ದಾವಣಗೆರೆ, ಫೆಬ್ರವರಿ 9: ಸಂಸದ ಡಿ.ಕೆ.ಸುರೇಶ್ ಮತ್ತು ವಿನಯ್ ಕುಲಕರ್ಣಿಗೆ ಗುಂಡಿಕ್ಕಿ ಕೊಲ್ಲಬೇಕೆಂದು ಹೇಳಿಕೆ ನೀಡಿದ್ದ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ (KS Eshwarappa) ವಿರುದ್ಧ ಎಫ್ಐಆರ್ ದಾಖಲಾಗಿದೆ. ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆ ನಿವಾಸಿ ಕಾಂಗ್ರೆಸ್ ಮುಖಂಡ ಹನುಮಂತಪ್ಪ ಎಂಬುವವರು ನೀಡಿದ ದೂರು ಆಧರಿಸಿ ಐಪಿಸಿ ಸೆಕ್ಷನ್ 505(1)ಸಿ, 505(2), 506ರ ಅಡಿ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಂಸದ ಡಿಕೆ ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿ ರೀತಿ ದೇಶದ್ರೋಹಿ ಹೇಳಿಕೆ ನೀಡಿದವರಿಗೆ ಗುಂಡಿಕ್ಕುವ ಕಾನೂನು ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕೆಎಸ್ ಈಶ್ವರಪ್ಪ ಆಗ್ರಹಿಸಿದ್ದರು. ಸದ್ಯ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.
ಕೆ.ಎಸ್.ಈಶ್ವರಪ್ಪ ಹೇಳಿಕೆ ವಿಚಾರವಾಗಿ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್, ಗುಂಡಿಕ್ಕಿ ಕೊಲ್ಲಬೇಕೆಂದು ಹೇಳಿಕೆ ನೀಡಿದ್ದ ಈಶ್ವರಪ್ಪ ವಿರುದ್ಧ ಎಫ್ಐಆರ್ ಆಗಿದೆ. ಮಾಜಿ ಶಾಸಕ ಈಶ್ವರಪ್ಪ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ. ಕಾನೂನು ಮೀರಿ ಯಾರು ಕೂಡ ವರ್ತಿಸಬಾರದು ಎಂದು ಕಿಡಿಕಾರಿದ್ದಾರೆ.
ನಿನ್ನೆ ಕಾನೂನು ಸಚಿವ ಎಚ್ಕೆ ಪಾಟೀಲ್ ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದು, ಇಂಥಹ ಪ್ರಚೋದನಕಾರಿ ಮಾತುಗಳನ್ನು ಆಡಿದರೆ ಹೀರೋ ಆಗುತ್ತೇವೆ ಎನ್ನುವ ಕಲ್ಪನಾ ಲೋಕದಲ್ಲಿರುತ್ತಾರೆ. ಇದರಿಂದಲೇ ಬಹಳ ದೊಡ್ಡ ಪ್ರಮಾದಗಳನ್ನು ಮಾಡುತ್ತಿರುತ್ತಾರೆ.
ಇದನ್ನೂ ಓದಿ: ಡಿಕೆ ಸುರೇಶ್ಗೆ ಗುಂಡಿಕ್ಕಬೇಕು: ಈಶ್ವರಪ್ಪ ಹೇಳಿಕೆಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಎಚ್ಕೆ ಪಾಟೀಲ್
24 ಗಂಟೆಯೊಳಗೆ ಈಶ್ವರಪ್ಪ ತಮ್ಮ ಮಾತನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಈಶ್ವರಪ್ಪಗೆ ಸಚಿವ ಎಚ್ಕೆ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದರು.
ಶಿವಮೊಗ್ಗದಲ್ಲಿ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದು, ಇದಕ್ಕೆ ಉತ್ತರ ಕೊಟ್ಟು ನಾನೇಕೆ ಬಾಯಿ ಹೊಲಸು ಮಾಡಿಕೊಳ್ಳಲಿ.
ಇದನ್ನೂ ಓದಿ: ಡಿಕೆ ಸುರೇಶ್ಗೆ ಗುಂಡಿಕ್ಕಬೇಕು; ಕಾನೂನು ಮೀರಿ ನಡೆಯುವವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಗೃಹ ಸಚಿವ
ನನ್ನ ತಂದೆ-ತಾಯಿ ಆ ರೀತಿ ಕಲಿಸಿಲ್ಲ. ನಾನು ಅದಕ್ಕೆಲ್ಲಾ ಯಾಕೆ ಉತ್ತರ ಕೊಡಬೇಕು ಎಂದು ಹೇಳಿದ್ದಾರೆ.
ಕೆಎಸ್.ಈಶ್ವರಪ್ಪ ಹೇಳಿಕೆ ಖಂಡಿಸಿ ಎನ್ಎಸ್ಯುಐ ಶಿವಮೊಗ್ಗದಲ್ಲಿ ಪ್ರತಿಭಟನೆ ಮಾಡಲಾಗಿದೆ. ನಗರದ ಶಿವಪ್ಪನಾಯಕ ವೃತ್ತದಲ್ಲಿ ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗಿ ಎನ್ಎಸ್ಯುಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆ.ಎಸ್.ಈಶ್ವರಪ್ಪ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಎನ್ಎಸ್ಯುಐ ಕಾರ್ಯಕರ್ತರ ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:12 pm, Fri, 9 February 24