ದಾವಣಗೆರೆಯ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದಾಪುರ ಕೆರೆಯಲ್ಲಿ 7ನೇ ಶತಮಾನದ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕಾಲದ ಶಿಲಾಶಾಸನ ಪತ್ತೆಯಾಗಿದೆ. 5 ಅಡಿ ಉದ್ದದ ಈ ಶಾಸನವು ಹಳೆಗನ್ನಡದಲ್ಲಿ 17 ಸಾಲುಗಳನ್ನು ಹೊಂದಿದೆ. ಇದು ಬಳ್ಳಾವಿ ನಾಡಿನ ಆಡಳಿತ ಮತ್ತು ತೆರಿಗೆ ವಿನಾಯಿತಿಗಳ ಕುರಿತು ಮಾಹಿತಿ ಒಳಗೊಂಡಿದೆ.

ದಾವಣಗೆರೆ, ಏಪ್ರಿಲ್ 30: ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಮಾದಾಪುರ ಕೆರೆಯಲ್ಲಿ ಬಾದಾಮಿ (Badami) ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕಾಲದ ಶಿಲಾಶಾಸನ (Inscription) ಪತ್ತೆಯಾಗಿದೆ ಎಂದು ಕಮಲಾಪುರದಲ್ಲಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ. ಆರ್.ಶೇಜೇಶ್ವರ ತಿಳಿಸಿದ್ದಾರೆ. ಮಾದಾಪುರ ಕೆರೆಯಲ್ಲಿ ಸ್ಥಳೀಯರು ಜೆಸಿಬಿಯಿಂದ ಮಣ್ಣನ್ನು ತೆಗೆಯುವಾಗ ಶಿಲಾ ಶಾಸನ ಪತ್ತೆಯಾಗಿದೆ. ಇಲ್ಲಿಗೆ ಪುರಾತತ್ವ ಇಲಾಖೆ ನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿದ ನಂತರ ಇದು ಬಾದಾಮಿ ಚಾಲುಕ್ಯರ ಶಿಲಾಶಾಸನವಾಗಿದೆ ಎಂದು ತಿಳಿದುಬಂದಿದೆ.
ಕ್ರಿ.ಶ 654-681 ಕಾಲದ ಶಾಸನ
ಶಾಸನವು 5 ಅಡಿ ಉದ್ದವಿದ್ದು, ಹಳೆಗನ್ನಡದ 17 ಸಾಲುಗಳನ್ನು ಒಳಗೊಂಡಿದೆ. ಇದು ಕ್ರಿ.ಶ 7ನೇ ಶತಮಾನದ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕ್ರಿ.ಶ.654-681 ಕಾಲದ ಶಾಸನವಾಗಿದೆ. ಒಂದನೇ ವಿಕ್ರಮಾದಿತ್ಯನು ರಾಜ್ಯವಾಳುವಾಗ ಅವನ ಅಧಿಕಾರಿ ಸಿಂಘವೆಣ್ಣನು ಬಳ್ಳಾವಿ ನಾಡನ್ನು ಆಳುತ್ತಿದ್ದಾಗ ಪ್ರಜೆಗಳಿಗಾಗಿ ಊರ ಮೇಲಿನ ಕೆಲವು ತೆರಿಗೆಗಳನ್ನು ಮನ್ನಾ ಮಾಡಿರುವುದು ಹಾಗೂ ಕೆರೆಯನ್ನು ನಿರ್ಮಿಸಿದ ರಾಜರಿಗೆ ಆರು ಎಕರೆ ಭೂಮಿ ದಾನ ನೀಡಿರುವುದು ಹಾಗೂ ಈ ಭೂಮಿಯು ಬಳ್ಳಾವಿ ಎಪ್ಪತ್ತರ ಒಕ್ಕಲುಗಳಿಗೆ ಸಲ್ಲುತ್ತೆಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಗೋವಾದಲ್ಲಿ ಅಪರೂಪದ ಕನ್ನಡ ಶಾಸನ ಪತ್ತೆ
ಈ ಶಾಸನ ಶೋಧನೆಯಿಂದ ಬಳ್ಳಾವಿ ಎಪ್ಪತ್ತು ಎಂಬ 70 ಗ್ರಾಮಗಳಿದ್ದ ಆಡಳಿತ ವಿಭಾಗದ ಪ್ರಾಚೀನತೆಯನ್ನು ಹಾಗೂ 1344 ವರ್ಷಗಳ ಪುರಾತನವಾದ ಶಾಸನ ಎಂಬುವುದು ತಿಳಿಸುತ್ತದೆ. ಈ ಶಾಸನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ರಿ.ಶ.17 ನೇ ಶತಮಾನದಲ್ಲಿ ಅಪೂರ್ಣ ಉಬ್ಬು ಶಿಲ್ಪವಿದೆ.
ಇದನ್ನೂ ಓದಿ: 14-15ನೇ ಶತಮಾನದ ಶಾಸನಗಳಲ್ಲಿ ಉಡುಪಿ ಕಂಗೂರು ಮಠದ ಬಗ್ಗೆ ಉಲ್ಲೇಖ
ಈ ಶಾಸನವನ್ನು ಹುಡುಕಿಕೊಟ್ಟ ಪ್ರೊ.ಶ್ರೀನಿವಾಸ ಪಾಡಿಗರ, ರಮೇಶ ಹಿರೇಜಂಬೂರು, ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ ಡಾ. ರವಿಕುಮಾರ ನವಲಗುಂದ, ಮಂಜಪ್ಪ ಚುರ್ಚಿಗುಂಡಿ, ಮಾದಾಪುರ ಗ್ರಾಮ ಆಡಳಿತಾಧಿಕಾರಿ ವಿಶ್ವನಾಥ, ಗ್ರಾಮಸ್ಥರಾದ ಬುಜಂಗ, ವೀರೇಶ್ ಹಾಗೂ ಇತರರ ಕಾರ್ಯವನ್ನು ಪುರಾತ್ವತ ಇಲಾಖೆ ನಿರ್ದೇಶಕರು ಶ್ಲಾಘಿಸಿದ್ದಾರೆ.
ಹಾಸದಲ್ಲಿ ಜೈನ ಮೂರ್ತಿಗಳು ಪತ್ತೆ
ಜಮೀನು ಉಳುಮೆ ಮಾಡುವಾಗ ಜೈನ ತೀರ್ಥಂಕರರ ಸುಂದರ ಕೆತ್ತನೆಯ ಪ್ರತಿಮೆ ಹಾಗೂ ಸ್ಥಂಭ ರೂಪದ ಕಲಾಕೃತಿಗಳು ಇತ್ತೀಚೆಗೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗಡಿಭಾಗ ಸುಳುಗೋಡು ಗ್ರಾಮದಲ್ಲಿ ಪತ್ತೆಯಾಗಿದ್ದವು. ಮಂಜು ಎಂಬುವವರ ಜಮೀನಿನಲ್ಲಿ ಉಳುಮೆ ವೇಳೆ ಪುರಾತನ ಕಾಲದ ಅಪರೂಪದ ಕಲಾಕೃತಿಗಳು ಪತ್ತೆ ಆಗಿದ್ದವು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:03 pm, Wed, 30 April 25



