ದಾವಣಗೆರೆ, ಡಿಸೆಂಬರ್ 17: ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆಎಸ್ ಶಿವರಾಮು ವಿರುದ್ಧ ದಾವಣಗೆರೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ದಾವಣಗೆರೆ ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಗೋಪನಾಳ್ ಅಶೋಕ ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಂತರ ಮಾತನಾಡಿದ ಅವರು, ಪಂಚಮಸಾಲಿ ಸಮಾಜದವರು ಹೇಡಿಗಳಲ್ಲ. ಕೆಎಸ್ ಶಿವರಾಮು ತಕ್ಷಣವೇ ಸ್ವಾಮೀಜಿಗಳ ಬಗ್ಗೆ ನೀಡಿದ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಗೋಪನಾಳ್ ಅಶೋಕ ಆಗ್ರಹಿಸಿದ್ದಾರೆ.
ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ತೀವ್ರಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಎಸ್ ಶಿವರಾಮು, ಆ ವಿಚಾರವಾಗಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ವಾಮೀಜಿ ಬಿಜೆಪಿ ಏಜೆಂಟ್ರಂತೆ ವರ್ತಿಸುತ್ತಿದ್ದಾರೆ. ಕಾವಿ ಬಿಚ್ಚಿ ರಾಜಕೀಯಕ್ಕೆ ಬರಲಿ ಎಂದಿದ್ದರು.
ಇದನ್ನೂ ಓದಿ: ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದ್ರೆ ಕೈ ಕತ್ತರಿಸುತ್ತೇವೆ: ಜಯಮೃತ್ಯುಂಜಯ ಸ್ವಾಮೀಜಿಗೆ ಕೆಎಸ್ ಶಿವರಾಮು ಎಚ್ಚರಿಕೆ
ಮೈಸೂರಿನಲ್ಲಿ ಮಾತನಾಡಿದ್ದ ಶಿವರಾಮು, ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದರೆ ಕೈ ಕತ್ತರಿಸುತ್ತೇವೆ. ಸ್ವಾಮೀಜಿಗಳು ರಾಜಕೀಯ ಪುಢಾರಿ ರೀತಿ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಅವರು ಸನ್ಯಾಸಿಯಾಗಿ ಒಂದು ಜಾತಿ ಪರವಾಗಿ ಕೆಲಸ ಮಾಡುವುದು ಸರಿಯಲ್ಲ. ಸ್ವಾಮೀಜಿಯಾಗಲು ನಾಲಾಯಕ್. ಕಾವಿ ಬಟ್ಟೆ ಬಿಚ್ವಿಟ್ಟು ಬರುವುದು ಉತ್ತಮ ಎಂದು ಕೆಎಸ್ ಶಿವರಾಮು ಹೇಳಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