AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರಿ ಮಳೆಗೆ ಬೆಂಗಳೂರಿನಲ್ಲಿ ಕೆರೆಯಂತಾದ ರಸ್ತೆಗಳು; ವಾಹನ ಸವಾರರ ಪರದಾಟ, ಜನಜೀವನ ಅಸ್ತವ್ಯಸ್ತ

Rain in Bengaluru: ಬೆಂಗಳೂರು ಸೇರಿದಂತೆ ಹೊರವಲಯದಲ್ಲೂ ನಿನ್ನೆ ಸಂಜೆ ಧಾರಾಕಾರವಾಗಿ ಮಳೆ ಸುರಿದಿದೆ. ನಗರದ ಬಹುಪಾಲು ರಸ್ತೆಗಳು ಕೆರೆಯಂತಾಗಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಭಾರಿ ಮಳೆಗೆ ಬೆಂಗಳೂರಿನಲ್ಲಿ ಕೆರೆಯಂತಾದ ರಸ್ತೆಗಳು; ವಾಹನ ಸವಾರರ ಪರದಾಟ, ಜನಜೀವನ ಅಸ್ತವ್ಯಸ್ತ
ರಸ್ತೆ ಮೇಲೆ ಮೂರು ಅಡಿಗಳಷ್ಟು ನಿಂತ ನೀರು
Follow us
TV9 Web
| Updated By: preethi shettigar

