ಸಂತೋಷ-ಸಮಾಧಾನದ ಸಂಗತಿ! ಮುಂಗಾರು ಹಿಂಗಾರು ಕೈಕೊಟ್ಟರೂ ಆ ರೈತ ಮಾಡಿದ ಸೂಪರ್ ಐಡಿಯಾಗೆ ಬಂಪರ್ ಬೆಳೆ- ಮಹಿಳಾ ಕೃಷಿ ಕಾರ್ಮಿಕರಿಗೆ ಕೈತುಂಬಾ ಕೆಲಸ
ಈ ಮಹಿಳೆಯರಿಗೆ ಕೃಷಿ ಕೆಲಸ ಹೊಸದಲ್ಲ; ಬೇರೆ ಕೂಲಿ ಕೆಲಸಗಳು ಗೊತ್ತಿಲ್ಲ. ನಗರಕ್ಕೆ ಹೋದರೆ ಅಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡಬೇಕು. ಆ ಕೆಲಸದ ಬಗ್ಗೆ ಗೊತ್ತಿಲ್ಲದ ಇವರೆಲ್ಲ ಅಲ್ಲಿಗೆ ಹೋದರೆ ತೊಂದರೆ ಅನುಭವಿಸುವುದೇ ಹೆಚ್ಚು. ಆದರೆ ಇದೀಗ ತಮ್ಮೂರಲ್ಲೇ ಕೂಲಿ ಕೆಲಸ ಸಿಗುವಂತಾಗಿದೆ. ತಮಗೆ ಗೊತ್ತಿರೋ ಕೃಷಿ ಕೆಲಸವನ್ನು ಖುಷಿಯಿಂದ ಮಾಡ್ತಿದಾರೆ. ತಮಗೆ ನಿತ್ಯವೂ ಕೆಲಸ ಕೊಡುತ್ತಿರೋ ಬಾಲರೆಡ್ಡಿಯನ್ನು ಅನ್ನದಾತ ಎಂದೇ ಆಪ್ಯಾಯಮಾನವಾಗಿ ಕರೆಯುತ್ತಿದ್ದಾರೆ.
![ಸಂತೋಷ-ಸಮಾಧಾನದ ಸಂಗತಿ! ಮುಂಗಾರು ಹಿಂಗಾರು ಕೈಕೊಟ್ಟರೂ ಆ ರೈತ ಮಾಡಿದ ಸೂಪರ್ ಐಡಿಯಾಗೆ ಬಂಪರ್ ಬೆಳೆ- ಮಹಿಳಾ ಕೃಷಿ ಕಾರ್ಮಿಕರಿಗೆ ಕೈತುಂಬಾ ಕೆಲಸ](https://images.tv9kannada.com/wp-content/uploads/2023/11/pleasant-peasant-works-women-agricultural-labourers-find-work-in-navalgund-taluk-in-dharwad-in-onion-fields-thanks-to-farmer-balreddy-innovative-ideas.jpg?w=1280)
ಈಗೊಂದು ನಾಲ್ಕು ದಿನದಿಂದ ನಾಲ್ಕು ಹನಿ ಮಳೆಯಾಗುತ್ತಿದೆ ಅನ್ನೋದು ಬಿಟ್ಟರೆ ರಾಜ್ಯಾದ್ಯಂತ ಈ ವರ್ಷ ಭೀಕರ ಬರಗಾಲವೇ ಆವರಿಸಿದೆ. ಹೀಗಾಗಿ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿದೆ. ಅದರಲ್ಲೂ ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ತೀವ್ರ ಬರ ಕಂಡು ಬಂದಿರೋ ಹಿನ್ನೆಲೆ ಕೆಲಸವಿಲ್ಲದೇ ಇವರೆಲ್ಲ ನಗರ ಪ್ರದೇಶಕ್ಕೆ ಕೆಲಸಕ್ಕೆ ಹೋಗುತ್ತಿದ್ದಾರೆ. ಅದರೆ ಅಲ್ಲಿಯೂ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿ ಕೆಲಸ ಸಿಗದೇ, ಮರಳಿ ಗೂಡಿಗೆ ಬರುವಂತಾಗಿದೆ. ಆದರೆ ನವಲಗುಂದದ ರೈತರೊಬ್ಬರು ಇಂಥ ವೇಳೆಯಲ್ಲಿಯೇ ಮಹಿಳೆಯರಿಗೆ ಕೆಲಸ ನೀಡೋ ಮೂಲಕ ಅವರ ಅನ್ನಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ. ಯಾರವರು? ಇಲ್ಲಿದೆ ನೋಡಿ
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಗನೂರು, ಸೊಟಕನಾಳ, ಬಾವೂರು ಗ್ರಾಮದ ಮಹಿಳಾ ಕೃಷಿ ಕೂಲಿ ಕಾರ್ಮಿಕರು ಹೊಲದಲ್ಲಿ ಈರುಳ್ಳಿ ಕೀಳುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಈ ಮುಂಚೆಯಿಂದಲೂ ಇವರೆಲ್ಲ ಕೃಷಿ ಕೂಲಿ ಕಾರ್ಮಿಕರಾಗಿಯೇ ಕೆಲಸ ಮಾಡುತ್ತಾ ಬಂದಿದ್ದಾರೆ. ಆದರೆ ಈ ಬಾರಿ ತೀವ್ರ ಬರದ ಹಿನ್ನೆಲೆಯಲ್ಲಿ ಎಲ್ಲಿಯೂ ಕೃಷಿ ಕೆಲಸ ಸಿಗುತ್ತಿಲ್ಲ. ಮಳೆ ಬಾರದೇ ಕೃಷಿ ಚಟುವಟಿಕೆಗಳು ನಿಂತು ಹೋಗಿರೋ ಹಿನ್ನೆಲೆಯಲ್ಲಿ ಎಲ್ಲಿಯೂ ಇವರಿಗೆ ಕೆಲಸ ಸಿಗುತ್ತಲೇ ಇಲ್ಲ. ಆದರೆ ಇದೀಗ ಬಾಲರೆಡ್ಡಿ ರೂಗಿ ಅನ್ನೋ ರೈತ ಕಷ್ಟಪಟ್ಟು ಬೆಳೆದಿರೋ ಈರುಳ್ಳಿ ಬೆಳೆಗೆ ಇವರೇ ಆಸರೆಯಾಗಿದ್ಧಾರೆ. ಇದೀಗ ಈರುಳ್ಳಿಗೆ ಒಳ್ಳೆಯ ದರವೂ ಬಂದಿರುವುದರಿಂದ ಕೆರೆಯಲ್ಲಿ ನೀರು, ಸಂಗ್ರಹಿಸಿ ಈರುಳ್ಳಿ ಬೆಳೆದಿರೋ ಈ ಬಾಲರೆಡ್ಡಿ ಅವರಿಗೆ ಬಂಪರ್ ಹೊಡೆದಿದೆ. ಈ ಹಿನ್ನೆಲೆಯಲ್ಲಿ ಹತ್ತಾರು ಜನ ಮಹಿಳೆಯರಿಗೆ ಈರುಳ್ಳಿ ಕೀಳುವ ಕೆಲಸ ನೀಡಿದ್ದಾರೆ. ಈ ಬಾರಿ ಭೀಕರ ಬರದಿಂದ ಕೆಲಸವಿಲ್ಲದೇ ಕಂಗೆಟ್ಟಿದ್ದ ಈ ಮಹಿಳೆಯರು ಇದೀಗ ತಮ್ಮೂರಲ್ಲಿಯೇ ಕೂಲಿ ಕೆಲಸ ಪಡೆಯೋ ಮೂಲಕ ಖುಷಿಯಾಗಿದ್ದಾರೆ.
