ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಬುದ್ದಿವಂತರಿರುತ್ತಾರೆ. ಖಾಸಗಿ ಶಾಲೆಯಲ್ಲಿ ಮಕ್ಕಳು ಬುದ್ದಿವಂತರಿದ್ದಾರೆ ಎಂಬ ಮಾತೊಂದಿದೆ. ಜೊತೆಗೆ ಬಹುತೇಕ ಜನರು ತಮ್ಮ ಮಕ್ಕಳನ್ನ ಇಂಗ್ಲೀಷ್ ಶಾಲೆಗೆ ಕಳುಹಿಸಿ ಸರ್ಕಾರಿ ಶಾಲೆ ಉಳಿಯುವುದು ಕಷ್ಟ ಎಂದು ಮಾತಾಡುತ್ತಾರೆ. ಆದ್ರೆ ಇಲ್ಲೊಂದು ಗ್ರಾಮದ ಜನರು ಮಾಡಿದ ಪ್ಲಾನ್ ಮಾತ್ರ ವಿಶೇಷವಾಗಿದೆ. ಇಡಿ ರಾಜ್ಯವೇ ಮೆಚ್ಚುವಂತಹ ಕೆಲ್ಸಾ ಮಾಡಿದ್ದಾರೆ. ಇಲ್ಲಿದೆ ಒಂದು ಸಾವಿರ ಠೇವಣಿ ಸ್ಟೋರಿ.
ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂದ್ರೇ ಮೂಗುಮುರಿಯುವ ಪೋಷಕರೇ ಹೆಚ್ಚು, ಸರ್ಕಾರಿ ಶಾಲೆಯಲ್ಲಿ ಎಲ್ಲಾ ಉಚಿತ ಸ್ವಾಮೀ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದರು ಕೂಡ ಪೋಷಕರು ಮಾತ್ರ ಮಕ್ಕಳನ್ನು ದಾಖಲಾತಿ ಮಾಡಲು ಹಿಂದೇಟು ಹಾಕ್ತಾರೆ. ಇದರಿಂದ ಸರ್ಕಾರಿ ಶಾಲೆಗಳ ದಾಖಲಾತಿ ದಿನೇ ದಿನೇ ಕುಸಿತ ಕಂಡಿದೆ. ಆದರೆ ಸರ್ಕಾರಿ ಶಾಲೆಯ ದಾಖಲಾತಿ ಹೆಚ್ಚಿಸಲು ಚನ್ನಗಿರಿ ತಾಲೂಕಿನ ಕೆಂಗಾಪುರ ಎಂಬ ಪುಟ್ಟ ಹಳ್ಳಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಶಾಲೆಗೆ ವಿದ್ಯಾರ್ಥಿಗಳನ್ನು ಸೆಳೆಯಲು ವಿನೂತನ ಪ್ರಯೋಗವೊಂದನ್ನು ಮಾಡ್ತಿದ್ದಾರೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಯತ್ತ ಸೆಳೆಯಲು ಠೇವಣಿ ಎಂಬ ಪ್ರಯೋಗ ಮಾಡಿದ್ದಾರೆ. ‘ಶಿಕ್ಷಣ ಉಚಿತ – ಠೇವಣಿ ಖಚಿತ’ ಎಂಬ ಸದುದ್ದೇಶದ ಘೋಷ ವಾಕ್ಯ ಬಳಕೆ ಮಾಡಿ 2024-25ನೇ ಸಾಲಿಗೆ ಈ ಸರ್ಕಾರಿ ಶಾಲೆಗೆ ದಾಖಲಾಗುವ ಒಂದು ಮಗುವಿನ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ತಲಾ 1,000 ಠೇವಣಿ ಇಡುವುದಾಗಿ ಈಗಾಗಲೇ ಪ್ರಚಾರ ಮಾಡಲು ಕರ ಪತ್ರಗಳನ್ನು ಮಾಡಿಸಿ ಎಲ್ಲ ಗ್ರಾಮಗಳಿಗೆ ಹಂಚಲಾಗುತ್ತಿದೆ.
ವಿದ್ಯಾರ್ಥಿಗಳು ಕಡಿಮೆ ಇರುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿ ಶಾಲೆಯನ್ನು ಮುಚ್ಚುವ ನಿರ್ಧಾರಕ್ಕೆ ಶಿಕ್ಷಣ ಇಲಾಖೆ ಮುಂದಾಗುತ್ತದೆ ಎಂದು ಶಿಕ್ಷಕರು ಹೇಳುತ್ತಿದ್ದಾರೆ. ಇದನ್ನು ಮನಗಂಡ ಕೆಂಗಾಪುರ ಶಾಲೆಯ ಶಿಕ್ಷಕರು ದಾನಿಗಳ ನೆರವಿನಿಂದ ಮಗುವಿನ ಹೆಸರಿನಲ್ಲಿ ಠೇವಣಿ ಇರಿಸುವ ಹೊಸ ಪ್ರಯೋಗಕ್ಕೆ ಕೈಹಾಕಿದ್ದಾರೆ.
