ದಾವಣಗೆರೆ: ಜಿಲ್ಲೆಯಲ್ಲಿ ಭಾರಿ ಮಳೆಗೆ ಅಪಾರ ಬೆಳೆ ಹಾನಿಯಾಗಿದೆ (Crop loss). ಒಂದು ವಾರದಲ್ಲಿ ವಾಡಿಕೆ ಮಳೆಗಿಂತ ಶೇಕಡಾ 237 ರಷ್ಟು ಹೆಚ್ಚು ಮಳೆ (Karnataka rains) ದಾಖಲಾಗಿದೆ. ಪರಿಣಾಮ ದಾವಣಗೆರೆ ಜಿಲ್ಲೆಯಲ್ಲಿ 1,147 ಹೆಕ್ಟೇರ್‌ನಲ್ಲಿದ್ದ ಭತ್ತ, ಮೆಕ್ಕೆಜೋಳ ನಾಶವಾಗಿದೆ. ಇನ್ನು 36 ಹೆಕ್ಟೇರ್‌ನಲ್ಲಿದ್ದ ಟೊಮ್ಯಾಟೊ, ಈರುಳ್ಳಿ ಮಣ್ಣುಪಾಲಾಗಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 97 ಮನೆಗಳಿಗೆ ಹಾನಿಯಾಗಿದೆ. ಹೀಗಾಗಿ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಜಂಟಿ ಸರ್ವೇಗೆ ಆದೇಶ ನೀಡಿದ್ದಾರೆ.
11 ವರ್ಷಗಳ ಬಳಿಕ ಭರ್ತಿಯಾದ ಮುದಿಗೆರೆ ದೊಡ್ಡ ಕೆರೆ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮುದಿಗೆರೆ ಗ್ರಾಮದ ಕೆರೆ ಕೋಡಿ ಬಿದ್ದು, ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಹನ್ನೊಂದು ವರ್ಷದ ಬಳಿಕ ಮುದಿಗೆರೆ ದೊಡ್ಡ ಕೆರೆ ಭರ್ತಿಯಾಗಿದ್ದು, ಮುದುಗೆರೆ, ಗಾಳಿಹಳ್ಳಿ, ತಿಮ್ಲಾಪುರ ನಡುವಿನ ರಸ್ತೆ ಜಲಮಯವಾದ ಹಿನ್ನೆಲೆ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ರಸ್ತೆ ದಾಟಲು ಗ್ರಾಮಸ್ಥರು ಹೋಗದಿರುವುದು ಸೂಕ್ತ. ಹೆಚ್ಚಾಗಿ ನೀರಿನ ಸೆಳೆತ ಕಂಡು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಕಾಲೇಜುಗಳಿಗೆ ಸದ್ಯಕ್ಕೆ ಘೋಷಣೆ ಇಲ್ಲ
ಬಹುತೇಕ ಕಡೆ ಜಿಟಿ ಜಿಟಿ ಮಳೆ ಇದೆ. ಹೀಗಾಗಿ ಶಾಲಾ ಕಾಲೇಜುಗಳಿಗೆ ಸದ್ಯಕ್ಕೆ ಘೋಷಣೆ ಇಲ್ಲ. ಮುಂದಿನ ಆರರಿಂದ ಎಂಟು ಗಂಟೆಯ ವಾತಾವರಣ ನೋಡಿಕೊಂಡು ಶಾಲಾ -ಕಾಲೇಜು ರಜೆ ಬಗ್ಗೆ ನಿರ್ಧಾರ ಮಾಡಲಿದ್ದೇವೆ. ಈಗಾಗಲೇ ಜಿಲ್ಲೆಯಲ್ಲಿ ಅಪಾರ ಹಾನಿ ಆಗಿದೆ. ಒಂದು ವಾರದಲ್ಲಿ ವಾಡಿಕೆ ಮಳೆಗಿಂತ ಶೇ 237 ರಷ್ಟು ಹೆಚ್ಚು ಮಳೆ ಆಗಿದೆ. ಜನ ಜಾನುವಾರ ರಕ್ಷಣೆಗೆ ಬೇಕಾದ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಂದು ಟಿವಿ9 ಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗ: ಜಿಲ್ಲೆಯಲ್ಲಿ ಇಂದು, ನಾಳೆ ಶಾಲೆಗಳಿಗೆ ರಜೆ
ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು (ನವೆಂಬರ್ 19), ನಾಳೆ ಶಾಲೆಗಳಿಗೆ ರಜೆ ನೀಡಿ ಡಿಸಿ ಕವಿತಾ ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ಒಂದರಿಂದ ಹತ್ತನೇ ತರಗತಿವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಭಾರಿ ಮಳೆಗೆ ಗೋಡೆ ಕುಸಿದುಬಿದ್ದು ಮಹಿಳೆ ಸಾವು
ಚಿತ್ರದುರ್ಗದಲ್ಲಿ ಕೆಲ ದಿನಗಳಿಂದ ನಿರಂತರ ಮಳೆ ಹಿನ್ನೆಲೆ, ಮಳೆಯಿಂದ ನೆನೆದ ಗೋಡೆ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿ ಬ್ಯಾಡರಹಳ್ಳಿಯಲ್ಲಿ ತ್ರಿವೇಣಿ(24) ಮೃತದುರ್ದೈವಿ. ಮನೆಯಲ್ಲಿ ಮಲಗಿರುವ ವೇಳೆ ತಡರಾತ್ರಿ ಏಕಾಏಕಿ ಗೋಡೆ ಕುಸಿತವಾಗಿದ್ದು, ಸ್ಥಳಕ್ಕೆ ಅಬ್ಬಿನಹೊಳೆ PSI ಪರಶುರಾಮ್ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ವೆಂಗಳಾಪುರ ಸರ್ಕಾರಿ ಶಾಲೆ ಮೇಲ್ಛಾವಣಿ, ಗೋಡೆ ಕುಸಿತ
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ವೆಂಗಳಾಪುರ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ, ಗೋಡೆ ಕುಸಿತವಾಗಿದೆ. ಮಕ್ಕಳು ಶಾಲೆಗೆ ಬಾರದಿದ್ದರಿಂದ ಅನಾಹುತ ತಪ್ಪಿದೆ. ಕೆಲದಿನದಿಂದ ಆತಂಕದಲ್ಲೇ ಶಾಲಾ ಅಂಗಳದಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿತ್ತು. ಕಳೆದ ರಾತ್ರಿಯಿಂದ ಜಿಲ್ಲೆಯ ವಿವಿಧೆಡೆ ನಿರಂತರ ಮಳೆ ಹಿನ್ನೆಲೆ ವೆಂಗಳಾಪುರ ಗ್ರಾಮದ ಪೋಷಕರು, ವಿದ್ಯಾರ್ಥಿಗಳಲ್ಲಿ ಆತಂಕ ಇತ್ತು. ಹೀಗಾಗಿ 2 ದಿನಗಳ ಕಾಲ ಜಿಲ್ಲಾಡಳಿತ ಶಾಲೆಗೆ ರಜೆ ಘೋಷಿಸಿದೆ.
ಬರಿದಾಗಿದ್ದ ಕೊಳವೆ ಬಾವಿಗಳಲ್ಲಿ ಉಕ್ಕುತ್ತಿರುವ ನೀರು
ಚಿತ್ರದುರ್ಗ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ಬರಿದಾಗಿದ್ದ ಐಮಂಗಲ ಪೊಲೀಸ್ ತರಬೇತಿ ಕೇಂದ್ರದಲ್ಲಿನ ಕೊಳವೆಬಾವಿ ನೀರು ಉಕ್ಕುತ್ತಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿ ಬತ್ತಿದ್ದ ಕೊಳವೆ ಬಾವಿಯಿಂದ ನೀರು ಹರಿದು ಅಚ್ಚರಿ ಸಂಗತಿ ಎದುರಾಗಿದೆ. ಕೆಲ ವರ್ಷಗಳಿಂದ ಬರಿದಾಗಿದ್ದ ಕೊಳವೆಬಾವಿಯಲ್ಲಿ ನೀರು ಕಾಣಿಸಿಕೊಂಡಿದೆ.