Updated on:Nov 19, 2021 | 8:43 AM

ಬೆಂಗಳೂರು: ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದಂತೆ ಬೆಂಗಳೂರಿನಲ್ಲಿ ಜಿಟಿ- ಜಿಟಿ ಮಳೆ ಇತ್ತು. ಆದರೆ ನಿನ್ನೆ (ನವೆಂಬರ್ 18) ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆ ಸುರಿದಿದೆ. ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟದ (Karnataka rains) ಪರಿಣಾಮ ಕೆಲವು ಕಡೆ ರಸ್ತೆಗಳು ಕೆರೆಯಂತಾದರೆ ಮತ್ತೆ ಹಲವು ಕಡೆ ಜನರ ಮನೆಗಳಿಗೆ ನೀರು ನುಗ್ಗಿದೆ. ಬೆಂಗಳೂರು ಸೇರಿದಂತೆ ಹೊರವಲಯದಲ್ಲೂ ನಿನ್ನೆ ಸಂಜೆ ಧಾರಾಕಾರವಾಗಿ ಮಳೆ ಸುರಿದಿದೆ. ನಗರದ ಬಹುಪಾಲು ರಸ್ತೆಗಳು ಕೆರೆಯಂತಾಗಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೆಂಗಳೂರಿನಲ್ಲಿ‌ ಸಂಜೆ ವೇಳೆ ಎಂಜಿ ರಸ್ತೆ, ಕೆ.ಜಿ.ರಸ್ತೆ, ಸಿಟಿ‌ ಮಾರ್ಕೇಟ್, ಕಾರ್ಪೋರೇಷನ್, ಕೆ.ಆರ್ ಸರ್ಕಲ್, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್, ಮಲ್ಲೇಶ್ವರ, ಯಶವಂತಪುರ, ಹೆಬ್ಬಾಳ, ಪೀಣ್ಯ ಸೇರಿದಂತೆ ಹಲವೆಡೆ ಪ್ರಮುಖ ರಸ್ತೆಗಳು ಟ್ರಾಫಿಕ್ ಜಾಮ್ ಉಂಟಾಗುವುದು ಸಾಮಾನ್ಯ. ಇನ್ನೂ ಮಳೆ ಬಂದರಂತೂ ಹೇಳುವುದೇ ಬೇಡ. ಹೀಗಾಗಿ ನಗರದ ಈ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ನಿನ್ನೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಗ್ರಾಹಕರಿಲ್ಲದೆ ಬೀದಿ‌ಬದಿ ವ್ಯಾಪಾರಸ್ತರ ಬದುಕು ದುಸ್ತರ ಗ್ರಾಹಕರ ನಿರೀಕ್ಷೆಯಲ್ಲಿ ಎಂದಿನಂತೆ ಬಂಡವಾಳ ಹೂಡಿ, ತರಕಾರಿ ಮಾರಾಟಗಾರರು, ಚಾಟ್ಸ್ ವ್ಯಾಪಾರಿಗಳು ಅಗತ್ಯ ಆಹಾರ ಸಾಮಾಗ್ರಿಗಳನ್ನು ತಯಾರಿಸಿಟ್ಟುಕೊಂಡು, ಗ್ರಾಹಕರಿಲ್ಲದೆ ನಷ್ಟ ಅನುಭವಿಸ್ತಿದ್ದೇವೆ. ಕೊರೊನಾ ಲಾಕ್ ಡೌನ್, ಕರ್ಪ್ಯೂ ಒಂದೆಡೆ ಬರೆ ಎಳೆದರೆ, ಮತ್ತೊಂದೆಡೆ ನಿರಂತರವಾದ ಮಳೆ ಬದುಕನ್ನು ದುಸ್ತರವಾಗಿಸಿದೆ ಎಂದು ಮಾಗಡಿ ರಸ್ತೆಯ ಬೀದಿ ಬದಿ ಚಾಟ್ಸ್ ವ್ಯಾಪಾರಿ ಕೃಷ್ಣೆ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವರು ಇರುವ ಏರಿಯಾದಲ್ಲಿನ ರಸ್ತೆಗಳು ಜಲಮಯ ಮುರುಗೇಶ್ ನಿರಾಣಿ, ಶ್ರೀರಾಮುಲು, ಡಾ.ಕೆ.ಸುಧಾಕರ್, ಸಿ.ಸಿ.ಪಾಟೀಲ್, ಎಂ.ಪಿ.ರೇಣುಕಾಚಾರ್ಯ, ಎಸ್.ಆರ್.ಪಾಟೀಲ್ ವಾಸವಾಗಿರುವ ಸ್ಯಾಂಕಿ ರಸ್ತೆಯಲ್ಲಿರುವ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ಬಳಿ ಕೂಡ ರಸ್ತೆಯ ಮೇಲೆ ಸುಮಾರು 3 ಅಡಿಯಷ್ಟು ನೀರು ಸಂಗ್ರಹವಾಗಿದೆ. ಇದರಿಂದಾಗಿ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ಮುಂಭಾಗದ ರಸ್ತೆ ಜಲಮಯವಾಗಿದ್ದು, ರಸ್ತೆಯಲ್ಲಿ ಓಡಾಡುವುದಕ್ಕೆ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ಇನ್ನು ಇಂಜಿನ್​ಗೆ ನೀರು ಹೋಗಿ ಆಟೋ ಕೈಕೊಟ್ಟಿದ್ದು, ಆಟೋ ಸ್ಟಾರ್ಟ್ ಮಾಡಲು ಚಾಲಕ ಹರಸಾಹಸಪಟ್ಟಿದ್ದಾರೆ.

ರಾಜ್ಯದಲ್ಲಿ ನಿರಂತರ ಮಳೆ ಹಿನ್ನೆಲೆ ಡಿಸಿಗಳ ಜತೆ ಸಿಎಂ ಸಭೆ ರಾಜ್ಯದಲ್ಲಿ ನಿರಂತರ ಮಳೆ ಹಿನ್ನೆಲೆ ಇಂದು ಮಧ್ಯಾಹ್ನ 1 ಗಂಟೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಡಿಸಿಗಳ ಜತೆ ಸಭೆ ನಡೆಸಲಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ಜಿಲ್ಲಾಡಳಿತಗಳ ಜತೆ ಮಳೆ ಹಾನಿ, ಪರಿಹಾರ ಕ್ರಮಗಳ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ.

