
ದಾವಣಗೆರೆ, ಜನವರಿ 31: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಯುವಕರ ಮೇಲೆ ದಾಳಿ ಪ್ರಕರಣ ಸಂಬಂಧ ಬಂಧಿಸಲು ಬಂದ ಪೊಲೀಸರ ಮೇಲೆಯೇ ಕಾಂಗ್ರೆಸ್ ಮುಖಂಡ, ಸಚಿವರ ಆಪ್ತನ ಮಗ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಪೈಲ್ವಾನ್ ಪುತ್ರ ಹಸನ್ ಆರೋಪಿಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಆಪ್ತರೂ ಆಗಿರುವ ಅಯೂಬ್ ಪೈಲ್ವಾನ್ ಮನೆ ಮುಂದೆ ಭಾರಿ ಹೈಡ್ರಾಮಾ ನಡೆದಿದೆ. ಅಂತಿಮವಾಗಿ ಹಸನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರು ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನ ಎರಡು ಗುಂಪು ಬಡಿದಾಡಿಕೊಂಡಿತ್ತು.ಗಲಾಟೆಯಲ್ಲಿ 6 ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದರು. ಯುವಕರ ಮೇಲೆ ದಾಳಿ ಮಾಡಿರೋದು ಅಯೂಬ್ ಪೈಲ್ವಾನ್ ಪುತ್ರರು ಎಂಬ ಕಾರಣಕ್ಕೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಬಡಾವಣೆ ಠಾಣೆ ಇನ್ಸ್ಪೆಕ್ಟರ್ ಗಾಯತ್ರಿ, ಕಾನ್ಸ್ಟೇಬಲ್ಗಳಾದ ಕೆಂಚಪ್ಪ ಮತ್ತು ಹರೀಶ್ ಸೇರಿ ತಂಡ ತೆರಳಿತ್ತು. ಈ ವೇಳೆ ಮನೆಯಲ್ಲಿದ್ದ ಆರೋಪಿ ಹಸನ್, ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡಿರೋ ಪೊಲೀಸ್ ಸಿಬ್ಬಂದಿಗಳಾದ ಕೆಂಚಪ್ಪ ಮತ್ತು ಹರೀಶ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಇದನ್ನೂ ಓದಿ: ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ
ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಗಲಾಟೆ ವಿಚಾರವಾಗಿ ಹಳೇ ದಾವಣಗೆರೆಯಲ್ಲಿ ಬಿಗುವಿನ ವಾತಾರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇನ್ನು ನಗರದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಲ್ಲಿ ಮೇಲಿಂದ ಮೇಲೆ ಸಚಿವರ ಆಪ್ತರ ಹೆಸರು ಕೇಳಿಬರುತ್ತಿದೆ. ಇತ್ತೀಚಿಗೆ ಡ್ರಗ್ಸ್ ಕೇಸ್ನಲ್ಲಿ ಶಾಮನೂರು ವೇದಮೂರ್ತಿ, ಅನ್ವರ್ ಪಾಷಾ ಜೈಲು ಸೇರಿದ್ದಾರೆ. ಅಕ್ಕಿ ಸಾಗಾಣಿಕೆಯಲ್ಲಿ ಜಮೀರ್ ಎಂಬಾತ ಸಿಕ್ಕಿ ಬಿದ್ದಿದ್ದ. ಈ ನಡುವೆ ಅಯೂಬ್ ಪೈಲ್ವಾನ್ ಪುತ್ರ ಹಾಡುಹಗಲೇ ಆಸ್ಪತ್ರೆ ಆವರಣದಲ್ಲಿ ಹೊಡೆದಾಟ ನಡೆಸಿದ್ದಾನೆ. ಜೊತೆಗೆ ಪೊಲೀಸರ ಮೇಲೆ ಹಲ್ಲೆಯ ಆರೋಪವೂ ಕೇಳಿಬಂದಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:23 pm, Sat, 31 January 26