ತುಮಕೂರು: ಶಾಲೆಗೆ ಎರಡು ದಿನಗಳ ರಜೆ ಘೋಷಣೆ
ತುಮಕೂರು ಜಿಲ್ಲಾದ್ಯಂತ ರಾತ್ರಿ ಪೂರ್ತಿ ಬಿಡದೇ ಸುರಿಯುತ್ತಿರುವ ಮಳೆಗೆ ಜನರು ಹೈರಾಣಾಗಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಇಂದು ಮತ್ತು ನಾಳೆ ಜಿಲ್ಲಾದ್ಯಂತ ಅಂಗನವಾಡಿ ಶಿಶುವಿಹಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿದೆ. ಹೆಚ್ಚಿನ ಮಳೆ ಹಿನ್ನೆಲೆಯಲ್ಲಿ ಎರಡು ದಿನಗಳ ರಜೆ ಘೋಷಣೆ ಮಾಡಿದ್ದು, ಜಿಲ್ಲಾದ್ಯಂತ ಅಪಾಯಮಟ್ಟ ಮೀರಿ ಹರಿಯಿತ್ತಿರುವ ನದಿ ಕೆರೆ ಹಳ್ಳ ಕೊಳ್ಳಗಳ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮಳೆಯಿಂದಾಗಿ ಕೆರೆಯಂತಾದ ಎಲೆಕೋಸು ತೋಟ
ತುಮಕೂರು ಜಿಲ್ಲಾದ್ಯಂತ ಭಾರಿ ಮಳೆ ಹಿನ್ನೆಲೆ ಎಲೆಕೋಸು ತೋಟ ಕೆರೆಯಂತಾಗಿದೆ. ತುಮಕೂರು ಹೊರವಲಯದ ಹನುಮಂತಪುರ ರಾಷ್ಟ್ರೀಯ ಹೆದ್ದಾರಿ 48 ರ ಪಕ್ಕದಲ್ಲಿ ಇರುವ ಎಲೆಕೋಸು ಜಮೀನಿನಲ್ಲಿ 3-4 ಅಡಿ ನೀರು ನಿಂತಿದೆ. ರಾಜಗಾಲುವೆಯಿಂದ ಇನ್ನೂ ರಭಸವಾಗಿ ಹರಿಯುತ್ತಿದ್ದು, ಅಪಾಯಮಟ್ಟ ಮೀರಿ ನದಿಗಳು ಹರಿಯುತ್ತಿವೆ.
ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು
ತುಮಕೂರು ಜಿಲ್ಲಾದ್ಯಂತ ಭಾರಿ ಮಳೆ ಹಿನ್ನೆಲೆ ತುಮಕೂರು ನಗರದ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹೀಗಾಗಿ ನಗರ ವಾಸಿಗಳು ಹೈರಾಣಾಗಿದ್ದು, ಮಳೆಗೆ ರಾತ್ರಿಯಿಡಿ ಯುವಕರು ನಿದ್ದೆಗೆಟ್ಟಿದ್ದಾರೆ. ತುಮಕೂರು ಹೊರವಲಯದ ಹನುಮಂತಪುರ ಅಣ್ಣೆತೋಟದಲ್ಲಿ ಮನೆಗೆ ನೀರು ನುಗ್ಗಿದ ಕಾರಣ ಕುಳಿತುಕೊಂಡೆ ಯುವಕರು ರಾತ್ರಿ ಕಳೆದಿದ್ದಾರೆ. ಮನೆಯ ಜೊತೆಗೆ ಟ್ರಾಕ್ಟರ್ ಕೂಡ ನೀರಿನಲ್ಲಿ ಮುಳುಗುವ ಆತಂಕ ಎದುರಾಗಿದೆ. ತುಮಕೂರು ನಗರದ ಬಹುತೇಕ ರಸ್ತೆಗಳು ಜಲಾವೃತ್ತವಾಗಿದ್ದು, ತುಮಕೂರು ನಗರದ ಸದಾಶಿವನಗರ, ಕೋತಿ ತೋಪು, ಆರ್.ಟಿ ನಗರ ರಸ್ತೆಗಳು ಜಲಾವೃತವಾಗಿದೆ.
ಇದನ್ನೂ ಓದಿ:
ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳು ಭೀಕರ ಮಳೆಗೆ ತತ್ತರ, ಜಲ ದಿಗ್ಬಂಧನ: ಇಂದೂ ಮಳೆ ಮುಂದುವರಿದ್ರೆ ಕಷ್ಟ ಕಷ್ಟ
ಭಾರಿ ಮಳೆಗೆ ಬೆಂಗಳೂರಿನಲ್ಲಿ ಕೆರೆಯಂತಾದ ರಸ್ತೆಗಳು; ವಾಹನ ಸವಾರರ ಪರದಾಟ, ಜನಜೀವನ ಅಸ್ತವ್ಯಸ್ತ
Published On - 9:11 am, Fri, 19 November 21