
ದಾವಣಗೆರೆ, ಜನವರಿ 18: ದಾವಣಗೆರೆಯ (Davanagere) ಆನಗೋಡ ಬಳಿ ಇರುವ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು (Deer) ಸಾವನ್ನಪ್ಪಿವೆ. ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಜಿಂಕೆಗಳು ಸಾವನ್ನಪ್ಪಿರುವಂತಹ ಶಂಕೆ ವ್ಯಕ್ತವಾಗಿದೆ. ಸದ್ಯ ಉಳಿದ ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ಮಾಹಿತಿ ನೀಡಿದ್ದಾರೆ.
ಜನವರಿ 16 ರಂದು ಒಂದು ಚುಕ್ಕೆ ಜಿಂಕೆ ಸಾವನ್ನಪ್ಪಿತ್ತು. ಮರುದಿನ ಮತ್ತೆರಡು ಜಿಂಕೆಗಳು ಮೃತಪಟ್ಟಿದ್ದು, ಈವರೆಗೆ ಒಟ್ಟು ನಾಲ್ಕು ಜಿಂಕೆಗಳು ಸಾವನ್ನಪ್ಪಿವೆ. ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗದ ಶಂಕೆ ವ್ಯಕ್ತವಾಗಿದೆ. ಸದ್ಯ ಮೃಗಾಲಯದಲ್ಲಿ ಕಟ್ಟುನಿಟ್ಟಿನ ಜೈವಿಕ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ 5 ಹುಲಿಗಳು ಪ್ರತ್ಯಕ್ಷ: ನಿಷೇಧಾಜ್ಞೆ ಜಾರಿ, ಹೊರಬರದಂತೆ ಸೂಚನೆ
ಮೃಗಾಲಯದಲ್ಲಿ 94 ಹೆಣ್ಣು, 58 ಗಂಡು ಹಾಗೂ 18 ಮರಿಗಳು ಸೇರಿದಂತೆ ಒಟ್ಟು 170 ಚುಕ್ಕೆ ಜಿಂಕೆಗಳಿವೆ. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರ ವೀಕ್ಷಣೆಗೆ ನಿಷೇಧಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ಮಾಹಿತಿ ನೀಡಿದ್ದಾರೆ.
ಇನ್ನು ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಕಾಟ ಮುಂದುವರೆದಿದೆ. ತೋಟದ ಮನೆಗೆ ನುಗ್ಗಿದ ಚಿರತೆ ನಾಯಿಮರಿ ಎಳೆದುಕೊಂಡು ಹೋದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಉಂಡವಾಡಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಹುಲಿ, ಮಂಗ ಆಯ್ತು ಈಗ ಚಿರತೆ ಸರದಿ: ಚಾಮರಾಜನಗರ ಕೊತ್ತಲವಾಡಿ ಬಳಿ ಚಿರತೆ ಶವ ಪತ್ತೆ
ಗ್ರಾಮದ ರೈತ ಪ್ರತಾಪ್ ಎಂಬಾವರ ತೋಟದ ಮನೆಗೆ ನುಗ್ಗಿದ ಚಿರತೆ, ನಾಯಿ ಮರಿ ಎಳೆದುಕೊಂಡು ಹೋಗಿದೆ. ಘಟನೆ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಸದ್ಯ ಅರಣ್ಯಾಧಿಕಾರಿಗಳಿಗೆ ರೈತ ಪ್ರತಾಪ್ ಮಾಹಿತಿ ನೀಡಿದ್ದು, ಸ್ಥಳದಲ್ಲಿ ಬೋನು ಇರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:28 pm, Sun, 18 January 26