ದಾವಣಗೆರೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಹೋರಾಟ ನಡೆಯುತ್ತಿದೆ. ಈ ಸಂಬಂಧ ನಾಳೆ ಬೆಂಗಳೂರಿನಲ್ಲಿ 11 ಗಂಟೆಗೆ ಜಂಟಿ ಅಧಿವೇಶನ ಇದೆ. ನಾಳೆ ಪಂಚಮಸಾಲಿ ಸಮುದಾಯದ ಮುಖಂಡರ ಸಭೆ ಇದೆ. ನಮ್ಮ ಸಮುದಾಯಕ್ಕೆ ಮೀಸಲಾತಿ ವಿಚಾರ ಅಂತಿಮವಾಗುತ್ತೆ. ನಾಳೆ ಬೆಳಗ್ಗೆ 11 ಗಂಟೆಯ ಒಳಗೆ ಸಕಾರಾತ್ಮಕ ಉತ್ತರ ಬರುವ ನಿರೀಕ್ಷೆ ಇದೆ ಎಂದು ದಾವಣಗೆರೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಿಂದ ಸಕಾರಾತ್ಮಕ ಉತ್ತರ ಬರುವ ನಿರೀಕ್ಷೆ ಇದೆ. ಒಂದು ವೇಳೆ ನಾಳೆ ಸ್ಪಷ್ಟ ನಿಲುವು ತಿಳಿಸದಿದ್ದರೆ ಹೋರಾಟ ಮಾಡುತ್ತೇವೆ. ಬೆಂಗಳೂರಿನಲ್ಲಿ 30 ಲಕ್ಷ ಜನರನ್ನ ಸೇರಿಸಿ ಬೃಹತ್ ಧರಣಿ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ದಾವಣಗೆರೆಯಲ್ಲಿ ನಡೆದ ಪ್ರತಿಜ್ಞಾ ಪಂಚಾಯತ್ ಸಮಾವೇಶದ ವೇದಿಕೆಯಲ್ಲಿ ಸ್ವಾಮೀಜಿ ಮಾತನಾಡಿದ್ದಾರೆ.
ಮುಖ್ಯಮಂತ್ರಿ ಗಳು ನನಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈಗಾಗಲೇ ಹಲವು ಶಾಸಕರು ಸಚಿವರು ಕಾಲ್ ಮಾಡಿದ್ದಾರೆ. ಯಡಿಯೂರಪ್ಪನವರು ನಮ್ಮನ್ನು ಕೈಬಿಟ್ಟೆರು. ಆದರೆ, ಬೊಮ್ಮಾಯಿ ನಮ್ಮನ್ನು ಕೈಬಿಡೋಲ್ಲ ಎಂಬ ವಿಶ್ವಾಸ ಇದೆ. ಒಂದು ವೇಳೆ ನಾಳೆ ಮೀಸಲಾತಿ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ತಾಳದಿದ್ದರೆ ನಾಳೆಯಿಂದಲೇ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಹೋರಾಟ ಹಾಗೂ ಮೀಸಲಾತಿಗೆ ಆಗ್ರಹಿಸಿ ದಾವಣಗೆರೆಯಲ್ಲಿ ಸಾಂಸ್ಕೃತಿಕ ಜಾಥಾ ನಡೆಸಲಾಗಿದೆ. ತೆರೆದ ವಾಹನದಲ್ಲಿ ಬಸವ ಜಯಮೃತ್ಯುಂಜಯಶ್ರೀ ಮೆರವಣಿಗೆ ಮಾಡಲಾಗಿದೆ. ಸಾಂಸ್ಕೃತಿಕ ಜಾಥಾದಲ್ಲಿ ಮಹಿಳೆಯರಿಂದ ಭರ್ಜರಿ ಡ್ಯಾನ್ಸ್ ಹಾಗೂ ಮೆರವಣಿಗೆಯಲ್ಲಿ 3 ಆನೆ, ಕುದುರೆ, ವಿವಿಧ ಕಲಾ ತಂಡಗಳ ಸಾಥ್ ನೀಡಿವೆ. ವಿವಿಧ ಗೊಂಬೆ ವೇಷಧಾರಿಗಳು ಜನರನ್ನು ರಂಜಿಸಿವೆ. ಡೊಳ್ಳು, ಜಾಂಜ್ ಮೇಳಕ್ಕೆ ಜನರು ಹೆಜ್ಜೆ ಹಾಕಿದ್ದಾರೆ.
ನಾಳೆಯೇ ತೀರ್ಮಾನ ಕೈಗೊಳ್ಳುವುದು ಕಷ್ಟ: ಅರವಿಂದ್ ಬೆಲ್ಲದ್
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕುರಿತು ಚರ್ಚಿಸಿದ್ದೇನೆ. ನಾನು ಸಿಎಂ ಜೊತೆ ಹಲವು ಬಾರಿ ಚರ್ಚೆಯನ್ನ ಮಾಡಿದ್ದೇನೆ. ಮೀಸಲಾತಿ ಪ್ರಮಾಣ ಶೇಕಡಾ 50 ಮೀರದಂತೆ ಮೀಸಲಾತಿ ನೀಡುವ ಬಗ್ಗೆ ಹಾಗೂ ಸಮಾಜಕ್ಕೆ ಹೇಗೆ ನ್ಯಾಯ ಕೊಡಬಹುದೆಂದು ಚರ್ಚಿಸಿದ್ದೇನೆ. ನಾಳೆ ಬೆಂಗಳೂರಿನಲ್ಲಿ ಸಮಾಜದ ಮುಖಂಡರ ಸಭೆ ಇದೆ ಎಂದು ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ ನೀಡಿದ್ದಾರೆ.
ನಾಳೆಯೊಳಗೆ ಸಿಎಂ ತೀರ್ಮಾನಕ್ಕೆ ಬರುವುದು ಕಷ್ಟವಾಗುತ್ತೆ. ಏಕೆಂದರೆ ಕುಲಶಾಸ್ತ್ರೀಯ ಅಧ್ಯಯನ ನಡೆಯಬೇಕಿದೆ. ಕುಲಶಾಸ್ತ್ರೀಯ ಅಧ್ಯಯನಕ್ಕೆ ಪ್ರಕ್ರಿಯೆಗಳನ್ನ ಆರಂಭಿಸಿದೆ. ಹಲವಾರು ಸಮುದಾಯಗಳು ಮೀಸಲಾತಿಯನ್ನ ಕೇಳುತ್ತಿವೆ. ಆ ಕಾರಣಕ್ಕೆ ನಾಳೆಯೇ ತೀರ್ಮಾನ ಕೈಗೊಳ್ಳುವುದು ಕಷ್ಟ ಎಂದು ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿಗಳಿಗೆ ಮೀಸಲಾತಿ ನೀಡಲು ಸರ್ಕಾರ ಮರೆತಿದೆ ಎಂದ ಜಯಮೃತ್ಯುಂಜಯ ಸ್ವಾಮೀಜಿ, ನೆನಪಿದೆ ಎಂದ ಮುರುಗೇಶ್ ನಿರಾಣಿ
ಇದನ್ನೂ ಓದಿ: ಸರ್ಕಾರದಿಂದ ಭರವಸೆ ಸಿಕ್ಕಲ್ಲಿ ಮೀಸಲಾತಿ ಹೋರಾಟ ಮುಂದೆ ಹಾಕ್ತೀವಿ: ಬಸನಗೌಡ ಪಾಟೀಲ್ ಯತ್ನಾಳ್
Published On - 8:40 pm, Thu, 30 September 21