ದಾವಣಗೆರೆ ನ.10: ಭೀಕರ ಬರಗಾಲದ (Drought) ನಡುವೆಯೂ ರೈತರು ಸಮೃದ್ಧವಾಗಿ ಭತ್ತ (Paddy) ಬೆಳೆದಿದ್ದಾರೆ. ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ರೈತರು ಸನ್ನದ್ಧವಾಗಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮಳೆ-ಗಾಳಿಗೆ (Rain) ಸಿಕ್ಕು ಸುಮಾರು ಐವತ್ತು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಸರ್ವನಾಶವಾಗಿದೆ. ಜಿಲ್ಲೆಯಲ್ಲಿ ಶೇಕಡ 70 ರಷ್ಟು ಭದ್ರಾ ಅಚ್ಚುಕಟ್ಟು ಪ್ರದೇಶವಿದ್ದು, ಸುಮಾರು 1.4 ಲಕ್ಷ ಎಕರೆಯಲ್ಲಿ ರೈತರು ಭತ್ತ ಬೆಳೆದಿದ್ದಾರೆ. ಆದರೆ ಬರಗಾಲದಿಂದ ನೀರಿಲ್ಲದೆ ಬೆಳೆ ಒಣಗುತ್ತಿತ್ತು.
ಈ ಸಂದರ್ಭದಲ್ಲಿ ರೈತರು ಭದ್ರಾ ಡ್ಯಾಂನಿಂದ ನೀರು ಬಿಡುವಂತೆ ಹೋರಾಟ ಮಾಡಿದರು. ಹಾಗೇ ಜಲಸಂಪನ್ಮೂಲ ಇಲಾಖೆ ಸಚಿವ ಡಿ ಕೆ ಶಿವಕುಮಾರ್, ಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಶಿವಮೊಗ್ಗಾ ಭದ್ರಾ ಡ್ಯಾಂನಿಂದ ನೀರು ಬಿಡಿಸಿಕೊಂಡಿದ್ದರು.
ಇದರಿಂದ ಒಣಗುತ್ತಿರುವ ಭತ್ತದ ಬೆಳೆಗೆ ಜೀವಕಳೆ ಬಂದು, ಸಮೃದ್ಧವಾಗಿ ಬೆಳೆದು ನಿಂತಿತ್ತು. ಇನ್ನೇನು ಕಟಾವು ಮಾಡಬೇಕು ಎಂದುಕೊಳ್ಳುವಷ್ಟರಲ್ಲಿ ಅಕಾಲಿಕ ಮಳೆ ಬಂದು ಸುಮಾರು 50 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಸರ್ವನಾಶವಾಗಿದೆ. ಭತ್ತ ಚಾಪೆಯ ರೀತಿ ನೆಲಕ್ಕೆ ಒರಗಿದೆ. ಇದರಿಂದ ರೈತನ ಬದುಕು ಮಣ್ಣು ಪಾಲಾಗಿದ್ದು, ರೈತ ಕಣ್ಣೀರು ಹಾಕುತ್ತಿದ್ದಾನೆ. ಅಕಾಲಿಕ ಮಳೆಯಿಂದ ಜಿಲ್ಲೆಯ ರೈತರ ಶ್ರಮ ಮಣ್ಣುಪಾಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕು. ರೈತರಿಗೆ ಪರಿಹಾರ ನೀಡಬೇಕು. ತೋಟಗಾರಿಕಾ ಸಚಿವ ತವರಿನಲ್ಲಿ ಈ ಸ್ಥಿತಿಯಾದರೆ ಹೇಗೆ ಎಂಬ ಮಾತುಗಳು ಕೇಳಿ ಬರತ್ತಿವೆ.
ಜಿಲ್ಲೆಯ 1.4 ಲಕ್ಷ ಎಕರೆಯಲ್ಲಿ 4.2 ಲಕ್ಷ ಟನ್ ಭತ್ತ ಬೆಳೆಯಲಾಗುತ್ತದೆ. ಇದರಿಂದ 2.7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಉತ್ಪಾದನೆಯಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