ದಾವಣಗೆರೆ, ನ.13: ಹುಲಿ, ಚಿರತೆ, ಆನೆಗಳು ಕಾಡಿನಿಂದ ನಾಡಿಗೆ ಬಂದು ಜನರ ನಿದ್ದೆಗೆಡಿಸುತ್ತಿವೆ. ಈಗಾಗಲೇ ಹಲವು ಜೀವ ಬಲಿ ಪಡೆದುಕೊಂಡಿವೆ. ಇದರ ಮಧ್ಯೆ ಇತ್ತ ದಾವಣಗೆರೆಯಲ್ಲಿ ಕೋತಿ ಕಾಟ ಶುರುವಾಗಿದ್ದು, ಕೋತಿ ದಾಳಿಯಿಂದ (Monkey Attack) ಓರ್ವ ಸಾವನ್ನಪ್ಪಿದ್ದರೆ, ಮತ್ತೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಹೌದು ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ಇಬ್ಬರ ಮೇಲೆ ಕೋತಿ ದಾಳಿ ಮಾಡಿದೆ. ಈ ಪರಿಣಾಮ ತೀವ್ರಗಾಯಗೊಂಡ ಗುತ್ತೆಪ್ಪ (60) ಎಂಬುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾರೆ. ಮತ್ತೋರ್ವ ವ್ಯಕ್ತಿ ಪ್ರಭು (32)ಗೆ ಚಿಕಿತ್ಸೆ ಮುಂದುವರೆದಿದೆ.
ಕಳೆದ ಕೆಲ ದಿನಗಳಿಂದ ಕೋತಿಗಳ ಉಪಟಳ ಹೆಚ್ಚಾಗಿದೆ. ಗುತ್ತೆಪ್ಪ ಅವರು ಮನೆ ಹೊರಗೆ ಮಲಗಿದ್ದರು. ನೈಸರ್ಗಿಕ ಕರೆಗೆ ಎದ್ದು ಹೊರ ಬಂದಾಗ ಇದ್ದಕ್ಕಿದ್ದಂತೆ ಒಂಟಿ ಕೋತಿ ದಾಳಿ ಮಾಡಿತ್ತು. ಆಗ ಗುತ್ತೆಪ್ಪ ಅವರು ಕೂಗಿಕೊಂಡಿದ್ದು ಚೀರಾಡಿದ ಸದ್ದು ಕೇಳಿ ಬಂದಿದೆ. ಈ ಹಿನ್ನೆಲೆ ಜನ ಸೇರಿದ್ದಾರೆ. ಅಷ್ಟರಲ್ಲಿ ಗುತ್ತೆಪ್ಪರಿಗೆ ಗಂಭೀರ ಗಾಯಗಳಾಗಿವೆ. ಜನರನ್ನ ನೋಡಿ ಕೋತಿ ಓಡಿ ಹೋಗುವಾಗ ಪ್ರಭು ಎಂಬುವವರ ಮೇಲೂ ಕೋತಿ ದಾಳಿ ಮಾಡಿದೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ತುರ್ತಾಗಿ ಹೊನ್ನಾಳಿ ಆಸ್ಪತ್ರೆಗೆ ಸಾಗಿಸಿದ್ರು ಗುತ್ತೆಪ್ಪ ಬದುಕುಳಿಯಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಚರಂಡಿ ವಿಚಾರಕ್ಕೆ ಜಗಳ: ಹಾಡಹಗಲೇ ಒಳ್ಳಾರಿ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ
ಲಂಗರು ಹಾಕಿದ್ದ ಬೋಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಏಳು ಬೋಟ್‌ಗಳು ಹೊತ್ತಿ ಉರಿದಿವೆ. ಉಡುಪಿಯ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿ ಗ್ರಾಮದ ಬಂದರಿನಲ್ಲಿ ಘೋರ ದುರಂತ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಪೂಜೆ ನಡೀತಿದ್ದ ವೇಳೆಯೇ ಈ ಅಗ್ನಿ ಅವಘಡ ಸಂಭವಿಸಿದೆ. ಒಂದು ಬೋಟ್ ಬಳಿಕ ಮತ್ತೊಂದು ಬೋಟ್‌ಗೆ ಬೆಂಕಿ ವ್ಯಾಪಿಸಿದೆ. ಹೀಗೆ ಒಂದರ ಹಿಂದೆ ಒಂದು ಬೋಟ್ ಸುಟ್ಟುಹೋಗಿದ್ದು, ಒಟ್ಟು ಏಳು ಮೀನುಗಾರಿಕಾ ಬೋಟ್‌ಗಳು ಬೆಂಕಿಗಾಹುತಿಯಾಗಿವೆ. ಪಟಾಕಿ ಸಿಡಿದು ಬೋಟ್‌ಗಳಿಗೆ ಬೆಂಕಿ ಹೊತ್ತಿಕೊೆಂಡಿರುವ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ. ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿವೆ. ಏಳು ಬೋಟ್‌ಗಳು ಬೆಂಕಿಗಾಹುತಿಯಾದ್ದರಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಅಂತಾ ಅಂದಾಜಿಸಲಾಗಿದೆ.
ರಾಜ್ಯ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:12 pm, Mon, 13 November 23