ಈ ಮಹಿಳೆಯರಿಗೆ ಕೃಷಿ ಕೆಲಸಗಳು ಹೊಸದಲ್ಲ. ಹಲವಾರು ವರ್ಷಗಳಿಂದ ಅದೇ ಕೆಲಸ ಮಾಡುತ್ತಾ ಬಂದಿರೋ ಇವರಿಗೆ ಬೇರೆ ಕೂಲಿ ಕೆಲಸಗಳು ಗೊತ್ತಿಲ್ಲ. ಅದರಲ್ಲೂ ನಗರಕ್ಕೆ ಕೂಲಿ ಕೆಲಸಕ್ಕೆ ಹೋದರೆ ಅಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಬೇಕು. ಆ ಕೆಲಸದ ಬಗ್ಗೆ ಗೊತ್ತಿಲ್ಲದ ಇವರೆಲ್ಲ ಅಲ್ಲಿಗೆ ಹೋದರೆ ತೊಂದರೆಯೇ ಹೆಚ್ಚು. ಅಲ್ಲದೇ ನಗರಕ್ಕೆ ಹೋಗೋದು, ಅಲ್ಲಿ ಕೆಲಸ ಸಿಗದೇ ಇದ್ದರೆ ಮರಳಿಗೆ ಬರೋದು ತೊಂದರೆಯ ಮಾತೇ ಸರಿ. ಆದರೆ ಹೊಟ್ಟೆಪಾಡಿಗಾಗಿ ಅವರು ಹೋಗಲೇ ಬೇಕಿತ್ತು. ಆದರೆ ಇದೀಗ ತಮ್ಮೂರಲ್ಲೇ ಕೂಲಿ ಕೆಲಸ ಸಿಗುತ್ತಿದ್ದು, ಅವರಿಗೆಲ್ಲ ಸಾಕಷ್ಟು ಖುಷಿ ತರಿಸಿದೆ. ಅದರಲ್ಲೂ ತಮಗೆ ಗೊತ್ತಿರೋ ಕೃಷಿ ಕೆಲಸವನ್ನು ಅವರೆಲ್ಲ ಖುಷಿಯಿಂದ ಮಾಡುತ್ತಿದ್ದಾರೆ. ಇದೇ ವೇಳೆ ತಮಗೆ ನಿತ್ಯವೂ ಕೆಲಸ ಕೊಡುತ್ತಿರೋ ಬಾಲರೆಡ್ಡಿ ರೂಗಿ ಅವರನ್ನು ಅನ್ನದಾತ ಎಂದೇ ಕರೆಯುತ್ತಿದ್ದಾರೆ.
ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಕೂಲಿ ಸಿಗದೇ ಇವರೆಲ್ಲ ಸಾಕಷ್ಟು ತೊಂದರೆಗೆ ಸಿಲುಕಿದ್ದರು. ಆದರೆ ಹಿಂಗಾರು ಕೂಡ ಕೈಕೊಟ್ಟಿದ್ದರಿಂದ ಕಂಗಾಲಾಗಿ ಹೋಗಿದ್ದರು. ಇಂಥ ವೇಳೆ ಇವರ ಕೈಹಿಡಿದಿದ್ದು ಈ ರೈತ ಬಾಲರೆಡ್ಡಿ. ದೂರದ ಬೆಣ್ಣೆಹಳ್ಳದಿಂದ ನೀರು ತಂದು, ಕೆರೆಗೆ ತುಂಬಿಸಿಕೊಂಡು, ಅಲ್ಲಿಂದ ಈ ಹೊಲಗಳಿಗೆ ನೀರು ಹರಿಸೋ ಮೂಲಕ ಬೆಳೆ ಬೆಳೆದಿದ್ದಾರೆ. ಇದೀಗ ತಾವು ಲಾಭ ಪಡೆಯೋದರ ಜೊತೆಗೆ ಈ ಮಹಿಳೆಯರ ಕುಟುಂಬಕ್ಕೆ ಆಸರೆಯಾಗಿರೋದು ನಿಜಕ್ಕೂ ಸಂತೋಷದ ಸಂಗತಿಯೇ ಸರಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