ವಾಹನ ಸವಾರರು ಹೈರಾಣು ಬೆಂಗಳೂರಿನ ರಾಮೂರ್ತಿ ನಗರ ರಸ್ತೆಗಳು ಮಳೆಗೆ ಕೆಲ ಕಾಲ ಜಲಾವೃತವಾಗಿದ್ದು, ವಾಹನ ಸಂಚಾರಕ್ಕೆ ಮಳೆಯಿಂದ ಸಮಸ್ಯೆ ಎಸುರಾಗಿದೆ. ರಸ್ತೆಯಲ್ಲಿ ಸುಮಾರು ಒಂದು ಅಡಿಯಷ್ಟು ನೀರು ನಿಂತಿದ್ದು, ನೀರು ಹರಿಯುತಿದ್ದ ರಸ್ತೆಯಲ್ಲಿ ಬೈಕ್ ಸಾವಾರರು ಸಂಚರಿಸಲು ಹರಸಾಹಸಪಡಬೇಕಾಯಿತು. ಇನ್ನು ಹಲಸೂರು ಕೆರೆ ಮುಂಭಾಗದ ರಸ್ತೆಯಲ್ಲಿ ಕೂಡ ನೀರು ನಿಂತಿದೆ. ವರ್ತೂರು-ಸರ್ಜಾಪುರ ಮುಖ್ಯ ರಸ್ತೆ ಜಲಾವೃತ 3 ಅಡಿಯಷ್ಟು ನೀರು ನಿಂತ ಹಿನ್ನೆಲೆ ಸವಾರರು ಪರದಾಡುವಂತಾಯಿತು.

ಬೆಂಗಳೂರಿನ ಮಹದೇವಪುರ ವಲಯದಲ್ಲಿ ಅತ್ಯಧಿಕ ಮಳೆ ಮಹದೇವಪುರ ವಲಯದಲ್ಲಿ 128.5 ಮಿಲಿ ಮೀಟರ್ ಮಳೆಯಾದರೆ, ಬೆಂಗಳೂರು ಉತ್ತರ ತಾಲೂಕಿನಲ್ಲಿ 66 ಮಿಲಿ ಮೀಟರ್ ಮಳೆಯಾಗಿದೆ. ಇನ್ನು ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ 65.5 ಮಿ.ಮೀ. ಮಳೆಯಾಗಿದ್ದು, ವರ್ತೂರು 104 ಮಿ.ಮೀ, ಹೆಚ್.ಎ.ಎಲ್ ವಿಮಾನ ನಿಲ್ದಾಣ 97.5 ಮಿ.ಮೀ, ಕೆಂಗೇರಿ 72 ಮಿ.ಮೀ, ಯಲಹಂಕ 75.5 ಮಿ.ಮೀ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ 101 ಮಿ.ಮೀ, ಬನಶಂಕರಿ 75.5 ಮಿ.ಮೀ, ಹೆಬ್ಬಾಳ 50 ಮಿ.ಮೀ, ಕೆ.ಆರ್.ಪುರ ರೈಲ್ವೆ ನಿಲ್ದಾಣ 86.5 ಮಿ.ಮೀ, ಕಾರ್ಪೊರೇಷನ್ ವೃತ್ತ 69.5 ಮಿ.ಮೀ, ಲಾಲ್ ಬಾಗ್ 45.5 ಮಿ.ಮೀ, ಹೊರಮಾವು 84.5 ಮಿ.ಮೀ, ಪುಲಕೇಶಿನಗರ 74 ಮಿ.ಮೀ, ಬಾಣಸವಾಡಿ 67.5 ಮಿ.ಮೀ, ದೊಡ್ಡನೆಕುಂಡಿ 104 ಮಿ.ಮೀ, ಮೈಸೂರ್ ರಸ್ತೆ 61 ಮಿ.ಮೀ ಮಳೆಯಾಗಿದೆ. ಬೆಂಗಳೂರಿನ ಮಹದೇವಪುರ ವಲಯದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಅಲ್ಲದೇ ಇಡೀ ಬೆಂಗಳೂರಿನಾದ್ಯಂತ ನಿನ್ನೆ ಸರಾಸರಿ 60 ರಿಂದ 70 ಮಿ.ಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಕೆರೆ ಕೋಡಿ ಬಿದ್ದು ಭಾರಿ ಅವಾಂತರ ಬೆಂಗಳೂರಿನ ಕೋಗಿಲು ಬಳಿಯ ಬೆಳ್ಳಹಳ್ಳಿಯಲ್ಲಿ ಕೆರೆ ಕೋಡಿ ಬಿದ್ದು, ಮನೆಗಳಿಗೆ ನುಗ್ಗಿದೆ. ಪರಿಣಾಮ ಮನೆಗಳಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ನೀರುಪಾಲಾಗಿದೆ. ಬಳಿಕ ತಡರಾತ್ರಿ ಸ್ಥಳಕ್ಕೆ ಅಗಮಿಸಿದ ಬಿಬಿಎಂಪಿ ಸಿಬ್ಬಂದಿಗಳು ನೀರನ್ನು ಕೋಡಿ ರಾಜಕಾಲುವೆಗೆ ತಿರುಗಿಸಿದ್ದಾರೆ.

