್ನು ಜೋಪಾನವಾಗಿರಿಸಿದ್ದ ಶಾಸಕ ಬಸವಂತಪ್ಪ

ವೆಂಕಟೇಶ್ ಅವರು ಹಣದ ಬ್ಯಾಗ್ ಅನ್ನು ಬಿಟ್ಟು ಜ್ಯೂಸ್ ಸೆಂಟರ್​​ನಿಂದ ಹೋದ ಕೆಲವೇ ಕ್ಷಣಗಳಲ್ಲಿ ಶಾಸಕ ಕೆಎಸ್ ಬಸವಂತಪ್ಪ ಅಂಗಡಿಗೆ ಬಂದಿದ್ದಾರೆ. ಟೇಬಲ್ ಮೇಲೆ ಇದ್ದ ಹಣದ ಬ್ಯಾಗನ್ನು ತೆಗೆದು ಪರಿಶೀಲಿಸಿದ್ದಾರೆ. ಬ್ಯಾಗ್​​ನಲ್ಲಿ ಹಣ ಇರುವುದು ಪತ್ತೆಯಾಗಿದೆ. ಯಾರೋ ಹಣ ಬಿಟ್ಟು ಹೋಗಿದ್ದಾರೆ ಎಂದು ಶಾಸಕ ಬಸವಂತಪ್ಪ, ಜ್ಯೂಸ್ ಸೆಂಟರ್ ಮಾಲೀಕ ಮತ್ತು ಜನರ ಎದುರು ಹಣವನ್ನು ಎಣಿಸಿದ್ದಾರೆ. ಅಗ ಬ್ಯಾಗ್ ನಲ್ಲಿ 1.20 ಲಕ್ಷ ರೂ. ಇತ್ತು. ಕೂಡಲೇ ಈ ಹಣ ಯಾರದು ಎಂದು ಗೊತ್ತಾಗುವವರೆಗೂ ನನ್ನ ಬಳಿ ಇರುತ್ತದೆ. ಅವರು ಬಂದ ಮೇಲೆ ಫೋನ್ ಮಾಡಿ ಎಂದು ಶಾಸಕರು ಜ್ಯೂಸ್ ಸೆಂಟರ್ ಮಾಲೀಕನಿಗೆ ಹೇಳಿ ತೆರಳಿದ್ದು, ಪದ್ದು ಕಾಫಿ ಬಾರ್ ಬಳಿ ಇದ್ದರು.

ಹಣ ಕಳೆದುಕೊಂಡಿದ್ದ ವೆಂಕಟೇಶ್ ಗೂಗಲ್​​ನಲ್ಲಿ ಜ್ಯೂಸ್ ಸೆಂಟರ್ ದೂರವಾಣಿ ಸಂಖ್ಯೆ ಹುಡುಕಿ ಫೋನ್ ಮಾಡಿ ವಿಚಾರಿಸಿದ್ದಾರೆ. ಹಣದ ಬ್ಯಾಗ್ ಸಿಕ್ಕಿದೆ ಎಂದು ಜ್ಯೂಸ್ ಸೆಂಟರ್ ಮಾಲೀಕ ಮಾಹಿತಿ ನೀಡಿದ್ದಾರೆ. ನಂತರ ಹಣ ಕಳೆದುಕೊಂಡ ವ್ಯಕ್ತಿ ಬರುತ್ತಿದ್ದಾರೆ ಎಂದು ಜ್ಯೂಸ್ ಸೆಂಟರ್ ಮಾಲೀಕ ಶಾಸಕರಿಗೆ ತಿಳಿಸಿದ್ದಾರೆ. ಪದ್ದು ಕಾಫಿ ಬಾರ್ ಬಳಿಯಿದ್ದ ಶಾಸಕರು ಜ್ಯೂಸ್ ಸೆಂಟರ್​​ಗೆ ಬಂದಿದ್ದಾರೆ. ಅಷ್ಟರಲ್ಲೇ ಹಣ ಕಳೆದುಕೊಂಡಿದ್ದ ವೆಂಕಟೇಶ್ ಕೂಡ ಬಂದಿದ್ದಾರೆ.

‘ಬ್ಯಾಗಿನಲ್ಲಿ ಎಷ್ಟು ಹಣ ಇತ್ತು’ ಎಂದು ಕೇಳಿದಾಗ ‘1.30 ಲಕ್ಷ ರೂ. ಇತ್ತು’ ಎಂದು ವೆಂಕಟೇಶ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ಹಾಗಾದರೆ ಈ ಹಣ ನಿಮ್ಮದಲ್ಲ. ಏಕೆಂದರೆ ಈ ಬ್ಯಾಗಿನಲ್ಲಿ 1.20 ಲಕ್ಷ ರೂ. ಇರುವುದನ್ನು ನಾನೇ ಸಾರ್ವಜನಿಕರ ಮುಂದೆ ಎಣಿಸಿದ್ದೇನೆ. ಹೀಗಾಗಿ ಇದು ನಿಮ್ಮದಲ್ಲ, ಬೇರೆ ಯಾರದೋ ಇರಬಹುದು’ ಎಂದು ಹೇಳಿದ್ದಾರೆ. ಆಗ, ‘ಇಲ್ಲ ಸರ್, ಬಾಗಿನಲ್ಲಿ 1.20 ಲಕ್ಷ ರೂ. ಇತ್ತು. ನನ್ನ ಮಗ ಆನ್ ಮೋಲ್ ವಸತಿ ಕಾಲೇಜಿನಲ್ಲಿ ಓದುತ್ತಿದ್ದಾನೆ. ಕಾಲೇಜು ಶುಲ್ಕ ಕಟ್ಟಲು ತಂದಿದ್ದೆ’ ಎಂದು ವೆಂಕಟೇಶ್ ಹೇಳಿದ್ದಾರೆ.

ಇದನ್ನೂ ಓದಿ: ಮತಾಂಧ ಜಮೀರ್ ತಾನು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಮಂತ್ರಿ ಅಂದುಕೊಂಡಂತಿದೆ: ರೇಣುಕಾಚಾರ್ಯ

ನಂತರ ಹಣ ಕಳೆದುಕೊಂಡ ಮಾಲೀಕ ವೆಂಕಟೇಶ್​​ಗೆ ನೀತಿ ಪಾಠ ಮಾಡಿ ಹಣವನ್ನು ಹಿಂದಿರುಗಿಸಿದ ಶಾಸಕರ ಮಾನವೀಯತೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