ದಾವಣಗೆರೆ: ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದರೂ ಓಡಾಡಲು ಸರಿಯಾದ ಸೇತುವೆ ಇಲ್ಲದೇ ಪರದಾಡುತ್ತಿರುವ ಸಾರ್ವಜನಿಕರು

ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ದಾವಣಗೆರೆಯ ಚಿಕ್ಕನಹಳ್ಳಿ ಎಂಬ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದೆ ಮಕ್ಕಳು ಶಾಲೆಗೆ ಹೋಗಲು ಪ್ರಾಣ ಒತ್ತೆಯಿಟ್ಟು ಹೋಗಬೇಕಾದ ಪರಿಸ್ಥಿತಿ ಇದೆ. ಅದರಲ್ಲೂ ಪಾಲಿಕೆಯ ಹಾಲಿ ಮೇಯರ್ ವಾರ್ಡ್ ಆಗಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.

ದಾವಣಗೆರೆ: ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದರೂ ಓಡಾಡಲು ಸರಿಯಾದ ಸೇತುವೆ ಇಲ್ಲದೇ ಪರದಾಡುತ್ತಿರುವ ಸಾರ್ವಜನಿಕರು
ದಾವಣಗೆರೆ
Updated By: ಕಿರಣ್ ಹನುಮಂತ್​ ಮಾದಾರ್

Updated on: Dec 04, 2022 | 4:26 PM

ದಾವಣಗೆರೆ: ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ದಾವಣಗೆರೆಯಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಚಿಕ್ಕನಹಳ್ಳಿ ಎಂಬ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದೆ ಶಾಲೆಗೆ ಹೋಗಲು ಮಕ್ಕಳು ಪ್ರಾಣ ಒತ್ತೆಯಿಟ್ಟು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕನಹಳ್ಳಿಯಿಂದ ಅವರಗೆರೆ ಗ್ರಾಮದ ಶಾಲೆಗೆ ನಿತ್ಯ ನೂರಾರು ಮಕ್ಕಳು ಶಾಲೆಗೆ ಹೋಗುತ್ತಾರೆ. ಆದರೆ‌ ಹೋಗುವ ದಾರಿ ಮಧ್ಯೆ ರಾಜ ಕಾಲುವೆ ಇದ್ದು, ಅದಕ್ಕೆ‌ ಸೇತುವೆ ಇಲ್ಲದ ಕಾರಣ ಸಿಮೆಂಟ್ ಪೈಪ್​ಗಳನ್ನು ಹಾಕಿ ಅದರ ಮೇಲೆ ಸಿಮೆಂಟ್ ಕಂಬಗಳನ್ನು ಹಾಕಿ ಅದರ ಮೇಲೆ ಮಕ್ಕಳು ಓಡಾಡುತ್ತಿದ್ದಾರೆ.

ಇನ್ನು ಅಂಗನವಾಡಿಗೆ ಹೋಗುವ ಚಿಕ್ಕ ಮಕ್ಕಳನ್ನು ಪೋಷಕರೆ ಕರೆ ತಂದು ಬಿಟ್ಟು ಮತ್ತೆ ವಾಪಸ್ ಕರೆದುಕೊಂಡು ಹೋಗುವ ಪರಿಸ್ಥಿತಿ ಇಲ್ಲಿದೆ. ಇದು ಹಾಲಿ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕರವರ ವಾರ್ಡ್ ಆಗಿದ್ದರೂ ಕೂಡ ಮೂಲಭೂತ ಸೌಕರ್ಯಗಳು ಮರಿಚಿಕೆಯಾಗಿದೆ.‌ ಅಲ್ಲದೆ ಅವರಗೆರೆ ಶಾಲೆಗೆ ಬೇರೆ ರಸ್ತೆ ಇದ್ದು, ಅದು ಐದಾರು ಕಿಲೋಮೀಟರ್ ಸುತ್ತಿ ಹೋಗಬೇಕಾಗಿದೆ. ಅದ್ದರಿಂದ ಮಕ್ಕಳು ಇದೇ ರಸ್ತೆಯಲ್ಲಿ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಜನರೇ ನಿರ್ಮಾಣ ಮಾಡಿಕೊಂಡ ಕಿರಿದಾದ ಸೇತುವೆ ಮೇಲೆ ಒಡಾಡುತ್ತಿದ್ದಾರೆ.