ಬೆಂಗಳೂರಿನ ಲಿಡೋ ಮಾಲ್ ಬಳಿ ಮನೆ ಕುಸಿತ ನಿರಂತರ ಮಳೆ ಹಿನ್ನೆಲೆ ಇಂದು ಮುಂಜಾನೆ ಬೆಂಗಳೂರಿನ ಲಿಡೋ ಮಾಲ್ ಬಳಿ ಮನೆ ಕುಸಿದುಬಿದ್ದಿದೆ. ಕುಸಿದುಬಿದ್ದ ಮನೆಯಲ್ಲಿ ಮೂವರು ವಾಸಿಸುತ್ತಿದ್ದರು. ಹಳೆಯ ಮನೆಯಾಗಿದ್ದರಿಂದ ಕುಸಿಯುವ ಆತಂಕವಿತ್ತು. ಹೀಗಾಗಿ ನಿನ್ನೆ ಮನೆಯಲ್ಲಿ ಯಾರೂ ಇರಲಿಲ್ಲ. ಪರಿಣಾಮ ಅಪಾಯ ತಪ್ಪಿದಂತಾಗಿದೆ.

ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಕೊಡಿಗೆಹಳ್ಳಿ ಅಂಡರ್‌ಪಾಸ್ ಬ್ಲಾಕ್ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಕೊಡಿಗೆಹಳ್ಳಿ ಅಂಡರ್‌ಪಾಸ್ ಬ್ಲಾಕ್ ಆಗಿದೆ. ಹೀಗಾಗಿ ಬೃಹತ್ ವಾಹನಗಳ ಹೊರತುಪಡಿಸಿ ಇನ್ಯಾವ ವಾಹನವೂ ಸಂಚರಿಸಲು ಆಗದ‌ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 2 ಅಡಿಗೂ ಹೆಚ್ಚು ನೀರು ಅಂಡರ್‌ಪಾಸ್‌ನಲ್ಲೇ ಶೇಖರಣೆಯಾಗಿದೆ. ಅಲ್ಲದೇ ಅಂಡರ್‌ಪಾಸ್‌ಗೆ ಹೋಗುವ ಮಾರ್ಗದಲ್ಲಿ ಸ್ಥಳೀಯರು ಬ್ಯಾರಿಕೇಡ್ ಅಳವಡಿಸಿದ್ದಾರೆ.

