ದಾವಣಗೆರೆ: ಇದೇ ತಿಂಗಳ ಜೂ.9 ರಂದು ದಾವಣಗೆರೆ(Davanagere)ತಾಲೂಕಿನ ಹಳೇ ಬಿಸಲೇರಿ ಗ್ರಾಮದ ದುರ್ಗಾಂಭಿಕಾ ಕ್ಯಾಂಪ್ನಲ್ಲಿ ನಿಂಗರಾಜ್ (34) ಎಂಬುವವನ ಕೊಲೆಯಾಗಿತ್ತು. ಮನೆಯ ಮೇಲಿಂದ ಬಿದ್ದು, ಪತಿ ಸಾವನ್ನಪ್ಪಿದ್ದಾನೆ ಎಂದು ಪತ್ನಿ ಕಾವ್ಯ ಕಥೆ ಕಟ್ಟಿ ಕೊಲೆ ಮುಚ್ಚಿ ಹಾಕಲು ಯತ್ನಿಸಿದ್ದಳು. ಇನ್ನು ಮಗನ ಸಾವಿನ ಕುರಿತು ತಾಯಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಇದರ ಬೆನ್ನಲ್ಲೆ ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಮೃತ ವ್ಯಕ್ತಿಯ ಪತ್ನಿ ಕಾವ್ಯ ಹಾಗೂ ಅವಳ ಪ್ರಿಯಕರ ಬೀರೇಶ್ ಇಬ್ಬರು ಸೇರಿ ತಲೆಗೆ ಕಬ್ಬಿಣದ ಆಯುಧದಿಂದ ಹೊಡೆದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಹಿಂದೆ ಪತಿಯ ಬಿಟ್ಟು ಪ್ರಿಯಕರ ಬೀರೇಶ್ ಜೊತೆ ಕಾವ್ಯ ಹೋಗಿದ್ದಳು. ಮಗುವಿದ್ದ ಕಾರಣ ಹಿರಿಯರ ರಾಜಿ ಪಂಚಾಯಿತಿಯಿಂದ ಪತಿ ಜೊತೆ ಮತ್ತೆ ಆತನ ಪತ್ನಿ ಸೇರಿದ್ದಳು. ಇದೀಗ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೆ ಪ್ರಿಯಕರನ ಜೊತೆ ಸೇರಿ ಮುಗಿಸಿದ್ದಾಳೆ. ಈ ಕುರಿತು ದಾವಣಗೆರೆ ತಾಲೂಕಿನ ಹದಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ:Ballari: ಪತ್ನಿ ಸೊಸೆ ಮೂವರು ಮಕ್ಕಳನ್ನ ಕೊಲೆ ಮಾಡಿದ ಆರೋಪಿಗೆ ಮರಣದಂಡನೆ ವಿಧಿಸಿದ ಹೈಕೋರ್ಟ್
ಇನ್ನು ಕಾವ್ಯ ನಿಂಗರಾಜ್ ದಾವಣಗೆರೆ ತಾಲೂಕಿನ ಬಿಸಲೇರಿ ಗ್ರಾಮದ ನಿವಾಸಿಗಳು. ಜೂ.9 ರ ರಾತ್ರಿ ಲಿಂಗರಾಜ್ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದ. ಆರೋಪಿಗಳನ್ನ ಬಂಧಿಸಿ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಇವರಿಬ್ಬರಿಗೂ ಐದು ವರ್ಷಗಳ ಹಿಂದೆ ಮದುವೆ ಆಗಿತ್ತು. ಆದ್ರೆ, ಇವಳಿಗೆ ಬೇರೊಬ್ಬನ ಜೊತೆಗೆ ಅನೈತಿಕ ಸಂಬಂಧವಿತ್ತು. ಮಗುವಾದ ಬಳಿಕವು ಸಹ ಆತನ ಜೊತೆಗೆ ಹೋಗಿದ್ದಳು. ಬಳಿಕ ಗ್ರಾಮದ ಜನರು ಮದ್ವೆ ಆಗಿದ್ದು, ಮಗು ಕೂಡ ಇದೆ. ಇಂತಹ ಪರಿಸ್ಥಿತಿಯಲ್ಲಿ ಈ ತಪ್ಪು ಮಾಡುವುದು ಸರಿಯಲ್ಲ ಎಂದು ರಾಜಿ ಪಂಚಾಯಿತಿ ಮಾಡಿ ಲಿಂಗರಾಜ್ ಕಾವ್ಯಳನ್ನ ಒಂದು ಮಾಡಿದ್ದರು. ಎಲ್ಲವೂ ಸರಿಯಾಗಿಯೇ ಇತ್ತು. ಅಂದು ರಾತ್ರಿ ಮನೆಯಲ್ಲಿ ದೇವರ ಕಾರ್ಯವಿತ್ತು. ಹೀಗೆ ದೇವರ ಕಾರ್ಯದ ವೇಳೆ ಲಿಂಗರಾಜ ಸಾವನ್ನಪ್ಪಿದ್ದ. ಅಂದೇ ಕುಟುಂಬ ಸದಸ್ಯರು ಇದು ಕೊಲೆ, ಇದರಲ್ಲಿ ಕಾವ್ಯಾ ಹಾಗೂ ಅವಳ ಪ್ರಿಯಕರ ಕೈವಾಡವಿದೆ ಎಂದು ಆರೋಪಿಸಿದ್ದರು.
ಇದೀಗ ತನಿಖೆ ಬಳಿಕ ಪತ್ನಿ, ಪ್ರಿಯಕರನೇ ಕೊಲೆ ಮಾಡಿರುವುದು ಸಾಭೀತಾಗಿದೆ. ಇನ್ನು ಪತ್ನಿ ತನ್ನ ಪ್ರಿಯಕರನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ಪತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಆದ್ರೆ, ಅವಳು ಮಾತ್ರ ಆತನ ಜೊತೆಗೆ ಹೋಗಬೇಕು ಎಂಬ ನಿರ್ಧಾರಕ್ಕೆ ಬಂದು ಇಂತಹ ಕೃತ್ಯ ಮಾಡಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