ಹೀಗೆ ಸುಭದ್ರವಾಗಿ ಠೇವಣಿ ಇರಿಸಲು ಇದೇ ಶಾಲೆಯ ಹಳೇ ವಿದ್ಯಾರ್ಥಿಯಿಂದ 50 ಸಾವಿರ ರೂಪಾಯಿ ದೇಣಿಗೆ ಸಂದಾಯವಾಗಿದೆ. ಕೆಂಗಾಪುರ ಗ್ರಾಮದ ನಿವಾಸಿಯಾದ ಕಾರಭಾರಿ ಹನುಮಾ ನಾಯ್ಕರವರ ಪುತ್ರ ಎಚ್. ಗಣೇಶ ನಾಯ್ಕ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದವರು. ಇದೀಗ ಸಾಸ್ವೇಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯ ಶಿಕ್ಷಕರ ಮನವಿಗೆ ಸ್ಪಂದಿಸಿದ ಎಚ್. ಗಣೇಶ ನಾಯ್ಕರವರು ದಾಖಲಾತಿ ಹೆಚ್ಚಿಸಲು ಆಯಾ ಮಕ್ಕಳ ಹೆಸರಿನಲ್ಲಿ ಠೇವಣಿ ಇಡಲು ಶಾಲೆಗೆ 50,000 ರೂಪಾಯಿ ಹಣವನ್ನು ತಮ್ಮ ತಂದೆ ಹನುಮಾ ನಾಯ್ಕ ಕಾರಭಾರಿ ಅವರ ಹೆಸರಿನಲ್ಲಿ ದೇಣಿಗೆ ನೀಡಲಿದ್ದಾರೆ.
ಈ ಹಣವನ್ನು ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸಲಾಗುವುದು ಎಂದು ಮುಖ್ಯಶಿಕ್ಷಕ ಜಿ.ಬಿ. ಚಂದ್ರಾಚಾರಿ, ಸಹ ಶಿಕ್ಷಕ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ. ಇದಲ್ಲದೆ ಶ್ರೀ ಡಾ.ರಾಜಾನಾಯ್ಕ್ ಎಸ್ ಇವರು ಶಾಲಾ ಮೈದಾನದ ಅಭಿವೃದ್ಧಿಗಾಗಿ ಸುಮಾರು 2 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮಾಡಿಸಲು ಮುಂದಾಗಿದ್ದಾರೆ. ಶಿವನಾಯ್ಕ್ ಎಂಬುವರು ಶಾಲಾಭಿವೃದ್ಧಿಗಾಗಿ 25,000 ಕೊಡಲು ಒಪ್ಪಿರುತ್ತಾರೆ. ಶಿಕ್ಷಣ ಉಚಿತ ಠೇವಣಿ ಖಚಿತ ಎಂಬ ಘೋಷ ವಾಕ್ಯದ ಮೇಲೆ ಈ ಪ್ರಯತ್ನ ಮಾಡ್ತಿದ್ದೇವೆ, ಇದೀಗ ಶಾಲೆಯ ದಾಖಲಾತಿ 27 ಮಕ್ಕಳಿದ್ದು, ಈ ಬಾರಿ 2024-25 ಸಾಲೀನಲ್ಲಿ ದಾಖಲಾತಿ ಹೆಚ್ಚಿಸಲು ಹಾಗೂ ಸರ್ಕಾರಿ ಶಾಲೆ ಉಳಿಸಲು ಈ ಪ್ರಯೋಗ ಶುರುವಾಗಿದೆ. ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದೆ.
ಇದೇ ಶಾಲೆಯ ಹಳೇ ವಿದ್ಯಾರ್ಥಿಗಳು, ಓದಿದ ನಮ್ಮೂರು ಶಾಲೆಯ ದಾಖಲಾತಿ ಕಡಿಮೆ ಆಗುತ್ತಿದ್ದರಿಂದ ಅದನ್ನು ಹೆಚ್ಚಿಸುವ ಸಲುವಾಗಿ ಈ ಪ್ರಯತ್ನ ಮಾಡ್ತಿದ್ದೇವೆ, ತಮ್ಮ ತಂದೆ ಹನುಮ ನಾಯ್ಕ ಕಾರಭಾರಿ ರವರ ಹೆಸರಿನಲ್ಲಿ ಐವತ್ತು ಸಾವಿರ ಹಣವನ್ನು ಕೊಡುತ್ತಿದ್ದೇನೆ. ಸರ್ಕಾರಿ ಶಾಲೆಗೆ ಬರುವ ಮಕ್ಕಳು ಇದ್ದಕ್ಕಿದ್ದಂತೆ ಖಾಸಗಿ ಶಾಲೆಯತ್ತ ಮುಖ ಮಾಡ್ತಿದ್ದು, ಈ ಪ್ರಯತ್ನಕ್ಕೆ ಕೈ ಹಾಕಿದ್ದೇವೆ ಎಂದರು. ಸರ್ಕಾರಿ ಶಾಲೆಗಳನ್ನ ಜೀವಂತ ಇಡಲು ನಿರಂತರ ಪ್ರಯತ್ನಗಳು ಗ್ರಾಮದಲ್ಲಿ ನಡೆಯುತ್ತಿವೆ. ಇದೊಂದು ಹೊಸ ವಿಚಾರ್ ಅಂದ್ರೆ ತಪ್ಪಾಗಲಿಕ್ಕಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Mon, 11 March 24