ತುಮಕೂರು: ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ
ಬೆಂಗಳೂರಿನ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದ ಮರುದಿನವೇ ತುಮಕೂರಿನ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ ಕುಮಾರ್ ಲೋಕಾಯಕ್ತ ಬಲೆಗೆ ಬಿದ್ದಿದ್ದಾರೆ. 40 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಪೊಲೀಸ್ ಠಾಣೆಯಲ್ಲೇ ಲೋಕಾಯುಕ್ತ ಅಧಿಕಾರಿಗಳು ಅವರನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ತುಮಕೂರು, ಜನವರಿ 31: ವ್ಯಕ್ತಿಯೋರ್ವರ ಬಳಿ ಲಂಚದ ಬೇಡಿಕೆ ಇಟ್ಟ ಪ್ರಕರಣ ಸಂಬಂಧಿಸಿ ಸಾಕ್ಷ್ಯಾಧಾರಗಳು ಪತ್ತೆ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ತುಮಕೂರು ಗ್ರಾಮಾಂತರ ಠಾಣೆಯ ಪಿಎಸ್ಐ ಚೇತನ್ ಕುಮಾರ್ರನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಮೂಲದ ವಕೀಲ ನಾಗೇಶ್ ಅವರಿಗೆ ಸೇರಿದ ಕಾರನ್ನು ಕಳೆದ ಜನವರಿ 17ರಂದು ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆಸರುಮಡು ಸಮೀಪ ಪಿಎಸ್ಐ ಚೇತನ್ ಕುಮಾರ್ ವಶಕ್ಕೆ ಪಡೆದಿದ್ದರು. ಕಾರಿನಲ್ಲಿ ಗಾಂಜಾ ಇದೆ ಎಂದು ಹೇಳಿ ವಾಹನವನ್ನು ಠಾಣೆಗೆ ತಂದ ಪಿಎಸ್ಐ, ನಂತರ ಯಾವುದೇ ಪ್ರಕರಣ ದಾಖಲಿಸದೆ, ಕಾರನ್ನು ಬಿಡುಗಡೆ ಮಾಡದೇ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಮೊದಲಿಗೆ ಐದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್ಐ, ನಂತರ ಮಾತುಕತೆ ನಡೆಸಿ 40 ಸಾವಿರ ರೂಪಾಯಿಗೆ ಡೀಲ್ ಫೈನಲ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಬೇಸತ್ತ ಕಾರಿನ ಮಾಲೀಕರಾದ ವಕೀಲ ನಾಗೇಶ್ ತುಮಕೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆ ನಡೆಸಿದ್ದಾರೆ. ಪಿಎಸ್ಐ ಚೇತನ್ ಕುಮಾರ್ ಕ್ಯಾತಸಂದ್ರದ ಟೋಲ್ ಸಮೀಪದ ಅಂಗಡಿಯೊಂದರಲ್ಲಿ ಹಣ ನೀಡುವಂತೆ ಕಾರು ಮಾಲೀಕನಿಗೆ ಸೂಚನೆ ನೀಡಿದ್ದು, ಹಣ ತರಲು ಬರುವ ವ್ಯಕ್ತಿಯ ಫೋಟೋವನ್ನು ಅಂಗಡಿಯ ಮಾಲೀಕನಿಗೆ ಮೊಬೈಲ್ ಮೂಲಕ ಕಳುಹಿಸಿದ್ದರು. ನಿಗದಿಯಂತೆ ಅಂಗಡಿಯಲ್ಲಿ ಹಣ ನೀಡಿದ ತಕ್ಷಣ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಂಗಡಿಯ ಮಾಲೀಕನ ಮೊಬೈಲ್ ಪರಿಶೀಲನೆ ವೇಳೆ ಪಿಎಸ್ಐಯ ಪಾತ್ರ ಸ್ಪಷ್ಟವಾಗಿದೆ.
ಬೆಂಗಳೂರಿನ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಕೂಡ ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಚೀಟಿ ವ್ಯವಹಾರ ಸಂಬಂಧಿತ ಪ್ರಕರಣದಲ್ಲಿ ವ್ಯಕ್ತಿಯನ್ನು ಕೇಸ್‌ನಲ್ಲಿ ಸಿಲುಕಿಸುವುದಾಗಿ ಬೆದರಿಸಿ ಒಟ್ಟು 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಅವರ ಮೇಲಿದ್ದು, ಮೈಸೂರು ರಸ್ತೆಯ ಸಿಐಆರ್ ಗ್ರೌಂಡ್ ಬಳಿ 4 ಲಕ್ಷ ರೂ. ಲಂಚ ಪಡೆಯುವಾಗ ಅವರನ್ನು ಬಂಧಿಸಲಾಗಿತ್ತು.
ಪೊಲೀಸ್ ಇಲಾಖೆಯಲ್ಲೇ ಹೆಚ್ಚುತ್ತಿರುವ ಭ್ರಷ್ಟಾಚಾರ
ಸತತವಾಗಿ ಪೊಲೀಸ್ ಅಧಿಕಾರಿಗಳೇ ಲೋಕಾಯುಕ್ತ ಬಲೆಗೆ ಬೀಳುತ್ತಿರುವ ಘಟನೆಗಳು ಪೊಲೀಸ್ ಇಲಾಖೆಯ ಪಾರದರ್ಶಕತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸಾರ್ವಜನಿಕರ ವಿಶ್ವಾಸ ಕಾಪಾಡಬೇಕಾದ ಅಧಿಕಾರಿಗಳೇ ಲಂಚದ ದಂಧೆಯಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲೋಕಾಯುಕ್ತ ಪೊಲೀಸರು ತುಮಕೂರು ಗ್ರಾಮಾಂತರ ಪಿಎಸ್‌ಐ ಚೇತನ ಕುಮಾರ್ ವಿರುದ್ಧ ಕಾನೂನು ಕ್ರಮ ಮುಂದುವರಿಸಿದ್ದು, ತನಿಖೆ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Sat, 31 January 26