ದಾವಣಗೆರೆ, ಸೆಪ್ಟೆಂಬರ್ 30: ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿದೆ. ಈ ಕುರಿತು ಮೊನ್ನೆ ಬೆಂಗಳೂರಿನಲ್ಲಿ ನಡೆದ ಹಾನಗಲ್ ಕುಮಾರಸ್ವಾಮೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದ್ದೆ. ಆ ಹೇಳಿಕೆಗೆ ನಾನು ಬದ್ದ ಎಂದು ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೊಂದು ಸರ್ಕಾರ ಬಂದಾಗ ಒಂದೊಂದು ರೀತಿ ಇರುತ್ತದೆ. ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳು ಅನ್ಯಾಯ ಆಗುತ್ತಿರುವುದು ನಿಜ. ಅದೇ ಕಾರಣಕ್ಕೆ ಈ ವಿಚಾರ ಹೊರಗೆ ಬಂದಿದೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ 7 ಜನ ಲಿಂಗಾಯತ ಸಚಿವರಿದ್ದಾರೆ ಎಂದು. ಆದರೆ ನಾನು ಸಚಿವರ ಬಗ್ಗೆ ಹೇಳಿಲ್ಲ. ಅಧಿಕಾರಿಗಳ ಬಗ್ಗೆ ಹೇಳಿರುವೆ. ತೊಂದರೆ ಆಗಿದ್ದು ನಿಜ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ತುಮಕೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಶಾಮನೂರ ಶಿವಶಂಕರಪ್ಪನವರು ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಹಿರಿಯರು. ಅವರ ಹೇಳಿಕೆ ಬಹಳ ಗಂಭೀರವಾದಂತ ವಿಚಾರ. ಮುಂದಿನ ದಿನಗಳಲ್ಲಿ ಈ ವಿಚಾರ ಬಹಳ ಚರ್ಚೆ ಆಗಲಿದೆ ಎಂದಿದ್ದಾರೆ.
ಕೊಪ್ಪಳದಲ್ಲಿ ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದು, ಶಾಮನೂರು ಶಿವಶಂಕರಪ್ಪ ಹೇಳಿಕೆಯಲ್ಲಿ ಸತ್ಯ ಇದೆ. ಲಿಂಗಾಯತ ಅಧಿಕಾರಿಗಳ ಮೂಲೆಗುಂಪು ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ನನಗೂ ಹಲವು IAS, IPS ಅಧಿಕಾರಿಗಳು ಕರೆ ಮಾಡಿ ಹೇಳಿದ್ದಾರೆ. ಆದರೆ ನಾನು ಅಧಿಕಾರಿ ಹಾಗೂ ಆಡಳಿತದ ವಿಚಾರದಲ್ಲಿ ಕೈ ಹಾಕುವುದಿಲ್ಲ. ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಟ್ಟರೆ ಸಾಕು. ಇಂತಹ 100 ಅಧಿಕಾರಿಗಳನ್ನು ತಯಾರು ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ನನ್ನ ಹೆಣದ ಮೇಲೆ ಸರ್ಕಾರ ಮಾಡಬೇಕು: ಹೆಚ್ಡಿ ದೇವೇಗೌಡ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಎಲ್ಲಾ ಲಿಂಗಾಯತ ಶಾಸಕರ ಧ್ವನಿಯಾಗಿ ಶಾಮನೂರು ಮಾತಾಡಿದ್ದಾರೆ. ಸಮುದಾಯದ ಧ್ವನಿಯನ್ನು ನಿಭಾಯಿಸುವ ಕೆಲಸ ಸರ್ಕಾರ ಮಾಡಲಿ. ಶಾಮನೂರು ರೀತಿ ಸಮುದಾಯದ ಸಚಿವರು, ಶಾಸಕರು ಮಾತನಾಡಲಿ. ಸಮುದಾಯದ ಸಚಿವರು ಹಾಗೂ ಶಾಸಕರು ಮಾತನಾಡಿದರೆ ಸರಿಯಾಗುತ್ತೆ. ಪ್ರಾಮಾಣಿಕ ಅಧಿಕಾರಿಗಳಿಗೆ ಕಾಂಗ್ರೆಸ್ ಸರ್ಕಾರ ಒಳ್ಳೆಯ ಸ್ಥಾನ ನೀಡಲಿ. ನಿಷ್ಕ್ರಿಯ ಅಧಿಕಾರಿಗಳ ವಿರುದ್ಧ ಏನು ಬೇಕಾದರೂ ಕ್ರಮ ಕೈಗೊಳ್ಳಲಿ. ಸಮುದಾಯದ ಅಧಿಕಾರಿಗಳಿಗೆ ಆಗಿರುವ ಆ ನೋವು ನನಗೂ ಇದೆ. ಆದರೆ ಈವರೆಗೆ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.