ಈ ಅಪಾಯವಾದ ರಾಜ ಕಾಲುವೆಯಲ್ಲಿ ಹಲವು ಅವಘಡಗಳು ನಡೆದಿದ್ದು, ನಾಲ್ಕು ವರ್ಷದ ಹಿಂದೆ ಒಬ್ಬ ಬಾಲಕ ಕೊಚ್ಚಿ ಹೋಗಿ ಸಾವನ್ನಪ್ಪಿದ್ದ. ಕಳೆದ ಕೆಲ ದಿನಗಳ ಹಿಂದೆ ಕಾಲುವೆಯಲ್ಲಿ ನೀರು ಹೆಚ್ಚು ಹರಿಯುತ್ತಿರುವ ಸಂದರ್ಭದಲ್ಲಿ ಮಕ್ಕಳು ಬಿದ್ದಿದ್ದು ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಕಳೆದ 15 ವರ್ಷಗಳಿಂದ ಇಲ್ಲಿನ ನಿವಾಸಿಗಳು ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರಲ್ಲೂ ಮೇಯರ್ ವಾರ್ಡ್ ಆಗಿದ್ದರೂ ಕೂಡ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ರಾಜ ಕಾಲುವೆಗೆ ಸೇತುವೆ ನಿರ್ಮಿಸಿ ಕೊಟ್ಟರೆ ಉಪಯೋಗವಾಗುತ್ತದೆ ಎಂದು ಮಕ್ಕಳು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ರಾಜಕಾಲುವೆಯ ಅಕ್ಕ ಪಕ್ಕ ಖಾಸಗಿ ಲೇಔಟ್​ಗಳು ಇದ್ದು, ಬಡವರಿಗೆ ಒಳ್ಳೆಯದಾಗುತ್ತದೆ ಎಂದರೆ ಸೇತುವೆ ನಿರ್ಮಾಣ ಮಾಡಲಿ ನಾವು ಕೂಡ ಸಹಕಾರ ಮಾಡುತ್ತೇವೆ. ಆದರೆ ಪಾಲಿಕೆ ಅಧಿಕಾರಿಗಳು ಬಂದು ನೋಡಿಕೊಂಡು‌ ಹೋಗುತ್ತಾರೇ‌ ವಿನಃ ಯಾವುದೇ ಕಾಮಗಾರಿಗೆ ಮುಂದೆ ಬರುತ್ತಿಲ್ಲ. ಮಕ್ಕಳು ಜೀವ ಕೈಯಲ್ಲಿ ಹಿಡಿದು ಒಡಾಡಬೇಕಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ದಾವಣಗೆರೆ ಖಾಸಗಿ ಬಸ್ ನಿಲ್ದಾಣಕ್ಕೆ ಶಾಮನೂರು ಹೆಸರಿಡಲು ಕಾಂಗ್ರೆಸ್ ಆಗ್ರಹ; ವಾಜಪೇಯಿ ಹೆಸರಿಡಲು ಬಿಜೆಪಿ ರೆಸಲ್ಯೂಷನ್ ಪಾಸ್

ಒಟ್ಟಾರೆಯಾಗಿ ಪ್ರತಿನಿತ್ಯ ಈ ಕಿರುದಾದ ಸೇತುವೆ ಮೇಲೆಯೇ ಪುಟ್ಟ ಮಕ್ಕಳು ಸಂಚರಿಸಬೇಕಿದೆ. ಅದರೆ ಇವರ ಸಮಸ್ಯೆ ಬಗ್ಗೆ ಮಾತ್ರ ಪಾಲಿಕೆ ಅಧಿಕಾರಿಗಳಿಗೆ ಹಾಗೂ ಸ್ವತಃ ವಾರ್ಡ್ ಪ್ರತಿನಿಧಿಸುವ ಮೇಯರ್​ಗೂ ಮನವಿರಿಕೆಯಾಗಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ. ಸ್ಥಳೀಯರು ಅಕ್ರೋಶಗೊಂಡು ಮುತ್ತಿಗೆ ಹಾಕುವ ಮುನ್ನವೇ ಎಚ್ಚೆತ್ತು ಸೇತುವೆ ನಿರ್ಮಾಣ ಮಾಡಲಿ ಎನ್ನುವುದು ನಮ್ಮ ಕಳಕಳಿ

ವರದಿ:ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