ಕೆರೆ ಕೋಡಿ ಬಿದ್ದು ಗೋಣೂರಿನ ಮನೆಗಳಿಗೆ ನುಗ್ಗಿದ ನೀರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೋಣೂರಿನ 6 ಮನೆ ಜಲಾವೃತವಾಗಿದೆ. ನಿರಂತರವಾಗಿ ಸುರಿದ ಮಳೆಗೆ ಕೆರೆ ಕೋಡಿ‌ ಹರಿದಿದೆ. ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ. ಕಳೆದ ರಾತ್ರಿ ಮಳೆ ನೀರು ನುಗ್ಗಿದ್ದು, ರಾಜಕಾಲುವೆ ಒತ್ತುವರಿಯಿಂದ ಮನೆಗಳಿಗೆ ನೀರು ನುಗ್ಗಿರುವುದಾಗಿ‌ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರಂತರ ಮಳೆಗೆ ಮನೆ ಕುಸಿದುಬಿದ್ದು ವೃದ್ಧೆ ದುರ್ಮರಣ ನಿರಂತರ ಮಳೆಗೆ ಮನೆ ಕುಸಿದುಬಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಮುಗಬಾಳ ಗ್ರಾಮದ ವೆಂಕಟಮ್ಮ(72) ಮೃತಪಟ್ಟಿದ್ದಾರೆ. ಗಂಡ ಸತ್ತ ನಂತರ ಒಂಟಿಯಾಗಿ ಹೆಂಚಿನ ಮನೆಯಲ್ಲಿ ವೃದ್ಧೆ ವಾಸಿಸುತ್ತಿದ್ದರು. ಆದರೆ ನಿನ್ನೆ ಮನೆ ಕುಸಿದು ಬಿದ್ದಿದೆ. ರಾತ್ರಿ ಮನೆ ಕುಸಿದ ಪರಿಣಾಮ ಸ್ಥಳೀಯರೇ ರಕ್ಷಿಸಿ ಆಸ್ಪತ್ರೆಗೆ ಕರೆದೋಗಿದ್ದರು. ಆದರೆ ಮಾರ್ಗ ಮಧ್ಯೆದಲ್ಲೇ ಲಕ್ಷ್ಮಮ್ಮ ಮೃತಪಟ್ಟಿದ್ದಾರೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಭಾರಿ ಮಳೆಗೆ ಕುಸಿದು ಬಿದ್ದ ಐತಿಹಾಸಿಕ ಕೋಟೆಯ ಬುರುಜು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೋಟೆ ನಿರಂತರ ಮಳೆಯಿಂದಾಗಿ ಕುಸಿದು ಬಿದ್ದಿದೆ. ಪುರಾತನ ಕಾಲದ ದೇವನಹಳ್ಳಿಯ ಕೋಟೆಯ ಒಂದು ಬುರುಜು ಸಂಪೂರ್ಣ ಕುಸಿತವಾಗಿದೆ. ಇಂದು ಮುಂಜಾನೆ ಸಮಯದಲ್ಲಿ ಆಮೇಯಾಕಾರದಲ್ಲಿದ್ದ ಕೋಟೆಯ ಒಂದು ಭಾಗದ ಬುರುಜು ಗೋಡೆ ಸಂಪೂರ್ಣ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ: ಕರ್ನಾಟಕದಲ್ಲಿ ಧಾರಾಕಾರ ಮಳೆ: ಶಾಲೆಗಳಿಗೆ ರಜೆ ನೀಡುವ ಅಧಿಕಾರಿ ಡಿಸಿಗಳಿಗೆ, ಶಿಕ್ಷಣ ಇಲಾಖೆ ಸುತ್ತೋಲೆ

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಪ್ರವಾಹಕ್ಕೆ ಸಿಲುಕುವ 209 ಪ್ರದೇಶಗಳಿವೆ, ಬಿಬಿಎಂಪಿಯ ಯಾವ ವಲಯದಲ್ಲಿ ಹೆಚ್ಚಾಗಿದೆ ನೋಡಿ

Published On - 7:50 am, Fri, 19 November 21